ಹಣಕ್ಕಿಂತ ಉತ್ತಮ ಕಥೆ, ಪಾತ್ರಕ್ಕೆ ಆದ್ಯತೆ ಪ್ರತಿಭಾವಂತ ನಟಿ ವೈಷ್ಣವಿ “ಮನ್ ಕಿ ಬಾತ್”
“ಮಿಥುನ ರಾಶಿ” ಧಾರಾವಾಹಿ ಮೂಲಕ ನಾಡಿನ ಮನೆ ಮಾತಾದ ಮುದ್ದು ಮುಖದ ಬೆಡಗಿ ವೈಷ್ಣವಿ, ಕೋಮಲ್ ಕುಮಾರ್ ಅಭಿನಯದ “ಉಂಡೆನಾಮ” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಮಲೆಯಾಳಂ ಮತ್ತು ತಮಿಳು ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲಿ ಕನ್ನಡದ ಕಂಪು ಪಸರಿಸಿದ್ದಾರೆ.
• ಬಣ್ಣದ ಜಗತ್ತಿನ ಯಾನ ಆರಂಭವಾದದ್ದು ಹೇಗೆ?
ಆಗಿನ್ನು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಸಮಯ ಅದು. “ಶಾಂತಂ ಪಾಪಂ” ಧಾರಾವಾಹಿಯಲ್ಲಿ ನಿರ್ದೇಶಕ ವಿನೋದ್ ಡೊಂದಳೆ ನಿರ್ದೇಶಕರಾಗಿದ್ದರು. ಅದರಲ್ಲಿ ಒಂದು ಎಪಿಸೋಡ್‍ನಲ್ಲಿ ಕಾಣಿಸಿಕೊಂಡಿದೆ. ಆನಂತರ ಮೆಘಾ ಧಾರಾವಾಹಿ ನಿರ್ಮಾಣವಾಗುತ್ತಿದೆ. ನಾಯಕಿ ಪಾತ್ರ ಮಾಡುತ್ತೀಯಾ ಎಂದು ಕೇಳಿದರು.ಧಾರಾವಾಹಿಗೂ ಅವರೇ ನಿರ್ದೇಶಕರಾಗಿದ್ದರಿಂದ ನಟಿಸಲು ಒಪ್ಪಿಕೊಂಡೆ. ಹೀಗಾಗಿ ಬಣ್ಣದ ಬದುಕಿನ ಜರ್ನಿ ಆರಂಭವಾಯಿತು.
• ಮಿಥುನ ರಾಶಿ ಧಾರಾವಾಹಿ ಮಾಡುವ ಮುನ್ನ ನಟನಾ ತರಬೇತಿ ಪಡೆದಿದ್ದೀರಾ?
ಇಲ್ಲ. ಯಾವುದೇ ತರಬೇತಿ ಪಡೆದಿಲ್ಲ. ನಾನು ಮೂಲತಃ ಕ್ಲಾಸಿಕಲ್ ಡ್ಯಾನ್ಸರ್. ಹೀಗಾಗಿ ನಟನೆ ಮಾಡುವುದು ಕಷ್ಟವಾಗಲಿಲ್ಲ. ಜೊತೆಗೆ ಆರಂಭದಲ್ಲಿ ಕ್ಯಾಮರಾ ಎದುರಿಸಲು ಯಾವುದೇ ಭಯ ಆಗಲಿಲ್ಲ. ಮಿಥುನ ರಾಶಿ ಧಾರಾವಾಹಿ 950 ಎಪಿಸೋಡು ಬಂದು ಪೂರ್ಣಗೊಂಡಿತು. ಒಂದು ರೀತಿ ಧಾರಾವಾಹಿಯಲ್ಲಿಯ ನಟನೆ ನನಗೆ ನಟನಾ ಶಾಲೆಯಂತಿತ್ತು. ಪ್ರಧಾನ ನಿರ್ದೇಶಕ ವಿನೋದ್ ಡೋಂದಳೆ ಹಾಗು ಸಂಚಿಕೆ ನಿರ್ದೇಶಕ ಮಿಸ್ಸೈ ಕಡೂರು ಅವರು ನಟನೆಯನ್ನು ತಿದ್ದಿ ತೀಡಿದ್ದಾರೆ.ಅವರು ಒಂದು ರೀತಿ ಗುರುಗಳಿದ್ದತೆ ಜೊತೆಗೆ ಇಡೀ ತಂಡ ಸಹಕಾರ ನೀಡಿತು ಇದರಿಂದ ಕಲಿಕೆ ಮತ್ತಷ್ಟು ಸಹಕಾರಿಯಾಯಿ.
