1000th celebration for "Bombat Bhoja": Fourth edition starts from tomorrow.

ಬೊಂಬಾಟ್ ಭೋಜನ” ಕ್ಕೆ ಸಾವಿರದ ಸಂಭ್ರಮ : ನಾಳೆಯಿಂದ ನಾಲ್ಕನೇ ಆವೃತ್ತಿ ಆರಂಭ . - CineNewsKannada.com

ಬೊಂಬಾಟ್ ಭೋಜನ” ಕ್ಕೆ ಸಾವಿರದ ಸಂಭ್ರಮ : ನಾಳೆಯಿಂದ ನಾಲ್ಕನೇ ಆವೃತ್ತಿ ಆರಂಭ .

ನಟ-ನಿರ್ದೇಶಕ ಸಿಹಿಕಹಿ ಚಂದ್ರು ಸ್ಟಾರ್ ಸುವರ್ಣದಲ್ಲಿ ನಡೆಸಿಕೊಡುತ್ತಿರುವ `ಬೊಂಬಾಟ್ ಭೋಜನ’ ಕಾರ್ಯಕ್ರಮ ಇದೀಗ 1000 ಸಂಚಿಕೆಗಳನ್ನು ಪೂರೈಸಿದೆ. ಈ ಕಾರ್ಯಕ್ರಮದ ಮೂರನೇ ಆವೃತ್ತಿ ಇದೀಗ ಮುಗಿದಿದ್ದು, ಜನವರಿ 15ರಂದು ಮಕರ ಸಂಕ್ರಾಂತಿಯಂದು ನಾಲ್ಕನೇ ಆವೃತ್ತಿ ಆರಂಭವಾಗಲಿದೆ.

ಮೂರನೇ ಸೀಸನ್ 1000 ಕಂತುಗಳನ್ನು ಮುಗಿಸಿರುವ ಹಾಗೂ ನಾಲ್ಕನೆಯ ಆವೃತ್ತಿ ಆರಂಭವಾಗಲಿರುವ ಈ ಹೊತ್ತಿನಲ್ಲಿ ಚಂದ್ರು ಸಂಭ್ರಮದ ಸಮಾರಂಭವೊಂದನ್ನು ಆಯೋಜಿಸಿದ್ದರು. ಆಪ್ತರು, ಮಿತ್ರರು ಮತ್ತು ವಾಹಿನಿಯವರನ್ನು ಆಮಂತ್ರಿಸಿ ಒಂದು ವಿಶೇಷ ಕಾರ್ಯಕ್ರಮವನ್ನು ಮಾಡಿ, ಬಂದವರಿಗೆ “ಬೊಂಬಾಟ್ ಭೋಜನ” ಹಾಕಿಸಿ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಣೆ ನೀಡಿದರು.

ಮೂರನೆಯ ಆವೃತ್ತಿಯ ಬಗ್ಗೆ ಮಾತನಾಡಿದ ಚಂದ್ರು, ನಾಡಿನ ಹಲವು ಜಿಲ್ಲೆಗಳಿಗೆ ಹೋಗಿ ಅಲ್ಲಿನ ಮಹಿಳಾ ಮಂಡಳಿ ಸದಸ್ಯರಿಗೆ ಅಡಿಗೆ ಮಾಡಿ ತೋರಿಸಲಾಗಿದೆ. ಆಹ್ವಾನಿಸಿದವರ ಮನೆಗೆ ಹೋಗಿ ಅವರು ಪ್ರೀತಿಯಿಂದ ಮಾಡಿದ ತಿಂಡಿಯನ್ನು ಸವಿದು ಬಂದಿದ್ದೇನೆ. ಬರೀ ಅಡುಗೆಯಷ್ಟೇ ಅಲ್ಲ,ಅಂದ ಚೆಂದ’ ಎಂಬ ಹೊಸ ವಿಭಾಗಗಳ ಮೂಲಕ ಮಹಿಳೆಯರು ತಮ್ಮ ಅಂದ ಹೆಚ್ಚಿಸಿಕೊಳ್ಳು ಮೇಕಪ್, ಕೇಶವಿನ್ಯಾಸ ತರಬೇತಿ ನೀಡಲಾಗಿದೆ. ಗೌರಿಯಮ್ಮ ನಡೆಸಿಕೊಡುವ `ಅಂಗೈಲಿ ಆರೋಗ್ಯ’ ವಿಭಾಗದಲ್ಲಿ ಹಲವು ಆರೋಗ್ಯದ ಟಿಪ್ಸ್ ಗಳನ್ನು ನೀಡಲಾಗಿದೆ. ಈ ಬಾರಿ ಅಮೇರಿಕಾ, ಆಫ್ರಿಕಾ ಮುಂತಾದ ಕಡೆ ಹೋಗಿ ಅಡುಗೆ ಕಾರ್ಯಕ್ರಮ ಮಾಡಿ ಬಂದಿರುವುದು ವಿಶೇಷ ಎಂದರು.

