ಪೌರಕಾರ್ಮಿಕರ ಬದುಕು ಕಟ್ಟಿಕೊಡುವ ಸಿನಿಮಾ “ಗಾರ್ಡನ್”ಗೆ ಮುಹೂರ್ತ
ನಗರದ ಸ್ಚಚ್ಚತೆಯಲ್ಲಿ ಪೌರಕಾರ್ಮಿಕರ ಪಾತ್ರ ಹಿರಿದು, ಕೊಳೆಗೇರಿಗಳನ್ನು ಶುಚಿಗೊಳಿಸಿ ನಗರದ ಸೌಂದರ್ಯ ಹೆಚ್ಚಿಸುವಲ್ಲಿ ಪಛರಕಾರ್ಮಿಕ ಪಾತ್ರ ಹಿರಿದು. ಇಂತಹ ಜನರ ಬದುಕಿನ ಕಥೆ ಹೇಳುವ “ಗಾರ್ಡನ್” ಸಿನಿಮಾ ಆರಂಭವಾಗಿದೆ.

ಠಕ್ಕರ್ ಚಿತ್ರದ ಬಳಿಕ ಮನೋಜ್ ನಟನೆಯಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಆರ್ಯ ಮಹೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಮುಹೂರ್ತದ ಜೊತೆಗೆ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ
ನಾಯಕನ ಮುಖವನ್ನು ನೇರವಾಗಿ ಅನಾವರಣ ಮಾಡಿಲ್ಲ. ಬದಲಿಗರ ಕೈ ಮುಷ್ಟಿ ಹಿಡಿದು, ಹಿಮ್ಮುಖವಾಗಿ ನಿಂತಿರುವ ಸ್ಟಿಲ್, ಅದರ ಮೇಲೆ ಬಿಬಿಎಂಪಿ ಬಿಲ್ಡಿಂಗ್, ಬೆಂಗಳೂರು ಮಹಾನಗರ ಪಾಲಿಕೆ ಎನ್ನುವ ಮುದ್ರೆ ಮುಂತಾದ ಅಂಶಗಳನ್ನು ಬಳಸಲಾಗಿದೆ. ಬೆಂಗಳೂರಿನ ಕಸ ವಿಲೇವಾರಿ ಮತ್ತು ಅದರ ಸುತ್ತಲಿನ ಮಾಫಿಯಾದ ಸುತ್ತ ಇರುವ ಕಥಾಹಂದರ ಎನ್ನುವುದು ಸ್ಪಷ್ಟವಾಗಿದೆ.
ಚಿತ್ರದ ಮುಹೂರ್ತಕ್ಕೆ ನಿರ್ದೇಶಕ ದಿನಕರ್ ತೂಗುದೀಪ ಆಗಮಿಸಿ, ತಮ್ಮ ಕುಟುಂಬದ ಹುಡುಗನ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಈ ವೇಳೆ ಚಿತ್ರಸಾಹಿತಿ ಡಾ,ವಿ, ನಾಗೇಂದ್ರ ಪ್ರಸಾದ್, ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್, ರಾಯಲ್ ಎಸ್.ಆರ್. ಅನಿಲ್ ಕುಮಾರ್, ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಪಿ. ಮೂರ್ತಿ ಸೇರಿದಂತೆ ಹಲವು ಗಣ್ಯರು ಆಗಮಿಸಿ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದರು
ನಿರ್ದೇಶಕ ಆರ್ಯ ಮಹೇಶ್ ಮಾತಾಡಿ ನೈಜ ಕಥಾವಸ್ತು ಕೈಗೆತ್ತಿಕೊಂಡಿದ್ದೀನಿ. ಬೆಂಗಳೂರಿನ ಡಂಪಿಂಗ್ ಯಾರ್ಡ್ಗಳನ್ನು “ಗಾರ್ಡನ್’ ಅಂತಾ ಕರೀತಾರೆ.ಚಿತ್ರದ ಬಹುತೇಕ ನಡೆಯೋದು ಕಸ ವಿಲೇವಾರಿ ವಿಚಾರದ ಸುತ್ತ. ಹೀಗಾಗಿ ಗಾರ್ಡನ್ ಎಂದು ಹೆಸರಿಡಲಾಗಿದೆ.ಚಿತ್ರದಲ್ಲಿ.ಅನು ಪ್ರೇಮಾ ಮತ್ತು ಸೋನಮ್ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು
ನಾಯಕ ಮನೋಜ್ ಮಾತನಾಡಿ ಧರಣಿಯಲ್ಲಿ ಅಂಥದ್ದೊಂದು ಕಥಾವಸ್ತುವಿತ್ತು. ಈಗ ಗಾರ್ಡನ್ ಕೂಡಾ ಬೆಂಗಳೂರಿನ ಅನ್ ಟೋಲ್ಡ್ ವಿಚಾರಗಳನ್ನು ಒಳಗೊಂಡಿದೆ. ಇದರಲ್ಲಿ ಸೆಂಟಿಮೆಂಟ್ ಹೆಚ್ಚಿದೆ ಎಂದು ಹೇಳಿದರು

ನಾಯಕಿ ಅನುಪ್ರೇಮಾ ಮಾತನಾಡಿ ಚಿತ್ರದಲ್ಲಿ ರೆಗ್ಯುಲರ್ ನಾಯಕ, ನಾಯಕಿಯ ರೀತಿಯ ಪಾತ್ರಗಳಿರೋದಿಲ್ಲ. ಪಾತ್ರ ತುಂಬಾ ವಿಶೇಷತೆಯಿಂದ ಕೂಡಿದೆ ಎಂದು ಮಾಹಿತಿ ನೀಡಿದರು
ಮತ್ತೊಬ್ಬ ನಾಯಕಿ ಸೋನಮ್ ರೈ ಮಾತಾಡಿ ಎರಡು ವರ್ಷಗಳಿಂದ ಚಿತ್ರರಂಗದಿಂದ ದೂರ ಇದ್ದೆ. ನಿರ್ದೇಶಕ ಮಹೇಶ್ ಹೇಳಿದ ಪಾತ್ರ ನನಗೆ ಅಪಾರವಾಗಿ ಇಷ್ಟವಾಯ್ತು. ಹೀಗಾಗಿ ಮತ್ತೆ ಬಣ್ಣ ಹಚ್ಚಲು ಬಂದಿದ್ದೀನಿ ಎಂದರು.
ನಿರ್ಮಾಪಕ ಜಿ. ಮುನಿರಾಜು ಮಾತನಾಡಿ, ನಿರ್ದೇಶಕ ಮಹೇಶ್ ಅವರ ಬೊಂಬೂ ಸವಾರಿ ಚಿತ್ರಕ್ಕೆ ಸಹ ನಿರ್ಮಾಪಕನಾಗಿದ್ದೆ. ಸಲ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕನಾಗಿ ಗಾರ್ಡನ್ ಚಿತ್ರವನ್ನು ನಿರ್ಮಿಸುತ್ತಿದ್ದೇನೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಛಾಯಾಗ್ರಾಹಕ ಮುಂಜಾನೆ ಮಂಜು, ಸಾಹಸ ನಿರ್ದೇಶಕ ವೈಲೆಂಟ್ ವೇಲು, ಕೊರಿಯೋಗ್ರಾಫರ್ ಟಗರು ರಾಜು, ಸಂಕಲನಕಾರ ಜಿ ಗಿರೀಶ್ ಕುಮಾರ್ ಮುಂತಾದವರು ಹಾಜರಿದ್ದರು. ಗಾರ್ಡನ್ ಚಿತ್ರತಂಡ ಇದೇ ತಿಂಗಳ ಕೊನೆಯ ಭಾಗದಲ್ಲಿ ಅಥವಾ ಅಕ್ಟೋಬರ್ ತಿಂಗಳ ಆರಂಭದಲ್ಲಿ ಚಿತ್ರೀಕರಣಕ್ಕೆ ತೆರಳಲಿದೆ.

