ಸಾಮಾಜಿಕ ಕಥಾ ಹಂದರ ಹೊಂದಿರುವ “ಸರ್ಕಾರಿ ನ್ಯಾಯ ಬೆಲೆ ಅಂಗಡಿ” ತೆರೆಗೆ ಬರಲು ಸಿದ್ದ
ಸಾಮಾಜಿಕ ಕಥಾಹಂದರ ಹೊಂದಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ಧಾರೆ.

ಈ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ. ಹೆಚ್. ಮುನಿಯಪ್ಪ, ನಿರ್ಮಾಪಕರಾದ ಭಾ. ಮ. ಹರೀಶ್, ಭಾ. ಮ. ಗಿರೀಶ್, ಚೆಲುವ ಮೂರ್ತಿ, ‘ಕರ್ನಾಟಕ ರಾಜ್ಯ ಪಡಿತರ ಸಂಘ’ದ ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯರಂಗದ ಅನೇಕ ಗಣ್ಯರು ಹಾಜರಿದ್ದರು.
ಚಿತ್ರದ ನಟ ಕುಮಾರ್ ಬಂಗಾರಪ್ಪ, ನಟಿ ರಾಗಿಣಿ ದ್ವಿವೇದಿ, ಹಿರಿಯ ನಟ ದೊಡ್ಡಣ್ಣ ಮುಂತಾದ ಅನೇಕ ಕಲಾವಿದರು ಇತರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ಚಿತ್ರವನ್ನು ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಇದ್ದು ಸಾತ್ವಿಕ್ ಪವನ್ ಕುಮಾರ್ ಛಾಯಾಗ್ರಹಣ ಮತ್ತು ನಿರ್ದೇಶನವಿದೆ
ಸಿನಿಮಾದ ಹೆಸರೇ ಹೇಳುವಂತೆ, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಮತ್ತು ಪಡಿತರ ವ್ಯವಸ್ಥೆಯ ಸುತ್ತ ನಡೆಯುವ ಕಥಾಹಂದರ ಹೊಂದಿರುವ ಚಿತ್ರ. ಪಕ್ಕಾ ಗ್ರಾಮೀಣ ಸೊಗಡಿನ ಕಥೆ ಹೊಂದಿರುವ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆಯಲ್ಲೇ ನಡೆಸಿರುವುದು ವಿಶೇಷ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ‘ಸಿನಿಮಾ ಪ್ರಭಾವಶಾಲಿ ಮಾಧ್ಯಮ. ಸಿನಿಮಾಗಳ ಮೂಲಕ ವಾಸ್ತವ ವಿಷಯಗಳನ್ನು ಜನರಿಗೆ ತಲುಪಿಸಬಹುದು. ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ವಾಸ್ತವ ಸ್ಥಿತಿಯ ಕಥಾಹಂದರವಾಗಿ ಇಟ್ಟುಕೊಂಡು ತಯಾರಾಗಿರುವುದು ಶ್ಲಾಘನೀಯ. ಜನ ಸಾಮಾನ್ಯರು, ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಗಳ ಮೂಲಕ ದಿನಸಿ ಮತ್ತು ಆಹಾರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇಂತಹ ವಿಷಯದ ಕತೆ ಹೊಂದಿರುವ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ಧಾರೆ.
ಅಂದಹಾಗೆ, ಸುಮಾರು 52 ದಿನಗಳ ಕಾಲ ಮಂಡ್ಯ ಸುತ್ತಮುತ್ತಲಿನ ಸ್ಥಳಗಳಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಮುಗಿಸಿರುವ ಚಿತ್ರ ತಂಡ, ಶ್ರೀಘ್ರದಲ್ಲೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದೆ. ಕನ್ನಡದ ಜೊತೆಗೆ ದೇಶದ ಇತರ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ

