44 ವರ್ಷಗಳ ಕನಸು “ಜಗ್ಗೇಶ್ ಸ್ಟುಡಿಯೋ” ಆರಂಭ: ಸ್ಟುಡಿಯೋ ದುಡ್ಡಿಗಾಗಿ ಅಲ್ಲ ಚಿತ್ರರಂಗದ ಸೇವಗಾಗಿ- ನಟ ಜಗ್ಗೇಶ್

ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ನವರಸನಾಯಕ ಜಗ್ಗೇಶ್ ಕೂಡ ಒಬ್ಬರು ಎಂದರೆ ಅದರಲ್ಲಿ ಅತಿಶಯೋಕ್ತಿ ಆಗಲಾರದು. ಸಣ್ಣ ಪುಟ್ಟ ಪಾತ್ರಗಳಿಂದ ಹಿಡಿದು, ನಾಯಕ, ನಿರ್ದೇಶಕ, ನಿರ್ಮಾಪಕ ವಿತರಕ, ಪ್ರದರ್ಶಕರಾಗಿ ಚಿತ್ರರಂಗದ ಹಲವು ವಿಭಾಗಗಳಲ್ಲಿ ದುಡಿದ ಕಾಯಕಜೀವಿ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ 44 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರರಂಗದ ಮಂದಿಯ ಅನುಕೂಲಕ್ಕಾಗಿ ತಮ್ಮ ಕನಸಿನ ಯೋಜನೆ” ಜಗ್ಗೇಶ್ ಸ್ಟುಡಿಯೋ” ಆರಂಬಿಸಿದ್ದಾರೆ
1980ರಲ್ಲಿ ಸಿನಿಮಾರಂಗ ಪ್ರವೇಶಿಸಿದ ಜಗ್ಗೇಶ್ ಅವರು ಆರಂಭದ ದಿನಗಳಲ್ಲಿ ಕಂಡ ಕನಸನ್ನು ನನು ಮಾಡಲು ಸುದೀರ್ಘ 4 ದಶಕ ತೆಗೆದುಕೊಂಡಿದ್ದಾರೆ. ಅದುವೇ “ಜಗ್ಗೇಶ್ ಸ್ಟುಡಿಯೋ” ಈ ಸ್ಟುಡಿಯೋ ಕಿರಿಯ ಪುತ್ರ ಯತಿರಾಜ್ ಅವರ ಕನಸ್ಸು ಕೂಡ. ಯತಿರಾಜ್ ನಟಿಸಿರುವ ಯಲಾಕುನ್ನಿ ಸಿನಿಮಾದ ಅಷ್ಟು ಕೆಲಸಗಳು ಹೊಸ ಸ್ಟುಡಿಯೋದಲ್ಲಿ ಅಚ್ಚುಕ್ಕಟಾಗಿ ಆಗಿದೆ. ಅದಲ್ಲದೇ ಒಂದು ಹಿಂದಿ ಸಿನಿಮಾ ಹಾಗೂ ಮಲಯಾಳಂ ಸಿನಿಮಾದ ಕೆಲಸವೂ ಆಗಿದೆ.

ದುಡ್ಡಿಗಾಗಿ ಈ ಸ್ಟುಡಿಯೋ ನಿರ್ಮಾಣ ಮಾಡಲಿಲ್ಲ, ಇಂಡಸ್ಟ್ರೀಗೆ, ಎಲ್ಲಾ ಸಿನಿಮಾಗಳಿಗೂ ಕೈಗೆಟುಕುವ ದರದಲ್ಲಿ ಈ ಮೂಲಕ ಸೇವೆಯಾಗಲಿ ಅನ್ನುವುದು ನವರಸನಾಯಕ ಜಗ್ಗೇಶ್ ರವರ ಅಭಿಪ್ರಾಯ.

ತಮ್ಮ “ಜಗ್ಗೇಶ್ ಸ್ಟುಡಿಯೋ” ಬಗ್ಗೆ ಮಾಹಿತಿ ಹಂಚಿಕೊಂಡ ಹಿರಿಯ ನಟ ಜಗ್ಗೇಶ್,1980 ರಲ್ಲಿ ಇಂಡಸ್ಟ್ರೀಗೆ ಬಂದೆ. ಸ್ಟುಡಿಯೋ ಕಟ್ಟೋ ಕನಸು ಇಂದು ನಿನ್ನೆಯದಲ್ಲ, ಸುಮಾರು ನಲವತ್ತು ವರ್ಷದ ಹಿಂದಿನ ಕನಸು. ತಮ್ಮ ಕೋಮಲ್ ನಿರ್ಮಾಣದ ಯಲಾಕುನ್ನಿ ಕಂಪ್ಲೀಟ್ ಕೆಲ್ಸ ಎಲ್ಲವೂ ಜಗ್ಗೇಶ್ ಸ್ಟುಡಿಯೊಸ್ ನಲ್ಲೇ ಆಗಿದ್ದು ವಿಶೇಷ. ನನ್ನ ಧರ್ಮಪತ್ನಿ ಕೊಟ್ಟ ಸಲಹೆಯಂತೆ ಜಗ್ಗೇಶ್ ಸ್ಟುಡಿಯೊಸ್ ಅಂತಾ ಹೆಸರಿಟ್ಟಿದ್ದೇವೆ. ಚಿಕ್ಕ ಮಗ ಯತಿರಾಜನ ಕನಸಿನ ಪ್ರಾಜೆಕ್ಟ್ ಈ ಸ್ಟುಡಿಯೋ.

ಗಾಂಧಿನಗರದಲ್ಲಿ ಒಂದು ಸ್ಟುಡಿಯೋದಲ್ಲಿ ಎನ್ ಎಸ್ ರಾವ್ ಅವ್ರು ಡಬ್ಬಿಂಗ್ ಮಾಡ್ತಾ ಇದ್ದದ್ದು ನೋಡಿ ಇಂಪ್ರೆಸ್ ಆಗಿದ್ದೆ.ಆ ಸ್ಟುಡಿಯೋಗೆ ಆ ಸಮಯದಲ್ಲಿ 8.9 ಲಕ್ಷ ಖರ್ಚು ಆಗಿತ್ತು ಅನ್ನೋದೇ ಗ್ರೇಟ್. ಚಾಮುಂಡೇಶ್ವರಿ ಸ್ಟುಡಿಯೋ ನೆನಪಿಗೆ ಜಾರಿದ ಜಗ್ಗೇಶ್. ನನ್ನ ಸಿನಿ ಬದುಕಿನ ವರ್ಣ ರಂಜಿತ ಜರ್ನಿಗೆ ಚಾಮುಂಡೇಶ್ವರಿ ಸ್ಟುಡಿಯೋ ದೊಡ್ಡ ಪಾತ್ರ ವಹಿಸುತ್ತದೆ.
ಬಂಡ ನನ್ನ ಗಂಡ ಮೂಲಕ ಹೀರೋ ಆದೆ, ಆ ಸಮಯ ಶಂಕರನಾಗ್ ಅವ್ರ ಸಂಕೇತ್ ಸ್ಟುಡಿಯೋಗೆ ಹೋದಾಗ ಆಗ್ತಾ ಇದ್ದ ಫೀಲ್ ಸಖತ್. ಶಂಕರನಾಗ್ ಹಾಗೆ ಇದ್ದದ್ದು, ಅವರೊಬ್ಬ ವಿಜನರಿ ಮ್ಯಾನ್. ಸ್ಕ್ರೀನ್ ಮೇಲೆ ನಮ್ಮ ಪಾತ್ರ ನೋಡಿ ಡಬ್ ಮಾಡ್ತಾ ಇದ್ದ ದಿನಗಳು, ನಿಧಾನವಾಗಿ ಕಮ್ಮಿ ಆಗ್ತಾ ಆಗ್ತಾ ಚಿಕ್ಕ ಚಿಕ್ಕ ಸ್ಕ್ರೀನ್ ನೋಡಿ ಡಬ್ ಮಾಡೋ ಕಾಲ ಬಂತು,ಇದರಿಂದ ನನಗೆ ಬೇಜಾರ್ ಆಗ್ತಾ ಬಂತು.
ಬಹುತೇಕ ಸಂಗೀತ ನಿರ್ದೇಶಕರು ತಮ್ಮ ತಮ್ಮ ಮನೆಗಳಲ್ಲಿ ಸ್ಟುಡಿಯೋ ಮಾಡ್ಕೊಂಡು ಕೆಲಸಗಳನ್ನ ಮಾಡ್ತಾ ಇರ್ತಾರೆ. ವಿಶಾಲವಾದ ಜಾಗ ಇರೋದು ಕಮ್ಮಿ, ನನ್ನ ಡ್ರೀಮ್ ಬೇರೆ ಇತ್ತು, ಸ್ಟುಡಿಯೋ ವಿಶಾಲವಾಗಿ ಇರ್ಬೇಕು ಅನ್ನೋದು ನನ್ನ ಆಸೆಯಾಗಿತ್ತು, ಕಲಾವಿದರಿಗೆ ಸ್ವಲ್ಪ ಫೀಲ್ ಗುಡ್ ಅನುಭವ ಇದ್ರೆ ಒಳ್ಳೆದು ಅನ್ಸತ್ತೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ

ಚಿತ್ರೀಕರಣ ಮುಗಿದ ನಂತರ ಫೂಟೇಜ್ ತಂದು ಇಲ್ಲಿ ಕೊಟ್ಟರೆ ಒಂದು ಬಿಟ್ಟು ಮಿಕ್ಕ ಎಲ್ಲ ಕೆಲಸಗಳು ಇಲ್ಲಿ ಆಗುತ್ತೆ. ಈಗಾಗಲೇ ಒಂದು ಮಲಯಾಳಂ – ಒಂದು ಹಿಂದಿ ಚಿತ್ರದ ಕೆಲಸ ಇಲ್ಲಿ ಆಗಿದೆ. ಅವರೆಲ್ಲ ಫುಲ್ ಹ್ಯಾಪಿ.ಚಿಕ್ಕ ಬಜೆಟ್ – ದೊಡ್ಡ ಬಜೆಟ್ ಸಿನ್ಮಾ ಅಂತಾ ಡಿವೈಡ್ ಮಾಡ್ದೆ ಎಲ್ಲವೂ ಒಂದೇ ಅಂತಾ ಫೀಲ್ ಮಾಡ್ಬೇಕು,ನನ್ನ ಸ್ಟುಡಿಯೋದಲ್ಲಿ ಇರುವ ಎಲ್ಲ ಇಕ್ವಿಪ್ ಮೆಂಟ್ಸ್ ಲೇಟೆಸ್ಟ್ 2024, ಹಾಗೆ ಅಮೇರಿಕಾದಿಂದ ತರಿಸಿದ್ದು ಎಂದಿದ್ಧಾರೆ

ಬೇರೆ ಸ್ಟುಡಿಯೋದವರು ಕೊಡೋ ಕ್ವಾಲಿಟಿಗಿಂತ ಒಳ್ಳೆ ಔಟ್ ಪುಟ್ ಕೊಟ್ಟು, ಬೆಲೆ ಕೂಡಾ ಸ್ವಲ್ಪ ಕಮ್ಮಿ ಇರತ್ತೆ.
ಈಗಾಗಲೇ ನಮ್ಮಲ್ಲಿ ನಾಲ್ಕೈದು ಫಿಲ್ಮ್ಸ್ ಇವೆ, ಕೆಲ್ಸ ನಡೀತಾ ಇದೆ. ನನ್ನ ಉದ್ಯಮದ ಜನಕ್ಕೆ ನನ್ನ ಸೇವೆ ತಲುಪಬೇಕು ಎನ್ನುವ ಉದ್ದೇಶ ನಮ್ಮದು ಎಂದಿದ್ದಾರೆ
ಹಾಡು ಹಾಡುವ ಚಟ:
ನನಗೆ ಹಾಡು ಹೇಳೋ ಆಸಕ್ತಿ ಮತ್ತು ಚಟವಿದೆ. ರಾಘವೇಂದ್ರ ಸ್ವಾಮಿಗಳ ಹಾಡುಗಳನ್ನು ಲಾವಣಿ ಶೈಲಿಯ, ಆಡು ಭಾಷೆಯ ಹಾಡುಗಳ ಬಗ್ಗೆ ಆಸಕ್ತಿ ಇದೆ.ರಾಯರು ನನ್ನಿಂದ ಶುರು ಮಾಡಿಸ್ತಾರೆ.

ಅಣ್ಣಾವ್ರ ಬಾನಿಗೊಂದು ಎಲ್ಲೆ ಎಲ್ಲಿದೆ, ವೇದಾಂತಿ ಹೇಳಿದನು, ಎಂದೆಂದೂ ನಿನ್ನನು ಮರೆತು, ಹಾಡುಗಳನ್ನು ನಾನೇ ಹಾಡಿ ಸಂಭ್ರಮ ಪಟ್ಟಿದ್ದೇನೆ, ಜಗ್ಗೇಶ್ ಸ್ಟುಡಿಯೋ ಚಿತ್ರರಂಗದ ಮಂದಿಗೆ ಒಂದೇ ಸೂರಿನಲ್ಲಿ ಹಲವು ಅವಕಾಶ ಒದಗಿಸಲಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್.