ಬೊಂಬಾಟ್ ಭೋಜನ " ಸೀಸನ್ 3ರಲ್ಲಿಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭಾಸ್ಕರ್ ರಾವ್, ಸುಧಾ ಮೂರ್ತಿ, ಗುರುರಾಜ ಕರ್ಜಗಿ ಸೇರಿದಂತೆ ಹಲವರು ಗಣ್ಯರು ಭಾಗವಹಿಸಿದ್ದಾರೆ. ಶಿವಕುಮಾರ್ ಇಬ್ಬರೂ ಬಾಲ್ಯ ಸ್ನೇಹಿತರು. ಯಾವತ್ತೂ ಏನೂ ಕೇಳಿರಲಿಲ್ಲ. ಈ ಕಾರ್ಯಕ್ರಮಕ್ಕೆ ಬರುವಂತೆ ಕೇಳಿದಾಗ, ಸಂತೋಷದಿಂದ ಬಂದು ಭಾಗವಹಿಸಿದರು. ಗುರುರಾಜ ಕರ್ಜಗಿ ನಮ್ಮ ಮೇಷ್ಟ್ರು. ಅವರು ಸಹ ಪ್ರೀತಿಯಿಂದ ಬಂದರು. ಹೀಗೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ’ ಎಂದು ಚಂದ್ರು ತಿಳಿಸಿದರು.

`ಬೊಂಬಾಟ್ ಭೋಜನ’ ಮೂರು ಸೀಸನ್‍ಗಳಿಂದ 2000ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿವೆ. ಇದೊಂದು ದಾಖಲೆ ಎಂದು ಮಾಹಿತಿ ನೀಡಿದ ಸಿಹಿಕಹಿ ಚಂದ್ರು, ಮುಂದಿನ ದಿನಗಳಲ್ಲಿ ನೋಡಿಕೊಂಡು ಗಿನ್ನೀಸ್ ಅಥವಾ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆಗಳಿಗೆ ಸೂಕ್ತ ದಾಖಲೆ ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ `ಬೊಂಬಾಟ್ ಭೋಜನ 3′ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಾಗೆಯೇ, ಚಂದ್ರು ಅವರನ್ನು ಸ್ಟಾರ್ ಸುವರ್ಣ ವಾಹಿನಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ನಾಳೆಯಿಂದ ಹೊಸ ಸೀಸನ್ ಆರಂಭ:

.
ಕನ್ನಡ ಕಿರುತೆರೆ ಇತಿಹಾಸದಲ್ಲೇ 1000 ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಷೋ “ಬೊಂಬಾಟ್ ಭೋಜನ”. ಈಗಾಗಲೇ 3 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದು ನಾಳೆ 12 ಗಂಟೆಯಿಂದ 4ನೇ ಆವೃತ್ತಿಯೊಂದಿಗೆ ಬರಲು ಸಜ್ಜಾಗಿದೆ.

