Sapthami Gowda joins the historical film Halagali: Dolly Dhananjaya as the heroine

ಐತಿಹಾಸಿಕ ಹಲಗಲಿ ಚಿತ್ರಕ್ಕೆ ಸಪ್ತಮಿ ಗೌಡ ಸೇರ್ಪಡೆ : ಡಾಲಿ ಧನಂಜಯಗೆ ನಾಯಕಿ - CineNewsKannada.com

ಐತಿಹಾಸಿಕ ಹಲಗಲಿ ಚಿತ್ರಕ್ಕೆ ಸಪ್ತಮಿ ಗೌಡ ಸೇರ್ಪಡೆ : ಡಾಲಿ ಧನಂಜಯಗೆ ನಾಯಕಿ

ಕನ್ನಡದ ಐತಿಹಾಸಿಕ ಸಿನಿಮಾ “ಹಲಗಲಿ” ಚಿತ್ರಕ್ಕೆ ಡಾಲಿ ಧನಂಜಯ ನಾಯಕ ಎನ್ನುವುದು ಎಲ್ಲರಿಗೂ ಗೊತ್ತು. ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು ಚಿತ್ರಕ್ಕೆ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ.

ಸುಕೇಶ್ ಡಿ ಕೆ ನಿರ್ದೇಶನದ ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಬಹು ತಾರಾಗಣದ ಅದ್ಧೂರಿ ಬಜೆಟ್ ಚಿತ್ರ ‘ಹಲಗಲಿ’ ಈಗಾಗಲೇ ಸಾಕಷ್ಟು ಸದ್ದು ಮಾಡಿದ್ದು, ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ.

ಎರಡು ಭಾಗಗಳಲ್ಲಿ, ಮೂಡಿ ಬರಲಿರುವ ಈ ಸಿನಿಮಾ ಬಹು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ.ಐದು ಭಾಷೆಯಲ್ಲಿ ಅದ್ದೂರಿಯಾಗಿ ಸೆಟ್ಟೇರಿರುವ ಕನ್ನಡದ ಐತಿಹಾಸಿಕ ಸಿನಿಮಾದಲ್ಲಿ ಕನ್ನಡ ಸೇರಿದಂತೆ ಬಹುಭಾಷಾ ನಟರೂ ಇರಲಿದ್ದಾರೆ.

ಕನ್ನಡ ಸೇರಿ ಐದು ಭಾಷೆಯಲ್ಲಿ ಮೂಡಿ ಬರುತ್ತಿರುವ ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆ ಇದಾಗಿದ್ದು, ಸಿನಿಮಾಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಡುವ ಉತ್ಸಾಹದಲ್ಲಿದೆ ಚಿತ್ರತಂಡ.

ನಟ ಡಾಲಿ ಧನಂಜಯ ಅವರ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲಿನ ಚಿತ್ರವಿದು. ಇಲ್ಲಿವರೆಗೂ ಅವರನ್ನು ತೆರೆ ಮೇಲೆ ವಿಭಿನ್ನ ಪಾತ್ರಗಳಲ್ಲಿ ನೋಡಿ ಮೆಚ್ಚಿದ್ದ ಪ್ರೇಕ್ಷಕರು, ಈಗ ವಾರಿಯರ್ ಪಾತ್ರದಲ್ಲಿ ನೋಡಲಿದ್ದಾರೆ. ಇವರ ಕೈಗೆ ಬಿಲ್ಲು, ಬಾಣ, ಮದ್ದು- ಗುಂಡುಗಳನ್ನು ಕೊಟ್ಟು ಯುದ್ಧದ ಅಖಾಡಕ್ಕೆ ಇಳಿಸಿರುವುದು ಕನ್ನಡ ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಒಂದು ರೋಚಕ ಇತಿಹಾಸ.

ಹಲಗಲಿ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತು ನಾವು ಓದಿರುವ ಮತ್ತು ಕೇಳಿರುವ ಸಂಗತಿಗಳು ಬಹು ರೋಚಕ. ಕನ್ನಡ ನಾಡಿನ ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಕೇಶ್ ಡಿ ಕೆ.

ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ನ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇವರು ಈಗಾಗಲೇ ತೆಲಗಿನಲ್ಲಿ ರಚಯತ ಚಿತ್ರವನ್ನು ನಿರ್ಮಿಸಿ, 20ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ವಿತರಣೆ ಮಾಡಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮೂಡಿ ಬರಲಿರುವ ಅದ್ಧೂರಿ ಬಜೆಟ್ ನ ಈ ಚಿತ್ರಕ್ಕೆ ಚಾಲನೆಯೂ ಸಿಕ್ಕಿದೆ.ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಕನ್ನಡದ ವಾಸುಕಿ ವೈಭವ್ ಸಂಗೀತ ಇದೆ. ವಿಶೇಷ ಎಂದರೆ ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಂ ಮೊರ್ ಅವರೇ ಹಲಗಲಿ ವೀರರು ಚಿತ್ರಕ್ಕೆ ಸಾಹಸ ನಿರ್ದೇಶಕ.

ಚಿತ್ರಕ್ಕಾಗಿ ನಾಲ್ಕೈದು ಬೃಹತ್ ಹಳ್ಳಿಯ ಸೆಟ್ ಗಳನ್ನು ಹಾಕುತ್ತಿದ್ದು, ಹಲಗಲಿ ಊರಿನ ಸೆಟ್ ಅನ್ನೇ ವಿಶೇಷವಾಗಿ ನಿರ್ಮಿಸಲಾಗುತ್ತಿರುವುದು ವಿಶೇಷ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin