ಮಾರ್ಡನ್ ರೈತ ಕಮ್ ನಟ “ಶಶಿ” ಅಭಿನಯದ ಮೆಹಬೂಬಾ ಚಿತ್ರ ಮಾಚ್ 15ಕ್ಕೆ ತೆರೆಗೆ : ರೈತರ ಬೆಂಬಲ
ಮಾರ್ಡನ್ ರೈತ ಶಶಿ ಮೆಹಬೂಬಾ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್‍ಗೆ ಹೆಜ್ಜೆ ಇಟ್ಟಿದ್ದಾರೆ. ಅವರ ಚೊಚ್ಚಲ ಕನಸು ಪ್ರೇಕ್ಷಕರ ಮಡಿಲು ಸೇರೋದಿಕ್ಕೆ ಕೆಲ ದಿನಗಳಷ್ಟೇ ಬಾಕಿ ಇದೆ. ಮಾರ್ಚ್ 15ಕ್ಕೆ ಮೆಹಬೂಬಾ ಮೆರವಣಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಟ್ರೇಲರ್ ಮೂಲಕ ಚಿತ್ರತಂಡವೀಗ ಕುತೂಹಲ ಹೆಚ್ಚಿಸಿದೆ.
ಶಶಿ ಹೊಸ ಪ್ರಯತ್ನಕ್ಕೆ ದೇಶದ ಬೆನ್ನೆಲುಬು ರೈತರು ಸಾಥ್ ಕೊಟ್ಟಿದ್ದಾರೆ. ಟ್ರೇಲರ್ ರಿಲೀಸ್ ಮಾಡಿದ ಅನ್ನದಾತರು ಶಶಿ ಕೆಲಸಕ್ಕೆ ಜೊತೆಯಾಗಿ ನಿಂತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಮೆಹಬೂಬಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅನ್ನದಾತರು ಆಗಮಿಸಿದ್ದರು. ಶಶಿ ಅವರಿಗೆ ದೃಷ್ಟಿ ತೆಗೆದು ಚಪ್ಪಾಲಿ ಬಿಟ್ಟು ಹಸಿರು ಸೇನೆ ಟ್ರೇಲರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.
ಬಳಿಕ ಮಾತನಾಡಿದ ನಿರ್ದೇಶಕ ಅನೂಪ್ ಆಂಟೋನಿ , ನಿಮ್ಮ ಆಶೀರ್ವಾದ ನಮ್ಮ ಇಡೀ ತಂಡದ ಮೇಲೆ ಇರಲಿ. ಇದೇ 15ರಂದು ಕರ್ನಾಟಕದಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ. ಸ್ವಲ್ಪ ಭಯ ಇದೆ. ಪರಿಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ ಎಂದರು.
ನಟ ಶಶಿ ಮಾತನಾಡಿ, ನನ್ನ ರೈತಾಪಿ ವರ್ಗದವರು, ಬಿಗ್ ಬಾಸ್ ನಲ್ಲಿ ನನ್ನನ್ನು ನೋಡಿದವರು. ನಾನು ಯಾರಿಗೆ ಪರಿಚಯ ಇದ್ದೇನೆ. ನೀವು ನನ್ನ ಫಸ್ಟ್ ಸರ್ಕಲ್ ಆಗಿರುತ್ತೀರಾ. ನೀವು ನನ್ನ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಬೇಕು ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ನೀವು ಚೆನ್ನಾಗಿದೆ ಎಂದು ಬೇರೆಯವರಿಗೆ ಹೇಳಿದರೆ ಸಾಮಾನ್ಯ ಪ್ರೇಕ್ಷಕರ ಬಂದು ನೋಡುತ್ತಾರೆ. ನೀವು ಬಂದು ನೋಡಿಲ್ಲ ಎಂದರೆ ಒಳ್ಳೊಳ್ಳೆ ಸಿನಿಮಾಗಳು ನಿಲ್ಲುವುದು ಕಷ್ಟವಾಗುತ್ತದೆ. ನಾನು ಈ ಚಿತ್ರದಲ್ಲಿ ಒಬ್ನೇ ಫ್ರೆಶರ್. ಎಲ್ಲರೂ ಘಟಾನುಘಟಿಗಳು ಇದ್ದಾರೆ. ನಾವು ಚಿತ್ರ ಮಾಡಿರುವುದು ಎಂಟು ಕೋಟಿ ಜನರಿಗೆ. ಇವರಿಗೆ ಹೊಸಬರ ಕನೆಕ್ಟ್ ಆಗಬೇಕು ಎಂದರೆ ಕಂಟೆಂಟ್ ಮೂಲಕ ಕನೆಕ್ಟ್ ಆಗಬೇಕು. ನಾನು ಸಿನಿಮಾ ಹೀರೋ ಆಗಲ್ಲ. ಕಂಟೆಂಟ್ ಹೀರೋ ಎಂದರು.
ಸರ್ವಧರ್ಮ ಸಾಮರಸ್ಯ ಸಾರುವ ಮೆಹಬೂಬಾ ಸಿನಿಮಾದಲ್ಲಿ ಶಶಿಗೆ ನಾಯಕಿಯಾಗಿ ಪಾವನ ಮಿಂಚಿದ್ದಾರೆ. ಅನೂಪ್ ಆಂಟೋನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದಕ್ಷ್ ಎಂಟರ್ಟೇನ್ಮೆಂಟ್ಸ್' ಸಹಯೋಗದಲ್ಲಿ
ಬಾಲಾಜಿ ಮೋಷನ್ ಪಿಕ್ಚರ್ಸ್’ ಬ್ಯಾನರ್ ಮೂಲಕ `ಮೆಹಬೂಬಾ’ ಚಿತ್ರವನ್ನು ಶಶಿ ನಿರ್ಮಾಣ ಮಾಡಿದ್ದಾರೆ. ಕೇರಳದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ತಯಾರಿಸಲಾಗಿದೆ.
ಮ್ಯಾಥ್ಯೂಸ್ ಮನು ಅವರು `ಮೆಹಬೂಬಾ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ಮಾಸ್ ಮಾದ ಅವರ ಸಾಹಸ ನಿರ್ದೇಶನ, ಕಲೈ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ಮೂಲಕ ಕೌತುಕ ಹೆಚ್ಚಿಸಿರುವ ಮೆಹಬೂಬಾ ಸಿನಿಮಾ ಮಾರ್ಚ್ 15ಕ್ಕೆ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡಲಿದೆ.