Exclusive : ನಟಿ ಅನುಷಾ ರೈ ಕೈನಲ್ಲಿ ಸಾಲು ಸಾಲು ಚಿತ್ರಗಳು..
ಕನ್ನಡದಕ್ಕೆ ಪ್ರತಿಭಾವಂತ ನಟಿಯರೇ ದಂಡೇ ಒಬ್ಬರ ಮೇಲೊಬ್ಬರು ಚಿತ್ರರಂಗಕ್ಕೆ ಬರುತ್ತಿದ್ದಾರೆ.ಅವರ ಸಾಲಿಗೆ ನಟಿ ಅನೂಷ ರೈ ಕೂಡ ಒಬ್ಬರು. ಸಿನಿಮಾ ಸೀರಿಯಲ್ ಮೂಲಕ ಚಿತ್ರರಂಗದಲ್ಲಿ ಗಮನ ಸೆಳೆದಿದ್ದಾರೆ. Exclusive Article: actress Anusha Rai
ಕನ್ನಡ ಪ್ರತಿಭಾನ್ವಿತೆ ನಟಿ ಅನೂಷ ರೈ, ಚಿತ್ರರಂಗಕ್ಕೆ ಬಂದ ಬಗೆ ಕೈಯಲ್ಲಿರುವ ಚಿತ್ರಗಳು ಸೇರಿದಂತೆ ಮತ್ತಿರುವ ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
• ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದು ಹೇಗೆ?
ಬೆಂಗಳೂರಿನ ಆಚಾರ್ಯ ಇನ್ಸ್ಸಿಟೂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುವಾಗ ಕಾಲೇಜಿನಲ್ಲಿ ಪ್ರತಿ ವರ್ಷ ಕಾಲೇಜು ಉತ್ಸವ “ಆಚಾರ್ಯ ಹಬ್ಬ” ಅದ್ದೂರಿ ಕಾರ್ಯಕ್ರಮ ಮಾಡ್ತಾರೆ. ಕಾಲೇಜಿನಲ್ಲಿ ಓದುತ್ತಿದ್ದುದರಿಂದ ಆಚಾರ್ಯ ಹಬ್ಬಕ್ಕಾಗಿ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಂಗೀತ ಕಾಲೇಜಿನಲ್ಲಿ ಡ್ಯಾನ್ಸ್ ತಾಲೀಮು ಮಾಡುತ್ತಿದ್ದಾಗ ನಿರ್ದೇಶಕರೊಬ್ಬರು ನೋಡಿ ಸಿನಿಮಾದಲ್ಲಿ ನಟಿಸುವ ಆಸೆ ಇದೆಯಾ ಎಂದು ಕೇಳಿದ್ದರು. ನಾನು ಇನ್ನೂ ಇಂಜಿನಿಯರಿಂಗ್ ಓದುತ್ತಿದ್ದರಿಂದ ಇಲ್ಲ ಎಂದಿದ್ದೆ. ಆಗ ಅವರು ಅಪ್ಪ-ಅಮ್ಮನ ನಂಬರ್ ಪಡೆದು ಅವರೊಂದಿಗೆ ಮಾತನಾಡಿ ಸಿನಿಮಾ ಇದೆ ನಾಯಕಿ ಪಾತ್ರ ಮಾಡುವಂತೆ ಒತ್ತಾಯ ಮಾಡಿದ್ದರು.
• ನಿಮಗೆ ನಾಯಕಿಯಾಗುವ ಆಸೆ ಇತ್ತಾ?
ಖಂಡಿತಾ ಇಲ್ಲ, ಸಿನಿಮಾ ಬರುವುದಾಗಿ ಅಥವಾ ನಾಯಕಿಯಾಗಿ ನಟಿಸುತ್ತೇನೆ ಎಂದು ಭಾವಿಸಿರಲಿಲ್ಲ. ಆದರೆ ಊಹೆ ಕೂಡ ಮಾಡಿರಲಿಲ್ಲ. ಕಾಣದೇ ಇರುವ ಪ್ರಪಂಚ ನಮ್ಮದು. ಒಂದು ರೀತಿ ಕನಸು. ಅಚಾನಕ್ ಆಗಿ “ಮಹಾನುಭಾವರು” ಚಿತ್ರದಲ್ಲಿ ಅವಕಾಶ ಸಿಕ್ಕಿತು.
• ನೀವು ನಟಿಸಿದ ಮೊದಲ ಚಿತ್ರದ ಅನುಭವ ಹೇಗಿತ್ತು?
ಮಹಾನುಭಾವರು ಚಿತ್ರದಲ್ಲಿ ನಟಿಸುವಾಗ ಸಾಕಷ್ಟು ಕಲಿತೆ. ಜೊತೆಗೆ ಒಂದರ ಮೇಲೆ ಒಂದು ಚಿತ್ರಗಳಲ್ಲಿ ಅವಕಾಶ ಬಂದವು. ಕಾಲೇಜಿನಲ್ಲಿದ್ದಾರೆ ಗೂಗ್ಲಿ, ಐರಾವತ, ಮಾಸ್ಟರ್ ಪೀಸ್ ಸೇರಿದಂತೆ ಅನೇಕ ಚಿತ್ರಗಳ ಚಿತ್ರೀಕರಣ ನಡೆದಿತ್ತು. ಚಿತ್ರೀಕರಣ ಕುಳಿತು ನೋಡುತ್ತಿದ್ದೆ. ಅವಕಾಶ ಸಿಕ್ಕಾಗ ಒಕೆ ಮಾಡೋಣ ಎಂದು ಒಪ್ಪಿಕೊಂಡೆ. ಅಪ್ಪ-ಅಮ್ಮನೂ ಒಪ್ಪಿಗೆ ನೀಡಿದ್ದರು. ಮೊದಲ ಸಿನಿಮಾದಲ್ಲಿ ನಟಿಸುವಾಗಲೇ ಧಾರಾವಾಹಿಯಿಂದ ಅವಕಾಶಗಳು ಬಂದವು.ಹೆಸರೂ ಕೂಡ ಬಂತು ಎಂದರು.
• ಯಾವ ಯಾವ ಧಾರಾವಾಹಿಗಳಲ್ಲಿ ನಟಿಸಿದ್ದೀರಿ?
ಸಿನಿಮಾ ಮಾಡುತ್ತಲೇ ಕಸ್ತೂರಿ ವಾಹಿನಿಗೆ ರಾಜಕುಮಾರಿ, ಅಣ್ಣಯ್ಯ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡೆ. ಆ ಬಳಿಕ ಜೀ ವಾಹಿನಿಗಾಗಿ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿದೆ. ಇದರ ಜೊತೆಗೆ ತಮಿಳಿನಲ್ಲಿಯೂ “ ವಾಣಿ ರಾಣಿ ಯಲ್ಲಿ ನಟಿಸಿದೆ. ಮಹಾಭಾರತ ಧಾರಾವಾಹಿ ನಿರ್ದೇಶಕರ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡೆ.
• ರೈಡರ್ ಚಿತ್ರದ ಅನುಭವ ಹಂಚಿಕೊಳ್ಳುವುದಾದರೆ? ಇನ್ನುಳಿದ ಚಿತ್ರಗಳ ಕುರಿತು.
ನಿಖಲ್ ಕುಮಾರ್ ಸ್ವಾಮಿ ಅಭಿನಯದ ರೈಡರ್ ಚಿತ್ರದಲ್ಲಿ ನಟಿಸಿದ್ದೇನೆ. ಒಳ್ಳೆಯ ಪಾತ್ರ. ಕಲಿಯಲು ಅವಕಾಶ ಸಿಕ್ಕಿತ್ತು. ನಟ ಧರ್ಮಕೀರ್ತಿ ರಾಜ್ ಜೊತೆ “ಖಡಕ್” ಚಿತ್ರದಲ್ಲಿ ನಟಿಸಿದೆ. ಮತ್ತು ಈ ವರ್ಷ “ಪೆಂಟಗಾನ್” ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದಲ್ಲದೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಹಾರರ್ ಥ್ರಿಲ್ಲರ್ ಚಿತ್ರ “ ದಮಯಂತಿ” ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತ್ತು.
• ಸದ್ಯ ಕೈನಲ್ಲಿರುವ ಚಿತ್ರಗಳು ಯಾವುದು ಯಾವ ಹಂತದಲ್ಲಿವೆ?
ಸದ್ಯ “ಸಹರ” ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದೇನೆ ಮನಾಲಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.ಇತ್ತೀಚೆಗೆ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೇವೆ. ಹಿಮಾಚಲ ಪ್ರದೇಶದ ಹಲವು ಕಡೆ 20 ದಿನಗಳ ಕಾಲ ಚಿತ್ರೀಕರಣ ಮಾಡಿದೆವು. ಈ ಚಿತ್ರದಲ್ಲಿ ಹಿಮಾಚಲ ಪ್ರದೇಶದ ಹುಡುಗಿ ಓದಲು ಮೈಸೂರಿಗೆ ಬರುವ ಪಾತ್ರ. ಅಲ್ಲಿ ನಾಯಕ-ನಾಯಕಿಗೆ ಪ್ರೀತಿ ಆಗಿರುತ್ತದೆ ಅದನ್ನು ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಓದು ಮುಗಿಸಿಕೊಂಡು ಹಿಮಾಚಲ ಪ್ರದೇಶಕ್ಕೆ ವಾಪಸ್ ಬರುತ್ತಾಳೆ, ತಾನು ಪ್ರೀತಿಸಿದ ಹುಡುಗಿಯನ್ನು ಹುಡುಕಿಕೊಂಡು ನಾಯಕ ಬರುತ್ತಾನೆ. ನಾಯಕಿಯನ್ನು ಹುಡುಕಿಕೊಂಡು ಮನಾಲಿಗೆ ನಾಯಕ ಬರುವಂತಹ ಪಾತ್ರ. ಚಿತ್ರದಲ್ಲಿ ನಾಯಕಿಯ ಹೆಸರು.ಸಹರಾ ಅದೇ ಹೆಸರಲ್ಲಿ ಪಾತ್ರ ಮಾಡುತ್ತಿದ್ದೇನೆ. ಖುಷಿಯ ವಿಷಯ.
• “ವೈರಸ್” ಚಿತ್ರದಲ್ಲಿ ಯಾವ ರೀತಿಯ ಪಾತ್ರ?
“ವೈರಸ್ “ ಚಿತ್ರ ವೈದ್ಯಕೀಯ ಮಾಫಿಯಾ ಸುತ್ತಾ ಸಾಗುವ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಹಿರಿಯ ನಟಿ ಪ್ರಿಯಾಂಕ ಉಪೇಂದ್ರ ಮತ್ತು ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ. ಇನ್ನುಳಿದಂತೆ ಬೆಂಗಳೂರು ಇನ್ ಚಿತ್ರ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆದಿದೆ. ಧರ್ಮ ಕೀರ್ತಿರಾಜ್ ಮತ್ತು ನಾನು ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಂಡಿದ್ದೇವೆ.
• ಚಿತ್ರಕ್ಕಾಗಿ ಬುಲೆಟ್ ಓಡಿಸಿದ್ದೀರಂತೆ ಹೌದಾ?
“ಧೈರ್ಯಂ ಸರ್ವತ್ರ ಸಾಧನಂ” ಚಿತ್ರ ಚಿತ್ರೀಕರಣ ಪೂರ್ಣಗೊಂಡಿದ್ದು ಹಳ್ಳಿಯ ಹಿನ್ನೆಲೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕಾಗಿ ಬುಲೆಟ್ ಓಡಿಸಿದ್ದೇನೆ. ಬಂದೂಕಿನಲ್ಲಿ ಶೂಟ್ ಮಾಡುವುದನ್ನು ಕಲಿತಿದ್ದೇನೆ. ನಾಯಕಿ ಸ್ಟ್ರಾಂಗ್ ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಒಳ್ಳೆಯ ಪಾತ್ರ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಮಾಹಿತಿ ಹಂಚಿಕೊಂಡರು.