ರೂಪಾ ಅಯ್ಯರ್ ನಿರ್ದೇಶನದ “ಅಜಾದ್ ಭಾರತ್” ಚಿತ್ರದಲ್ಲಿ ಮಹಾರಾಷ್ಟ್ರ ಸಿಎಂ ಪತ್ನಿ ಗಾಯನ
ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ನಟಿ, ನಿರ್ದೇಶಕಿ ರೂಪ ಅಯ್ಯರ್ ನಿರ್ದೇಶನದ “ಆಜಾದ್ ಭಾರತ್” ಹಿಂದಿ ಚಿತ್ರ ಜನವರಿ 2 ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಅವರ ಪತ್ನಿ ಅಮೃತಾ ಪಢ್ನವಿಸ್ ಗೀತೆಗೆ ಹಾಡು ಹಾಡಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ

ನೀರಾ ಆರ್ಯ’ ಎಂಬ ಹೆಸರಿನಿಂದ ಆರಂಭವಾದ ಚಿತ್ರದ ಶೀರ್ಷಿಕೆ ಈಗ “ಆಜಾದ್ ಭಾರತ್” ಎಂದು ಬದಲಿಸಲಾಗಿದೆ. ಈ ಚಿತ್ರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಅರ್ಪಣೆ ಮಾಡಲಾಗಿದೆ. ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿಯ ಕಥೆ ‘ಆಜಾದ್ ಭಾರತ್’ ಚಿತ್ರದಲ್ಲಿದೆ.
ನೇತಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಮೂರು ಮಹಿಳಾ ಮುಖ್ಯ ಪಾತ್ರಗಳಿದ್ದು, ನೀರಾ ಆರ್ಯ ಪಾತ್ರದಲ್ಲಿ ರೂಪಾ ಅಯ್ಯರ್, ಹಿತ ಚಂದ್ರಶೇಖರ್, ದುರ್ಗಾ ಪಾತ್ರದಲ್ಲಿ ನಟಿಸಿದ್ದೇವೆ. ಸರಸ್ವತಿ ರಾಜಾಮಣಿ ಎಂಬ ಪಾತ್ರದಲ್ಲಿ ಜನಪ್ರಿಯ ನಟಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸುರೇಶ್ ಒಬೆರಾಯ್, ಬಿರಾದಾರ್, ಸುಚೇಂದ್ರ ಪ್ರಸಾದ್, ಜೀ ವಾಹಿನಿಯ ಮುಖ್ಯಸ್ಥರಾದ ಸುಭಾಷ್ ಚಂದ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕಿ ರೂಪಾ ಅಯ್ಯರ್, ಚಿತ್ರಕ್ಕೆ ಪತಿ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಸಂಕಲನವಿದ್ದು ಜಯಗೋಪಾಲ್ ಹಾಗೂ ರಾಜೇಂದ್ರ ರಾಜನ್ ನಿರ್ಮಿಸಿದ್ದೇವೆ. ಜನವರಿ ತಿಂಗಳನ್ನು ಸುಭಾಷ್ ಚಂದ್ರ ಬೋಸ್ ಜನ್ಮ ಮಾಸ ಎಂದು ಆಚರಿಸುತ್ತಾರೆ. ಹಾಗಾಗಿ ಜನವರಿ ಎರಡನೇ ತಾರೀಖು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಚಿತ್ರವನ್ನು ನಿರ್ಮಾಣ ಮಾಡುವ ಮೊದಲು ಸುಭಾಷ್ ಚಂದ್ರ ಬೋಸ್‍ಕುಟುಂಬದವರನ್ನು ಸಂಪರ್ಕ ಮಾಡಿ ಅನೇಕ ಮಾಹಿತಿ ಪಡೆದುಕೊಂಡಿದ್ದೇನೆ. ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಚಿತ್ರ ತೋರಿಸುವ ಯೋಚನೆ ಇದೆ ಎಂದರು
ಹಿರಿಯ ನಟ ಸುಚೇಂದ್ರ ಪ್ರಸಾದ್ ಮಾತನಾಡಿ ನಟಿ ನಿರ್ದೇಶಕಿ ರೂಪಾ ಅಯ್ಯರ್ ಒಂದು ಕಾಲದ ಹೇಳದೇ ಹೋದ ಘಟನೆಗಳನ್ನು ತೆರೆಯ ಮೇಲೆ ಹೇಳಲು ಹೊರಟ್ಟಿದ್ದಾರೆ. ಇದಕ್ಕಾಗಿ ಬಹಳ ವರ್ಷಗಳ ಪ್ರಯತ್ನ ಪಟ್ಟಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಅವರ ರಾಷ್ಟ್ರಪ್ರೇಮ. ಎಲ್ಲರೂ ಈ ಚಿತ್ರ ನೋಡಿ ಎಂದರು

ನಟಿ ಹಿತ ಚಂದ್ರಶೇಖರ್ ಮಾತನಾಡಿ ಇಂತಹ ದೇಶಪ್ರೇಮ ಸಾರುವ ಚಿತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ. ದುರ್ಗಾ ಪಾತ್ರದಲ್ಲಿ ಅಭಿನಯಿಸಿರುವುದಾಗಿ ಹೇಳಿದರು.
ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಮಾತನಾಡಿ ಚಿತ್ರದಲ್ಲಿ ಏಳು ಹಾಡುಗಳಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತ ಫಡ್ನವಿಸ್ ಚಿತ್ರದ ಹಾಡು ಹಾಡಿದ್ದಾರೆ. ಯಶ್ ರಾಜ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆದಿದೆ ಎಂದರು.
ನಿರ್ಮಾಪಕ ಜಯಗೋಪಾಲ್ ಹಾಗೂ ಸಂಕಲನಕಾರ ಶ್ರೀ ಕ್ರೇಜಿಮೈಂಡ್ಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

