ಹಿರಿಯ ನಟಿ ಲೀಲಾವತಿ ಇನ್ನು ನೆನಪು ಮಾತ್ರ : ಗಣ್ಯರಿಂದ ಅಂತಿಮ ನಮನ
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇಹಲೋಕ ತ್ಯಜಿಸಿದ್ದಾರೆ. 6 ದಶಕಗಳ ಕಾಲ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಮಹಾನ್ ಕಲಾವಿದೆಯ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಹಸ್ರಾರು ಮಂದಿ ಕಣ್ಣೀರ ವಿದಾಯ ಸಲ್ಲಿಸಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಕನ್ನಡದಲ್ಲಿ 400ಕ್ಕೂ ಹೆಚ್ಚು ಚಿತ್ರಗಳೂ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳ ಭಾಷೆಯಲ್ಲಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಜನಮಾನಸದಲ್ಲಿ ಸದಾ ಉಳಿದಿದ್ದರು. ಇಂತಹ ಮೇರು ನಟಿಯ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಲದೇವನಹಳ್ಳಿಯ ತೋಟದ ಮನೆಯ ಆವರಣಲ್ಲಿ ನಡೆಯಿತು. ಈ ಮೂಲಕ ಲೀಲಾವತಿ ಇನ್ನು ನೆನಪು ಮಾತ್ರ.
ವಯೋಸಹಜ ಖಾಯಿಲೆಯಿಂದ ನಿಧನರಾದ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಗೆ ನಿನ್ನೆ ರಾತ್ರಿಯಿಂದಲೇ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು ಚಿತ್ರರಂಗದ ಅನೇಕ ಕಲಾವಿದರು, ನಟ ನಟಿಯರು, ಗಣ್ಯರು, ಸಾರ್ವಜನಿಕರು ದರ್ಶನ ಪಡೆದರು
ನಂತರ ಬೆಳಗ್ಗೆ 11 ಗಂಟೆಯ ಸುಮಾರಿಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಸಂಪುಟದ ಅನೇಕ ಸದಸ್ಯರು, ಶಾಸಕರು ಸಂಸದರು ಸೇರಿ ರಾಜಕೀಯ ನಾಯಕರು, ಸಿನಿಮಾ ಮಂದಿ ಸೇರಿದಂತೆ ಅನೇಕ ಮಂದಿ ನಮನ ಸಲ್ಲಿಸಿದರು
1949ರಿಂದ 2009ರಲ್ಲಿ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹಿರಿಯ ನಟಿ ಲೀಲಾವತಿ ಅವರು ನಾಯಕಿಯಾಗಿ, ಅಮ್ಮ, ತಂಗಿ ಅತ್ತೆ, ಸೇರಿದಂತೆ ತಮಗೆ ಸಿಕ್ಕ ಯಾವುದೇ ಪಾತ್ರಕ್ಕೆ ಜೀವ ತುಂಬುವ ಮೂಲಕ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದರು. ಪುತ್ರ ವಿನೋದ್ ರಾಜ್ ಗಾಗಿ ಕನ್ನಡದ ಕಂದ ಸೇರಿದಂತೆ 4 ಚಿತ್ರಗಳನ್ನು ನಿರ್ಮಾಣವನ್ನೂ ಮಾಡಿದ್ದರು.
ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಿಂದ ರವೀಂದ್ರ ಕಲಾಕ್ಷೇತ್ರದ ತನಕ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ಕರೆ ತಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇಲ್ಲಿ ಅನೇಕ ಮಂದಿ ಅಂತಿಮ ದರ್ಶನ ಪಡೆದು ಭಾವುಕರಾಗಿ ಕಣ್ಣೀರು ಹಾಕಿ, ಲೀಲಾವತಿ ಅವರ ಒಡನಾಟ ಸ್ಮರಿಸಿಕೊಂಡರು
ಅಭಿಮಾನಿಗಳೆ ಇನ್ನು ಎಲ್ಲ:
ನನ್ನ ನಂತರ ಅಭಿಮಾನಿಗಳಿದ್ದಾರೆ. ಅವರೇ ನಮ್ಮನ್ನು ಬೆಳೆಸಿದ್ದಾರೆ. ಅವರಿದ್ದಾರೆ ಎದೆಗುಂದಬೇಡ ಎಂದು ತಾಯಿ ಆಗಾಗ ಹೇಳುತ್ತಿದ್ದರು ಎಂದು ನಟ ಹಾಗು ಪುತ್ರ ವಿನೋದ್ ರಾಜ್ ನೆನಪು ಮಾಡಿಕೊಂಡಿದ್ದಾರೆ.
ತಾಯಿ ಹೇಳಿದ ಮಾತು ಮತ್ತು ಅವರ ಕೆಲಸವನ್ನು ಮಾಡುತ್ತೇನೆ.ತಾಯಿಯೊಂದಿಗೆ ಕಳೆದ ದಿನಗಳನ್ನು ಹಂಚಿಕೊಳ್ಳಬೇಕೆಂದರೆ ಎದೆ ಬಗೆದು ತೋರಿಸಿದರೂ ಸಾಲದು. ಅಮ್ಮ ಪ್ರಾಣವನ್ನೂ ಬಿಟ್ಟರೂ ಮಗನನ್ನು ಬಿಟ್ಟು ಹೋಗಿದ್ದಾರೆ ಎಂದು ಭಾವುಕರಾದರು