ಗಾಯಕ ನವೀನ್ ಸಜ್ಜು ನಟನೆ “ಲೋ ನವೀನ” ಚಿತ್ರದ “ಕೋಣಾಣೆ” ಹಾಡು ಬಿಡುಗಡೆ
ಗಾಯಕನಾಗಿ ಕನ್ನಡಿಗರ ಮನ ಗೆದ್ದಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ “ಲೋ ನವೀನ”. ಚಿತ್ರದ “ಕೋಣಾಣೆ” ಹಾಡಿನ ಬಿಡುಗಡೆ ಆಗಿದ್ದು ಗಮನ ಸೆಳೆದಿದೆ. ಮಾಜಿ ಶಾಸಕರಾದ ಎ.ಮಂಜು, ಪುಟ್ಟರಾಜು, ಅಮರನಾಥ ಗೌಡ, ವಿಶ್ವಾಮಿತ್ರ, ಜಿ.ಟಿ.ಮಾಲ್ನ ಆನಂದ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮುಂತಾದ ಗಣ್ಯರು ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ

ಅಪ್ಪಟ ಜನಪದ ಶೈಲಿಯ ಈ ಹಾಡನ್ನು ಮೈಸೂರಿನ ಎಚ್ ಡಿ ಕೋಟೆಯ ಗ್ರಾಮೀಣ ಪ್ರತಿಭೆಗಳಾದ ಚಮ್ಮಮ್ಮ ಹಾಗೂ ಲಕ್ಷಮ್ಮ ಹಾಡಿದ್ದಾರೆ. ನವೀನ್ ಸಜ್ಜು ಸಹ ಗಾಯನಕ್ಕೆ ಜೊತೆಯಾಗಿದ್ದಾರೆ. ಅನಿವಾಸಿ ಭಾರತೀಯರಾದ ಬೆನ್ ಚಿಕ್ಕಸ್ವಾಮಿ ಅರ್ಪಿಸುವ , ಕೀರ್ತಿಸ್ವಾಮಿ ನಿರ್ಮಿಸಿರುವ ಹಾಗೂ ಧನುರ್ಧಾರಿ ಪವನ್ ನಿರ್ದೇಶನದ “ಲೋ ನವೀನ” ಚಿತ್ರದ ಮೊದಲ ಹಾಡು ಇದ್ದಾಗಿದ್ದು, ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ.
ನಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಮಾತನಾಡಿ ಮೂಲತಃ ಮಳವಳ್ಳಿಯ. ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ.ಪ್ರತಿಭೆ ಗುರುತಿಸಿದ್ದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹಾಗೂ ನಿರ್ದೇಶಕ ಪವನ್ ಕುಮಾರ್ “ಲೂಸಿಯಾ” ಚಿತ್ರದಲ್ಲಿ ಅವಕಾಶ ಕೊಟ್ಟರು. ಅಲ್ಲಿಂದ ನನ್ನ ಜರ್ನಿ ಆರಂಭವಾಯಿತು. ಆನಂತರ ಸಾಕಷ್ಟು ಚಿತ್ರಗಳಲ್ಲಿ ಹಾಡಿದ್ದೇನೆ., ಸುನೀಲ್ ಮೈಸೂರು ಹಾಗೂ ಅನೇಕ ಸ್ನೇಹಿತರು ಸೇರಿ ಮನೋರಂಜನೆಯೇ ಪ್ರಧಾನವಾಗಿರುವ ಚಿತ್ರದ ಕಥೆ ಬರೆದಿದ್ದೇವೆ. ಅಮೇರಿಕಾಗೆ ಒಮ್ಮೆ ಹೋಗಿದ್ದಾಗ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ ಭೇಟಿ ಮಾಡಿದೆ. ಚಿತ್ರದ ಬಗ್ಗೆ ಹೇಳಿದಾಗ ಅವರು ನಾವೇ ಚಿತ್ರಕ್ಕೆ ಬಂಡವಾಳ ಹೂಡುತ್ತೇವೆ ಎಂದು ಬಂಡವಾಳ ಹಾಕಿದ್ದಾರೆ
ಐದು ಹಾಡುಗಳು ಚಿತ್ರದಲ್ಲಿದ್ದು, ಮೊದಲ ಹಾಡಾಗಿ “ಕೋಣಾಣೆ” ಬಿಡುಗಡೆಯಾಗಿದೆ. ಚಿತ್ರದ ಲೊಕೇಶನ್ ಹುಡುಕಾಟದ ಸಲುವಾಗಿ ಎಚ್ ಡಿ ಕೋಟೆಯ ಹಿರೇನಂದಿ ಗ್ರಾಮಕ್ಕೆ ಹೋಗಿದ್ದಾU ಚಮ್ಮಮ್ಮ ಹಾಗೂ ಲಕ್ಷಮ್ಮ ಹೊಲದಲ್ಲಿ ಕೆಲಸ ಮಾಡುತ್ತಾ ಹಾಡುತ್ತಿದ್ದುದ್ದನ್ನು ನೋಡಿದೆ. ಚಿತ್ರದ ಹಾಡೊಂದನ್ನು ಹಾಡಿಸಬೇಕು ಎಂದು ನಿರ್ಧರಿಸಿದೆ. ಅಂದುಕೊಂಡಂತೆ ಅವರಿಂದಲೇ ಈ ಹಾಡು ಹಾಡಿಸಿದ್ದೇನೆ ಎಂದು ಹೇಳಿದರು

ನಿರ್ಮಾಪಕಿ ಕೀರ್ತಿ ಸ್ವಾಮಿ ಮಾತನಾಡಿ ನಾನು ಬೆಂಗಳೂರಿನವಳು. ಪತಿ ಮಳವಳ್ಳಿಯವರು. ಮೂವತ್ತೈದು ವರ್ಷಗಳಿಂದ ಅಮೇರಿಕಾದಲ್ಲಿದ್ದೇವೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಕನ್ನಡ ಎಂದರೆ ಬಹಳ ಪ್ರೀತಿ. ಹೀಗೆ ಕಾರ್ಯಕ್ರಮವೊಂದರಲ್ಲಿ ನವೀನ್ ಸಜ್ಜು ಅವರನ್ನು ಭೇಟಿಯಾದಾಗ ಈ ಚಿತ್ರದ ಕುರಿತು ಹೇಳಿದರು. ಹಳ್ಳಿಯ ಸೊಗಡಿನ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು ಎಂದು ತಿಳಿಸಿದರು.
ಬೆನ್ ಚಿಕ್ಕಸ್ವಾಮಿ ಮಾತನಾಡಿ ಮಳವಳ್ಳಿಯವನು. ಚಿಕ್ಕವಯಸ್ಸಿನಲ್ಲೇ ಇದೇ ತರಹದ ಗ್ರಾಮೀಣ ಜನಪದ ಹಾಡುಗಳನ್ನು ಕೇಳುತ್ತಾ ಬೆಳೆದವನು. ನಲವತ್ತು ವರ್ಷಗಳಿಂದ ಅಮೇರಿಕಾದಲ್ಲಿದ್ದರೂ ಕನ್ನಡವನ್ನೇ ಮಾತನಾಡುತ್ತೇನೆ. ದಿನ ಮುದ್ದೆ , ಉಪ್ಸಾರು ತಿನ್ನುತ್ತೇನೆ. ಮನೆಗೆ ಬಂದವರಿಗೂ ನಾನೇ ಮಾಡಿ ಕೊಡುತ್ತೇನೆ. ಹಾಗಾಗಿ ನವೀನ್ ಸಜ್ಜು ಹಳ್ಳಿಯ ಸೊಗಡಿನ ಕಥೆ ಹೇಳಿದಾಗ ಬಹಳ ಖುಷಿಯಾಯಿತು ಎಂದು ಹೇಳಿದರು.

ನಿರ್ದೇಶಕ ಧನುರ್ಧಾರಿ ಪವನ್ ಮಾತನಾಡಿ ಮೊದಲ ನಿರ್ದೇಶನದ ಚಿತ್ರ. ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ತಿಳಿಸಿದರು. ಛಾಯಾಗ್ರಾಹಕ ರಿಷಿಕೇಶ್ ಸೇರಿದಂತೆ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ನವೀನ್ ಸಜ್ಜು ಅನೇಕ ಜನಪ್ರಿಯ ಗೀತೆಗಳನ್ನು ಹಾಡಿ ನೆರೆದಿದವರನ್ನು ರಂಜಿಸಿದರು.

