Shooting for a beautiful song from the movie "Desai

“ದೇಸಾಯಿ” ಚಿತ್ರದ ಸುಂದರ ಹಾಡಿನ ಚಿತ್ರೀಕರಣ - CineNewsKannada.com

“ದೇಸಾಯಿ” ಚಿತ್ರದ ಸುಂದರ ಹಾಡಿನ ಚಿತ್ರೀಕರಣ

ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಿಸುತ್ತಿರುವ, ನಾಗಿರೆಡ್ಡಿ ಭಡ ರಚನೆ ಮತ್ತು ನಿರ್ದೇಶನದ ಹಾಗೂ “ಲವ್ 360” ಖ್ಯಾತಿಯ ಪ್ರವೀಣ್ ಕುಮಾರ್ ನಾಯಕನಾಗಿ ನಟಿಸುತ್ತಿರುವ “ದೇಸಾಯಿ” ಚಿತ್ರದ ಹಾಡೊಂದರ ಚಿತ್ರೀಕರಣ ಬೆಂಗಳೂರು ನಗರದ ಹೊರವಲಯದ ಡೆಸ್ಟಿನೊ ರೆಸಾರ್ಟ್ ನ ಸುಂದರ ಪರಿಸರದಲ್ಲಿ ನಡೆಯಿತು.

ಶಿವು ಬೇರ್ಗಿ ಅವರು ಬರೆದಿರುವ, ಸಾಯಿಕಾರ್ತಿಕ್ ಸಂಗೀತ ನೀಡಿರುವ ಈ ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ನಾಯಕ ಪ್ರವೀಣ್ ಕುಮಾರ್ ಹಾಗೂ ನಾಯಕಿ ರಾಧ್ಯ ಹೆಜ್ಜೆ ಹಾಕಿದರು.

ನಿರ್ದೇಶಕ ನಾಗಿರೆಡ್ಡಿ ಭಡ ಮಾತನಾಡಿ “ದೇಸಾಯಿ” ಒಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ.ಸುಮಾರು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿರುವ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ತಾತಾ, ತಂದೆ ಹಾಗೂ ಮಗ ಮೂರು ತಲೆಮಾರಿನ ಕಥೆ ಇದರಲ್ಲಿದೆ. ಸೆಂಟಿಮೆಂಟ್ ಸನ್ನಿವೇಶಗಳು ಸಖತಾಗಿ ಮೂಡಿಬಂದಿದೆ. ಜನರು ಬಯಸುವ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಇನ್ನೊಂದು ಹಾಡು ಮುಗಿದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ ಎಂದು ತಿಳಿಸಿದರು.

ನಿರ್ಮಾಪಕ ಮಹಂತೇಶ್ ವಿ ಚೋಳದಗುಡ್ಡ ಮಾತನಾಡಿ,ಮೂಲತಃ ಬಾಗಲಕೋಟೆಯವನು. ಚಿತ್ರ ನಿರ್ಮಾಣ ಮಾಡಬೇಕೆಂಬುದು ನನ್ನ ಕನಸು. ಅದು ಈಗ ಈಡೇರಿದೆ. ಇದೊಂದು ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಚಿತ್ರ. ಸಂಭಾಷಣೆ ಕೂಡ ಅದೇ ಸೊಗಡಿನಲ್ಲಿರುತ್ತದೆ. ಯಾವುದಕ್ಕೂ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ಹೆಚ್ಚಿನ ಚಿತ್ರೀಕರಣ ಬಾದಾಮಿ, ಬಾಗಲಕೋಟೆಯಲ್ಲಿ ನಡೆದಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ ಎಂದರು

ನಾಯಕ ಪ್ರವೀಣ್ ಕುಮಾರ್ ಚಿತ್ರದಲ್ಲಿ ನನ್ನದು ಆಟಗಾರ(ಅಥ್ಲೆಟಿಕ್)ನ ಪಾತ್ರ. “ಲವ್ 360” ಚಿತ್ರದ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

“ದೇಸಾಯಿ” ಚಿತ್ರದಲ್ಲಿ ನನ್ನದು ಬೋಲ್ಡ್ ಹುಡುಗಿಯ ಪಾತ್ರ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ರಾಧ್ಯ ಮಾಹಿತಿ ನೀಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಚಿತ್ರದ ಬಗ್ಗೆ ಮಾತನಾಡಿದರು.

“ಲವ್ 360” ಖ್ಯಾತಿಯ ಪ್ರವೀಣ್ ಕುಮಾರ್ ,ರಾಧ್ಯ, “ಒರಟ” ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ತಾರಾಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin