The song "Sanje mele Sumne Phonu Modla Ninge" from the matinee film crossed 14 lakh views

ಮ್ಯಾಟ್ನಿ ಚಿತ್ರದ “ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ ಹಾಡು 14 ಲಕ್ಷ ದಾಟಿದ ವೀಕ್ಷಣೆ - CineNewsKannada.com

ಮ್ಯಾಟ್ನಿ ಚಿತ್ರದ “ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ ಹಾಡು 14 ಲಕ್ಷ ದಾಟಿದ ವೀಕ್ಷಣೆ

” ಅಯೋಗ್ಯ ” ಚಿತ್ರದ ನಂತರ ನೀನಾಸಂ ಸತೀಶ್ ಮತ್ತು ರಚಿತಾರಾಮ್ ಜೋಡಿಯ ಮತ್ತೊಂದು ಸೂಪರ್ ಹಿಟ್ ಸಾಂಗ್ “ಸಂಜೆ ಮೇಲೆ ಸುಮ್ನೆ ಪೋನು ಮಾಡ್ಲ ನಿಂಗೆ” ಹಾಡು 14 ಲಕ್ಷಕ್ಕೂ ಅಧಿಕ ವೀಕ್ಷಣೆ ಯಾಗಿದ್ದು ಹಾಡು ಮ್ಯಾಟ್ನಿ ಚಿತ್ರದ ಹಾಡು ಮನಸೂರೆಗೊಳ್ಳುತ್ತಿದೆ. ಹಾಡು ಟ್ರೆಂಡಿಂಗ್‍ನಲ್ಲಿ ಎರಡನೇ ಸ್ಥಾನದಲ್ಲಿದೆ.

ನೀನಾಸಂ ಸತೀಶ್ ಹಾಗೂ ರಚಿತಾರಾಮ್ ಅಭಿನಯಿಸಿದ್ದ ಅಯೋಗ್ಯ ಚಿತ್ರದ “ಏನಮ್ಮಿ ಏನಮ್ಮಿ” ಹಾಡು ಸಖತ್ ಹಿಟ್ ಆಗಿತ್ತು. ಈಗಲೂ ಆ ಹಾಡು ಜನಪ್ರಿಯ. ಈಗ ಅವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ “ಮ್ಯಾಟ್ನಿ” ಚಿತ್ರದಿಂದ “ಸಂಜೆ ಮೇಲೆ ಸುಮ್ನೆ ಪೋನು ಮಾಡ್ಲ ನಿಂಗೆ ” ಎಂಬ ಹಾಡು ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಹಾಗೂ ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೂ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾಯಕ ನೀನಾಸಂ ಸತೀಶ್ ಮಾಹಿತಿ ನೀಡಿ, “ಸಂಜೆ ಮೇಲೆ ಸುಮ್ನೆ ಪೋನು ಮಾಡ್ಲ ನಿಂಗೆ ಬಹಳ ಅದ್ಭುತವಾದ ಹಾಡು. ಕಲಾ ನಿರ್ದೇಶನ, ನೃತೃ ನಿರ್ದೇಶನ, ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ. ನಾನೊಬ್ಬ ಪ್ರೇಕ್ಷಕನಾಗಿ ನೋಡಿದಾಗ ಈ ಹಾಡು ಬಹಳ ಚೆನ್ನಾಗಿದೆ ಎಂದೆನಿಸುತ್ತದೆ. ನನ್ನ ಕೆರಿಯರ್ ನಲ್ಲಿ ಇದು ಬೆಸ್ಟ್ ಸಾಂಗ್ ಇದು.

ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರಿಗೆ ಬಹಳ ತೊಂದರೆ ಕೊಟ್ಟಿದ್ದೇನೆ. ಅವರು ಅಷ್ಟೇ ಚೆನ್ನಾಗಿ ಹಾಡು ಮಾಡಿದ್ದಾರೆ. ಈ ಹಾಡನ್ನು ಮೊದಲು ಅವರೇ ಹಾಡಿದ್ದರು. ಎಲ್ಲರೂ ಇಷ್ಟಪಟ್ಟಿದ್ದರು. ಆದರೂ ಈ ಹಾಡನ್ನು ವಿಜಯಪ್ರಕಾಶ್ ಹಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅದಕ್ಕೆ ಪೂರ್ಣಚಂದ್ರ ಅವರು ಒಪ್ಪಿಕೊಂಡು ವಿಜಯಪ್ರಕಾಶ್ ಅವರಿಂದ ಹಾಡಿಸಿದ್ದಾರೆ.

ನಿರ್ದೇಶಕ ಮನೋಹರ್ ಅವರು ಕಥೆ ಹೇಳಿದಾಗ ತಕ್ಷಣ ಒಪ್ಪಿಕೊಂಡೆ. ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. “ಅಯೋಗ್ಯ” ನಂತರ ನಾನು ಮತ್ತು ರಚಿತಾ ಒಟ್ಟಿಗೆ ಅಭಿನಯಿಸಿರುವ ಚಿತ್ರವಿದು. ಈ ಚಿತ್ರದ ಕಥೆ ಕೇಳಿದಾಗ, ಈ ಕಥೆಗೆ ರಚಿತಾ ರಾಮ್ ಅವರೇ ಸೂಕ್ತ ಅನಿಸಿತು. ನಂತರ ಮತ್ತೊಬ್ಬ ನಾಯಕಿಯಾಗಿ ಅದಿತಿ ಚಿತ್ರತಂಡ ಸೇರಿದರು. ಈಗಾಗಲೇ ರಚಿತಾ ರಾಮ್ ಅವರು ಈ ಚಿತ್ರದಲ್ಲಿದ್ದಾರೆ. ಒಬ್ಬರು ಇರುವಾಗ ಅದಿತಿ ಒಪ್ಪುತ್ತಾರಾ ಎಂಬ ಗೊಂದಲವಿತ್ತು. ಅವರು ಒಂದೇ ಮಾತಿಗೆ ಒಪ್ಪಿಕೊಂಡರು. ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ, ಪೂರ್ಣ ಎಲ್ಲರೂ ಸ್ನೇಹಿತರು. ಎಲ್ಲರೂ ಚೆನ್ನಾಗಿ ಮಾಡಿದ್ದಾರೆ. ಮುಂದೆ ನನ್ನ ಹಾಗೂ ಅದಿತಿ ಅವರ ಇನ್ನೊಂದು ಹಾಡು ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಆನಂದ್ ಆಡಿಯೋದವರು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ನಮ್ಮದು ಹಳೆಯ ನಂಟು. ನನ್ನ ಹಲವು ಚಿತ್ರದ ಹಾಡುಗಳನ್ನು ಅವರು ಬಿಡುಗಡೆ ಮಾಡಿದ್ದಾರೆ. ನನಗೆ ಬಹಳ ಲಕ್ಕಿ. ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ನಾಯಕಿ ರಚಿತಾ ರಾಮ್ ಮಾತನಾಡಿ ಈ ಹಾಡಿನ ಚಿತ್ರೀಕರಣದಲ್ಲೇ ಇದು ಬಹಳ ಚೆನ್ನಾಗಿ ಮೂಡಿಬರುತ್ತದೆ ಎಂದೆನಿಸಿತ್ತು. ಅದರಂತೆ ಹಾಡು ಬಹಳ ಚೆನ್ನಾಗಿ ಮೂಡಿಬಂದಿದೆ. ಹಾಡು, ಸಾಹಿತ್ಯ ಬಹಳ ಚೆನ್ನಾಗಿದೆ. ಸಂತು ಬಹಳ ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. ತುಂಬಾ ಎಂಜಾಯ್ ಮಾಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಪ್ರತಾಪ್ ಅವರು ಅದ್ಭುತ ಸೆಟ್‍ಗಳನ್ನು ಹಾಕಿದ್ದಾರೆ. ಅದರಲ್ಲೂ ಒಂದು ಸೆಟ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಚಿತ್ರೀಕರಣ ಮಾಡಿದ ಹಾಗನಿಸಿತು. ಇಡೀ ತಂಡದ ಶ್ರಮದಿಂದ ಈ ಹಾಡು ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕರ ಮನೋಹರ್ ಕಥೆ ಮಾಡಿಕೊಂಡು ಬಂದಾಗ ಖುಷಿಯಾಯಿತು. ಅದ್ಭುತವಾದ ತಾರಾಗಣ ಈ ಚಿತ್ರದಲ್ಲಿದೆ. ಒಳ್ಳೆಯ ಪಾತ್ರವಿದೆ. ಇದರಲ್ಲಿ ಹೊಸ ಶೇಡ್ ಇದೆ. ಟ್ರೇಲರ್ ಬಿಡುಗಡೆಯಾದಾಗ ನನ್ನ ಪಾತ್ರದ ಬಗ್ಗೆ ಗೊತ್ತಾಗುತ್ತದೆ ಎಂದರು

ಮತ್ತೊಬ್ಬ ನಾಯಕಿ ಅದಿತಿ ಪ್ರಭುದೇವ, ಚಿತ್ರಕ್ಕೆ ಹಾಡುಗಳು ಇನ್ವಿಟೇಶನ್ ಎನ್ನುತ್ತೇವೆ. ಅದೇ ರೀತಿ ನಮ್ಮ ಚಿತ್ರದ ಅದ್ಭುತ ಹಾಡನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ನಮ್ಮ ಚಿತ್ರ ವೀಕ್ಷಣೆಗೆ ಆಹ್ವಾನಿಸುತ್ತಿದ್ದೇವೆ. ಸತೀಶ್ ಹಾಗೂ ರಚಿತಾರಾಮ್ ಅಭಿನಯದ ಈ ಹಾಡು ಅದ್ಭುತವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ತಿಳಿಸಿದರು.

ನಿರ್ಮಾಪಕಿ ಪಾರ್ವತಿ ಎಸ್ ಗೌಡ, ನಿರ್ದೇಶಕ ಮನೋಹರ್ ಕಾಂಪಲ್ಲಿ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಪೂರ್ಣಚಂದ್ರ ಮೈಸೂರು ಹಾಗು ನಟರಾದ ನಾಗಭೂಷಣ್, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು “ಮ್ಯಾಟ್ನಿ” ಕುರಿತು ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin