“ಕಣ್ಣಾ ಮುಚ್ಚೆ ಕಾಡೇಗೂಡೇ” ಚಿತ್ರ ತೆರೆಗೆ ಬರಲು ಸಿದ್ದತೆ

ಕನ್ನಡ ಸಿನಿಲೋಕದಲ್ಲಿ ಹೊಸಬರ ಚಿತ್ರಗಳು ಸುದ್ದಿ ಮಾಡೋದು ಹೊಸ ವಿಷಯವೇನು ಅಲ್ಲ. ಈಗ ಆ ಸಾಲಿಗೆ ಮತ್ತೊಂದು ಸಿನಿಮಾ ಸೇರಿಕೊಳ್ಳುತ್ತಿದ್ದು ಶೀರ್ಷಿಕೆಯ ಮೂಲಕವೇ ಗಮನ ಸೆಳೆಯುತ್ತಿದೆ. ಹೌದು. “ಕಣ್ಣಾಮುಚ್ಚೆ ಕಾಡೇಗೂಡೇ” ಹೆಸರಿನ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.

ಚಿತ್ರದ ಮೊದಲ ಪೋಸ್ಟರ್ ನ್ನು ಸುಖಾಂಕ್ಷ ಚಾರಿಟಬಲ್ ಟ್ರಸ್ಟ್ ಅನಾಥಾಶ್ರಮದಲ್ಲಿ ಹಾಗೂ ಕುರುಬರಹಳ್ಳಿಯ ರಾಜ್ ಕುಮಾರ್ ಪ್ರತಿಮೆ ಎದುರು ಆಟೋ ಡ್ರೈವರುಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದೆ.ಸೆಲೆಬ್ರಿಟಿಗಳ ಕೈಯಲ್ಲಿ ಹೊಸಬರು ಪೋಸ್ಟರ್ ಬಿಡುಗಡೆ ಮಾಡಿಸೋದು ಸಹಜವಾಗಿರುವಾಗ ಅನಾಥ ಮಕ್ಕಳು ಹಾಗೂ ಆಟೋ ಡ್ರೈವರ್ಸನ್ನು ಈ ಶುಭಾರಂಭಕ್ಕೆ ಆಯ್ಕೆ ಮಾಡಿಕೊಂಡಿರುವುದು ಮತ್ತೊಂದು ವಿಶೇಷ.

ಈ ಸಿನಿಮಾದ ಬಗ್ಗೆ ಹೇಳಬೇಕೆಂದರೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು ಒಂದೊಳ್ಳೆ ಕಮರ್ಷಿಯಲ್ ಸಿನಿಮಾ ಆಗುವ ಲಕ್ಷಣಗಳನ್ನು ಹೊಂದಿದೆ ಎನ್ನುತ್ತಿದ್ದೆ ಚಿತ್ರತಂಡ. ಡಾರ್ಲಿಂಗ್ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದ್ದು, ಅನಿತಾ ವೀರೇಶ್ ಕುಮಾರ್ ಮತ್ತು ಮೀನಾಕ್ಷಿ ರಾಜಶೇಖರ್ ಹೂಡಿಕೆ ಮಾಡಿದ್ದಾರೆ.

ನಟರಾಜ್ ಕೃಷ್ಣೇಗೌಡ ನಿರ್ದೇಶಕರಾಗಿದ್ದಾರೆ. ದೀಪಕ್ ಕುಮಾರ್ ಜೆ ಕೆ ಛಾಯಾಗ್ರಹಣ, ಧನುಷ್ ಎಲ್ ಬೇದ್ರೆ ಸಂಕಲನ ಹಾಗೂ ಸಂತೋಷ್ ಜೋಶ್ವ ಮತ್ತು ವಿಜಿತ್ ಕೃಷ್ಣ ಅವರ ಸಂಗೀತವಿದ್ದು ಜನರನ್ನು ಚಿತ್ರಮಂದಿರದತ್ತ ಸೆಳೆಯಲು ಸಿನಿಮಾ ಸಿದ್ಧವಾಗುತ್ತಿದೆ.

ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಚಂದ್ರಕಲಾ ರಾವ್ ಉಡುಪಿ, ಜ್ಯೋತಿಶ್ ಶೆಟ್ಟಿ, ಪುಷ್ಪರಾಜ್ ಬೋಳೂರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದಲ್ಲಿ ಮುಖ್ಯಭೂಮಿಕೆಲ್ಲಿದ್ದ ಅಥರ್ವ ಪ್ರಕಾಶ ನಾಯಕನಟರಾಗಿದ್ದಾರೆ.

ಪ್ರಾರ್ಥನಾ ಚಿತ್ರದ ನಾಯಕಿ. ಇನ್ನೊಂದು ಮುಖ್ಯ ವಿಷಯ ಎಂದರೆ ರಾಘವೇಂದ್ರ ರಾಜ್‍ಕುಮಾರ್‍ರವರು ಈ ಸಿನಿಮಾದಲ್ಲಿ ಬಹುಮುಖ್ಯವಾದ ಹಾಗೂ ಕಥೆಗೆ ತಿರುವು ನೀಡುವಂತಹ ಪಾತ್ರ ನಿರ್ವಹಿಸಿದ್ದು ಹೊಸಬರೊಂದಿಗೆ ಕೈ ಜೋಡಿಸಿದ್ದಾರೆ. ಇವರುಗಳ ಜೊತೆಗೆ ವೀರೇಶ್ ಕುಮಾರ್, ಅರವಿಂದ್ ಬೋಳಾರ್, ರವಿರಾಮ ಕುಂಜ, ಸುರೇಶ್ ರೈ ಮೊದಲಾದವರು ತೆರೆಹಂಚಿಕೊಂಡಿದ್ದಾರೆ