‘ಬೊಂಬಾಟ್ ಭೋಜನ ಸೀಸನ್ 4’ ಅನೇಕ ವಿಶೇಷತೆಗಳೂ

  • ನಿಮ್ಮ ಅಡುಗೆ : ಜನಸಾಮಾನ್ಯರು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುವುದು.
  • ಆರೋಗ್ಯವೇ ಭಾಗ್ಯ : ಡಾ. ಗೌರಿ ಸುಬ್ರಮಣ್ಯ ಅವರು ಜನರಿಗೆ ಉಪಯುಕ್ತವಾದ ಮನೆಮದ್ದನ್ನು ಇಲ್ಲಿ ತಿಳಿಸುತ್ತಾರೆ.
  • ಮನೆ ಊಟ : ಒಬ್ಬರ ಮನೆಗೆ ಸಪ್ರ್ರೈಸ್ ಎಂಟ್ರಿ ಕೊಟ್ಟು, ಅವರು ತಯಾರಿಸಿರುವ ಅಡುಗೆಯ ರುಚಿಯನ್ನು ಸವಿದು ಅವರೊಂದಿಗೆ ಮಾತುಕತೆ ನಡೆಸುವುದು.
  • ನಮ್ಮೂರ ಊಟ : ಕರ್ನಾಟಕದಾದ್ಯಂತ ಚಲಿಸಿ, ಜನಪ್ರಿಯತೆಗಳಿಸಿರುವ ವರ್ಷಗಳ ಇತಿಹಾಸವಿರುವ ಹೋಟೆಲ್ ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಜನರಿಗೆ ತಿಳಿಸುವುದು.
  • ಸವಿಯೂಟ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್ ಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ರವರು ವಿಭಿನ್ನ ಅಡುಗೆ ಡಿಶ್ ಗಳನ್ನು ತಯಾರಿಸುತ್ತಾರೆ.
  • ಟಿಫನ್ ಕ್ಯಾರಿಯರ್ : ಬೆಳಗ್ಗೆ ಆಫೀಸ್, ಸ್ಕೂಲ್ ಗೆ ಹೋಗೋರಿಗೆ ಡಬ್ಬಿಗೆ ಕಟ್ಟಿಕೊಡಬಹುದಾದ ಬಲು ಸುಲಭವಾಗಿರುವ ತಿನಿಸುಗಳನ್ನು ಹೇಳಲಾಗುತ್ತದೆ
  • ತಿಂಡಿ-ತಿನಿಸು : ಸಂಜೆಯ ಚಹಾಕ್ಕೆ ಸವಿಯಬಹುದಾದ ಹೊಸ ಬಗೆಯ ಕುರುಕ್ ತಿಂಡಿಗಳನ್ನು ಹೇಳಲಾಗುವುದು.
  • ಮುಖ್ಯ ಅಥಿತಿ : ‘ಬೊಂಬಾಟ್ ಭೋಜನ’ ಸೆಟ್ ಗೆ ಜನಪ್ರಿಯ ಕಲಾವಿದರನ್ನು, ಸಿನಿಮಾ ತಾರೆಯರನ್ನು ಕರೆಸಿ ಅವರಿಗಿಷ್ಟವಾದ ಅಡುಗೆಯನ್ನು ಮಾಡಿಕೊಡುವುದು.

ಹೀಗೆ ಅನೇಕ ಹೊಸ ಹೊಸ ಅಡುಗೆ ವಿಭಾಗಗಳನ್ನು ಈ ಬಾರಿಯ ‘ಬೊಂಬಾಟ್ ಭೋಜನ ಸೀಸನ್ 4’ ಹೊಂದಿದೆ. ನಳಮಹಾರಾಜ ಸಿಹಿ ಕಹಿ ಚಂದ್ರು ರವರ ನೇತೃತ್ವದಲ್ಲಿ ಶುರುವಾಗುತ್ತಿರುವ ‘ಬೊಂಬಾಟ್ ಭೋಜನ ಸೀಸನ್ 4’ ಇದೇ ಸೋಮವಾರದಿಂದ ಮಧ್ಯಾಹ್ನ 12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin