“ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕೆ ರಜತದಿನೋತ್ಸವದ ಸಂಭ್ರಮ: ಗೋಲ್ಡನ್ ಸ್ಟಾರ್ ಮುಖದಲ್ಲಿ ಚಿನ್ನದ ನಗು
ಕನ್ನಡ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತನ್ನು ದೂರ ಮಾಡಿದ, ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರ ಬಿಡುಗಡೆಯಾಗಿ ಇಪ್ಪತ್ತೈದು ದಿನ ಪೂರ್ಣಗೊಳಿಸಿ ಮುನ್ನೆಡೆದಿದೆ.
ಇಪ್ಪತ್ತೈದು ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿರುವ ಈ ಚಿತ್ರದ ಗೆಲುವಿನ ಓಟ ಈಗಲೂ ಮುಂದುವರೆದಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ಸಮಾರಂಭ ಆಯೋಜಿಸಿದ್ದರು. ಚಿತ್ರದ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ನಾಯಕ ಗಣೇಶ್, ಶರಣ್ಯ ಶೆಟ್ಟಿ, ಶಶಿಕುಮಾರ್, ಸಾಧುಕೋಕಿಲ, ಶ್ರೀನಿವಾಸಮೂರ್ತಿ, ರಾಮಕೃಷ್ಣ, ಅಂಬುಜಾಕ್ಷಿ ಮುಂತಾದ ಕಲಾವಿದರು, ರೀರೆಕಾರ್ಡಿಂಗ್ ಮಾಡಿರುವ ಸಾಯಿಕಾರ್ತಿಕ್, ಸಂಕಲನಕಾರ ಕೆ.ಎಂ.ಪ್ರಕಾಶ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಗೀತರಚೆನೆಕಾರ ಡಾ.ವಿ.ನಾಗೇಂದ್ರಪ್ರಸಾದ್, ಗಾಯಕರಾದ ಜಸ್ಕರಣ್ ಸಿಂಗ್, ಇಂದು ನಾಗರಾಜ್, ಪೃಥ್ವಿ ಭಟ್, ಕಾರ್ಯಕಾರಿ ನಿರ್ಮಾಪಕ ಶರತ್ ಭೋಜರಾಜ್ ಸೇರಿದಂತೆ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಸಮಾರಂಭದಲ್ಲಿ ಹಾಜರಿದ್ದರು. ನಿರ್ಮಾಪಕ ಪ್ರಶಾಂತ್ ಅವರ ಪುತ್ರಿ ಪ್ರೇರಣ ಪ್ರಶಾಂತ್ ಸಹ ಉಪಸ್ಥಿತರಿದ್ದರು.
ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿ , ಮೊದಲನೇಯದು ಚಿತ್ರರಸಿಕರು ಹಾಗೂ ಮಾಧ್ಯಮದವರು, ಎರಡನೇಯದು ನಾಯಕ ಗಣೇಶ್ ಹಾಗೂ ಮೂರನೆಯದು ನನ್ನ ಚಿತ್ರಕ್ಕೆ ಆರು ಹಿಟ್ ಹಾಡುಗಳನ್ನು ಕೊಟ್ಟ ಅರ್ಜುನ್ ಜನ್ಯ. ಈ ಗೆಲುವನ್ನು ನನ್ನ ಇಡೀ ತಂಡಕ್ಕೆ ಅರ್ಪಿಸುತ್ತೇನೆ. ಈ ಸಮಯದಲ್ಲಿ ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು
ಇನ್ನೊಂದು ವಿಷಯವೆಂದರೆ ಮೊದಲಿನಿಂದ ಹೇಳುತ್ತಿದ್ದೆ. ಈ ಕಥೆಯನ್ನು ಗಣೇಶ್ ಅವರನ್ನ ತಲೆಯಲ್ಲಿಟ್ಟುಕೊಂಡು ಮಾಡಿದ್ದೇನೆ ಎಂದು. ಈಗಲೂ ಅದೇ ಹೇಳುತ್ತೇನೆ. ಈ ಪಾತ್ರ ಗಣೇಶ್ ಅವರಿಗಾಗಿಯೇ. ಇನ್ನು ಟ್ರೇಲರ್, ಟೀಸರ್ ಬಿಡುಗಡೆ ಮಾಡದೆ ಹಾಡುಗಳ ಮೂಲಕ ಜನರನ್ನು ತಲುಪುತ್ತೇನೆ ಎಂದಿದ್ದೆ. ಅದು ನಿಜವಾಗಿದೆ ಎಂದರು.
ನಾಯಕ ನಟ ಗಣೇಶ್ ಮಾತನಾಡಿ ನಿರ್ದೇಶಕರು ನನ್ನ ಬಗ್ಗೆ ತುಂಬಾ ಹೇಳಿದರು. ಆದರೆ ಯಶಸ್ಸಿನ ಸಿಂಹಪಾಲು ಅವರಿಗೆ ಸೇರಬೇಕು. ಅವರು ಈ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ತಂತ್ರಜ್ಞರು ಹಾಗೂ ನನ್ನ ಸಹೋದ್ಯೋಗಿ ಕಲಾವಿದರ ಸಹಕಾರದಿಂದ ಇಂದು ಯಶಸ್ಸು ಕಾರಣವಾಗಿದೆ. ಇನ್ನು ಇತ್ತೀಚೆಗೆ ಈ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ದುಬೈಗೆ ಹೋಗಿದ್ದೆವು. ಪ್ರದರ್ಶನ ಮುಗಿದ ಮೇಲೆ ಶಾಪಿಂಗ್‍ಗಾಗಿ ನಾನು, ನಿರ್ದೇಶಕರು ಹಾಗೂ ರಂಗಾಯಣ ರಘು ಅವರು ಹೋದೆವು. ನಾನು ಸ್ವಲ್ಪ ಬಟ್ಟೆ ಪ್ರೇಮಿ. ಹೋದ ತಕ್ಷಣ ಒಂದು ಜಾಕೆಟ್ ಕಣ್ಣಿಗೆ ಬಿತ್ತು. ರಘು ಅವರು ಈ ಜಾಕೆಟ್ ತೆಗೆದಿಕೊ ಅಂತ ಹೇಳಿದರು. ನಾನು ಏಕೆ ಅಂದೆ. ಅದರ ಮೇಲೆ ಜಿಎಫ್ ಎಂದು ಬರೆದಿದ್ದೆ. ಜಿಎಫ್ ಎಂದರೆ ಗೋಲ್ಡನ್ ಫ್ಯಾನ್ಸ್ ಎಂದರು
ಚಿತ್ರದ ಇಪ್ಪತ್ತೈದನೇ ದಿನದ ಸಮಾರಂಭಕ್ಕೆ ಈ ಜಾಕೆಟ್ ಹಾಕೊಂಡು ಹೋಗು. ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸು ಎಂದರು ರಂಗಾಯಣ ರಘು ಎಂದು ತಿಳಿಸಿದರು ಎನ್ನುವುದನ್ನು ನೆನಪು ಮಾಡಿಕೊಂಡರು ನಾಯಕ ಗಣೇಶ್.