“ಜೈ ಮಾತಾ ಕಂಬೈನ್ಸ್” ನಿರ್ಮಾಣದ “ನಿನಗಾಗಿ” ಧಾರಾವಾಹಿ ಮೂಲಕ ಮರಳಿ ಕಿರುತೆರೆಯತ್ತ ಕಲಾವಿದ ಯತಿರಾಜ್
ಪತ್ರಕರ್ತ, ನಟ, ನಿರ್ದೇಶಕ ಯತಿರಾಜ್ ಇದೀಗ ಸುಧೀರ್ಘ ಸಮಯದ ನಂತರ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಜೈ ಮಾತಾ ಕಂಬೈನ್ಸ್ ನ ” ನಿನಗಾಗಿ ” ಎನ್ನುತ್ತಿದ್ದಾರೆ. ನಿನಗಾಗಿ ಧಾರಾವಾಹಿಯಲ್ಲಿ ಯತಿರಾಜ್ ಬಣ್ಣ ಹಚ್ಚಿದ್ದು, ಪ್ರತಿದಿನ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯ ಮೂಲಕ ಮನೆ ಮನೆ ತಲುಪುತಿದ್ದಾರೆ.
ಈಗಾಗಲೇ ಯಶಸ್ಸಿನ ಹಾದಿಯಲ್ಲಿರುವ ‘ನಿನಗಾಗಿ’ ದಾರಾವಾಹಿಯನ್ನು ಸಂಪೃಥ್ವಿ ನಿರ್ದೇಶಿಸುತ್ತಿದ್ದು, ಇದರಲ್ಲಿ ಯತಿರಾಜ್ ನಾಯಕಿ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ದಿವ್ಯ ಉರುಡುಗ ನಟಿಸುತ್ತಿರುವುದು ಮತ್ತೊಂದು ವಿಶೇಷ.
ಸದಾ ಟ್ರಿಮ್ ಆಗಿ ಕಾಣಿಸಿಕೊಳ್ಳುತ್ತಿದ್ದ ಯತಿರಾಜ್ , ಈ ಪಾತ್ರಕ್ಕಾಗಿ ಗಡ್ಡ ಬೆಳೆಸಿ ಮುಖದಲ್ಲಿ ಪ್ರಬುದ್ದತೆ ತುಂಬಿಕೊಂಡಿದ್ದಾರೆ.’ಎಲ್ಲರ ನಡುವೆ ಇದ್ದರೂ ಅಜ್ಞಾತವಾಸಿಯಾಗಿ, ಅಂತರ್ಮುಖಿಯಾಗಿ, ವೇದನೆ ಹೊರಹಾಕದೆ ಒಳಗೊಳಗೆ ನೋಯುವ- ಬೇಯುವ ಅಪರೂಪದ ಪಾತ್ರವಿದು. ಅಭಿನಯಕ್ಕೆ ಹೆಚ್ಚು ಒತ್ತು ನೀಡುವ ಅನೇಕ ಸನ್ನಿವೇಶಗಳನ್ನು ಲೇಖಕಿ ಯಶಾ ಶೆಟ್ಟಿ ಅವರು ಸೃಷ್ಠಿಸಿರುವುದು ನನಗೆ ವರವಾಗಿದೆ’ ಅನ್ನೋದು ಯತಿರಾಜ್ ಅಭಿಪ್ರಾಯ.
ಸ್ವಂತ ಮಗಳು ಎದುರಿಗಿದ್ದರೂ ಅವಳನ್ನು ಮಗಳೇ ಎಂದು ಕರೆಯಲಾಗದೆ ತೊಳಲಾಡುವ ಪಾತ್ರವನ್ನು ಎಲ್ಲರೂ ಕೊಂಡಾಡುತ್ತಿರುವ ಸಂಗತಿ ಯತಿರಾಜ್ ಕಿವಿಗೂ ತಲುಪಿದ್ದು, ವೀಕ್ಷಕರ ಈ ಪ್ರತಿಕ್ರಿಯೆಗೆ ಕೃತಜ್ಞತೆ ಸಲ್ಲಿಸುವುದನ್ನು ಯತಿರಾಜ್ ಮರೆಯವುದಿಲ್ಲ.
ಸಿನಿಮಾದಲ್ಲಿ ಕಾಣಬರುವ ಶ್ರೀಮಂತಿಕೆಯ ಸನ್ನಿವೇಶಗಳನ್ನು ದಾರಾವಾಹಿಯಲ್ಲೂ ನೀವುಗಳು ನೋಡಬಹುದು ಎನ್ನುವ ಯತಿರಾಜ್, ಅಷ್ಟೇ ದೊಡ್ಡ ಮಟ್ಟದ ತಾರಾ ಬಳಗವನ್ನು ನಿರ್ಮಾಪಕರು ತುಂಬಿರುವುದರಿಂದ ಧಾರಾವಾಹಿಯ ಮೆರಗು ಹೆಚ್ಚಿದೆ ಎನ್ನುತ್ತಾರೆ ಅವರು
ಜೀವನ್ ಅವರ ಕಲರ್ ಫುಲ್ ಛಾಯಾಗ್ರಹಣದಲ್ಲಿ ಮೂಡಿಬರುತ್ತಿರುವ ಧಾರಾವಾಹಿಯಲ್ಲಿ ಋತ್ವಿಕ್, ಬೇಬಿ ಸಿರಿ, ಸೋನಿಯಾ, ವಿಜಯ್ ಕೌಂಡಿನ್ಯ, ವಿಕ್ಟರಿ ವಾಸು, ಪುನೀತ್, ಕಾಮಿಡಿ ಕಿಲಾಡಿ ಖ್ಯಾತಿಯ ಮನೋಹರ್, ಸುಮೋಕ್ಷ, ಮಾನಸ, ಜಗದೀಶ್ ಮಲ್ನಾಡ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ.