ಶ್ರೀ ವಾದಿರಾಜ ಜೀವನಾಧಾರಿತ ಕಥೆಗೆ – ‘ಋಜುವರ ಶ್ರೀವಾದಿರಾಜರು’ ಟೈಟಲ್ ಪೋಸ್ಟರ್ ಅನಾವರಣ
ಕಿರುತೆರೆಯ ಖ್ಯಾತ ನಿರ್ದೇಶಕ ಹಯವದನ ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಜೀವನಾಧಾರಿತ ಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ವಾದಿರಾಜ ಸ್ವಾಮಿಗಳ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರ ಆಶೀರ್ವಾದೊಂದಿಗೆ ಈಗಾಗಲೇ ಸಿನಿಮಾ ಸೆಟ್ಟೇರಿದೆ. ಇದೀಗ ಸಿನಿಮಾ ತಂಡ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿದೆ.
ವಾದಿರಾಜರ ಬದುಕಿನ ಚಿತ್ರಣವನ್ನು ತೆರೆ ಮೇಲೆ ತರುವಾಗ ಅವರ ವ್ಯಕ್ತಿತ್ವಕ್ಕೆ ಯಾವುದೇ ಚ್ಯುತಿ ಬಾರದಂತೆ ಕಟ್ಟಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಸ್ಕ್ರಿಪ್ಟ್ ಕೆಲಸ ಹಾಗೂ ಕಲಾವಿದರ ಆಯ್ಕೆ ವಿಚಾರದಲ್ಲಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಜೊತೆಗೆ 15ನೇ ಶತಮಾನದ ಕಥೆ ಇದು ಆ ಕಾಲಘಟ್ಟವನ್ನು ಸೃಷ್ಟಿಸುವುದೇ ಚಾಲೆಂಜಿಂಗ್ ಕೆಲಸ. ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಹಯವದನ ತಿಳಿಸಿದ್ದಾರೆ. ಸದ್ಯ ನಿರ್ದೇಶಕರು ತಮ್ಮ ಚೊಚ್ಚಲ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ವಿಕ್ರಮ್ ಹತ್ವಾರ್, ನಿರ್ದೇಶಕ ಹಯವದನ ಸಿನಿಮಾ ಕಥೆಯ ಕೆಲಸ ನಿರ್ವಹಿಸುತ್ತಿದ್ದು, ತಾರಾಬಳಗ ಹಾಗೂ ತಾಂತ್ರಿಕ ಬಳಗದ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ಸ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ, ಸಿಂಧು ಹಯವದನ ಹಾಗೂ ಸ್ನೇಹಿತರು ಚಿತ್ರದ ನಿರ್ಮಾಣ ಸಾರಥ್ಯ ವಹಿಸಿಕೊಂಡಿದ್ದಾರೆ.