`ಮೂರನೇ ಕೃಷ್ಣಪ್ಪ’ ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಪೂರ್ಣ: ಮುಂದಿನ ವರ್ಷ ಬಿಡುಗಡೆ ನಿರೀಕ್ಷೆ
ಲವ್ ಸ್ಟೋರಿ ಕಥೆ ಹೇಳಿ ಗೆದ್ದಿರುವ ನಿರ್ದೇಶಕ ನವೀನ್ ರೆಡ್ಡಿ ಹೊಸ ಕನಸು `ಮೂರನೇ ಕೃಷ್ಣಪ್ಪ’..ಅಕಿರ ಹಾಗೂ ರಿಲ್ಯಾಕ್ಸ್ ಸತ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಅವರೀಗ ವಿಭಿನ್ನ ಶೀರ್ಷಿಕೆಯೊಂದಿಗೆ ಆನೇಕಲ್ ಭಾಗದ ಕಥೆ ಹೇಳುವುದಕ್ಕೆ ಬರಲಿದ್ದಾರೆ
ಸದ್ದಿಲ್ಲದೇ ಮೂರನೇ ಕೃಷ್ಣಪ್ಪ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಮೂರನೇ ಕೃಷ್ಣಪ್ಪ ಬಳಗವೀಗ ಪ್ರಮೋಷನ್ ಪಡಸಾಲೆಗಿಳಿದಿದೆ. ಅದರ ಮೊದಲ ಭಾಗವಾಗಿ ಕಳೆದ ವಾರವಷ್ಟೇ ಟೈಟಲ್ ಟೀಸರ್ ರಿಲೀಸ್ ಮಾಡಿ ಥ್ರಿಲ್ ಹೆಚ್ಚಿಸಿತ್ತು.
ಇದೀಗ ಮೂರನೇ ಕೃಷ್ಣಪ್ಪ ಸಿನಿಮಾದ ಮೆಲೋಡಿ ಮಸ್ತಿಯೊಂದು ಅನಾವರಣಗೊಂಡಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಗೆಹರಿಯದ ಒಗಟುಗಳು ಎಂಬ ಸಾಹಿತ್ಯದ ಹಾಡು ಬಿಡುಗಡೆಯಾಗಿದೆ. ಸುಪ್ರಿತ್ ಶರ್ಮಾ ಎಸ್ ಈ ಹಾಡಿಗೆ ಸಾಹಿತ್ಯ ನೀಡುವುದರ ಜೊತೆಗೆ ಸಂಗೀತ ಕೂಡ ಒದಗಿಸಿದ್ದಾರೆ. ನಿಹಾಲ್ ಟೌರೊ ಬಗೆಹರಿಯದ ಒಗಟುಗಳು ಗೀತೆಗೆ ಧ್ವನಿಯಾಗಿದ್ದಾರೆ.
ರೆಡ್ ಡ್ರಾಗ್ಯನ್ ಫಿಲ್ಮಂಸ್ ಪ್ರೊಡಕ್ಷನ್ಸ್ ಹೌಸ್ ಎರಡನೇ ಕೊಡುಗೆ ಮೂರನೇ ಕೃಷ್ಣಪ್ಪ. ಈ ಹಿಂದೆ ರಿಲ್ಯಾಕ್ಸ್ ಸತ್ಯ ಚಿತ್ರವನ್ನು ಇದೇ ಪ್ರೊಡಕ್ಷನ್ಸ್ ನಡಿ ಮೋಹನ್ ರೆಡ್ಡಿ ಜಿ, ರವಿಶಂಕರ್ ನಿರ್ಮಿಸಿದ್ದರು. ಇದೀಗ ಇದೇ ಪ್ರೊಡಕ್ಷನ್ಸ್ ಹೌಸ್ ನಡಿ ಇವರಿಬ್ಬರು ಮೂರನೇ ಕೃಷ್ಣಪ್ಪ ಸಿನಿಮಾಗೆ ಹಣ ಹಾಕಿದ್ದಾರೆ.
ಆನೇಕಲ್ ಭಾಗದ ಭಾಷೆಯ ಸೊಬಗನ್ನು ಹೊತ್ತು ಬಂದಿರುವ ಈ ಚಿತ್ರದಲ್ಲಿ ಸಂಪತ್ ಮೈತ್ರೀಯಾ, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಶ್ರೀಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ತುಕಾಲಿ ಸಂತೋಷ್, ಉಗ್ರಂ ಮಂಜು ತಾರಾಬಳಗದಲ್ಲಿದ್ದಾರೆ.
ಮೂರನೇ ಕೃಷ್ಣಪ್ಪ ಸಿನಿಮಾ ಆನಂದ್ ರಾಜವಿಕ್ರಮ್ ಸಂಗೀತ, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಗ್ರಹಣವಿದೆ. ಫ್ರೆಶ್ ಕಥೆಯೊಂದಿಗೆ ಸಿನಿಮಾಪ್ರೇಮಿಗಳ ಎದುರು ಬರ್ತಿರುವ ನವೀನ್ ರೆಡ್ಡಿ ತಮ್ಮ ಹೊಸ ಪ್ರಯೋಗವನ್ನು ಜನವರಿ ಅಥವಾ ಫೆಬ್ರವರಿ ತಿಂಗಳಂದು ಪ್ರೇಕ್ಷಕ ಎದುರು ತರಲು ಯೋಜನೆ ಹಾಕಿಕೊಂಡಿದ್ದಾರೆ.