• ಧಾರಾವಾಹಿಯಲ್ಲಿ ನಟಿಸುವ ಸಮಯದಲ್ಲಿ ಪಾಸಿಟೀವ್, ನೆಗೆಟೀವ್ ಕಾಮೆಂಟ್ ಪ್ರೇಕ್ಷಕರಿಂದ ಬಂದದ್ದು ಉಂಟಾ?
ದೇವರಿಗೆ ಥ್ಯಾಂಕ್ಸ್ ಹೇಳಬೇಕು. ನನ್ನ ಪಾತ್ರಕ್ಕೆ ನೆಗೆಟೀವ್ ಕಾಮೆಂಟ್ ಬರಲಿಲ್ಲ. ಪಾತ್ರದ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ಇದು ನನ್ನ ನಟನೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ನೆರವಾಯಿತು.
• ಓದು ಮುಂದುವರಿದೆಯಾ ಇಲ್ಲ ನಟನೆಗಾಗಿ ನಿಂತಿದೆಯಾ?
ಧಾರಾವಾಹಿಯಲ್ಲಿ ನಟಿಸುತ್ತಲೇ ಓದು ಕೂಡ ಮುಂದುವರಿದಿತ್ತು. ದ್ವಿತೀಯ ಪದವಿಯ ಸಮಯದಲ್ಲಿ ಕೋವಿಡ್ ಅಲೆ ಕಾಣಿಸಿಕೊಂಡಿದ್ದರಿಂದ ಓದು ಅಲ್ಲಿಗೆ ನಿಂತಿದೆ..ಮಲೆಯಾಳಂ ಮತ್ತು ತಮಿಳು ಧಾರಾವಾಹಿಯಲ್ಲಿ ನಟಿಸುತ್ತಿದ್ದರಿಂದ ಓದಿನ ಕಡೆಗೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಮತ್ತೆ ಮುಂದುವರಿಸುವ ಆಸೆ ಇದೆ.
• ಮಲೆಯಾಳಂ ಮತ್ತು ತಮಿಳು ಧಾರಾವಾಹಿಯಲ್ಲಿ ನಿಮ್ಮ ನಟನೆಗೆ ಪ್ರತಿಕ್ರಿಯೆ ಹೇಗಿದೆ?
ಎರಡೂ ಕಡೆ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ಪ್ರೇಕ್ಷಕರಿಂದ ವ್ಯಕ್ತವಾಗಿದೆ. ತಮಿಳಿನಲ್ಲಿ ಮಿಥುನ ರಾಶಿ ಧಾರಾವಾಹಿಯ ರಿಮೇಕ್ ಮಾಡಿದ್ದರಿಂದ ನಟನೆ ಸುಧಾರಣೆಗೆ ಮತ್ತಷ್ಟು ಅನುಕೂಲವಾಯಿತು.
• ಉಂಡೆನಾಮ ಚಿತ್ರದಲ್ಲಿ ಅವಕಾಶ ಸಿಕ್ಕದ್ದು ಹೇಗೆ?
ಮಿಥುನ ರಾಶಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ವೇಳೆ ಕೋಮಲ್ ಕುಮಾರ್ ಅವರ ಚಿತ್ರ ಉಂಡೆನಾಮ ಚಿತ್ರದಲ್ಲಿ ನಟಿಸುವ ಅವಕಾಶ ಬಂತು. ಚಿತ್ರದಲ್ಲಿ ನನ್ನದು ಬೋಲ್ಡ್ ಪಾತ್ರ. ಬೋಲ್ಡ್ ಪಾತ್ರ ಅಂದರೆ ಹೇಗಿರುತ್ತದೆಯೋ ಮಾಡಬೇಕೋ ಬಿಡಬೇಕು ಅನ್ನುವ ಜಿಜ್ಞಾಸೆ ಕಾಡಿತ್ತು ಸಹಜ.ನಿರ್ದೇಶಕ ಕೆ.ಎಲ್ ರಾಜಶೇಖರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದಾಗ ಬೋಲ್ಡ್ ಪಾತ್ರ ಅಂದರೆ ವಲ್ಗರ್ ಅಲ್ಲ. ನಟಿಸಬಹುದು ಅನ್ನಿಸಿತು.ಹೀಗಾಗಿ ಒಪ್ಪಿಕೊಂಡೆ. ಚಿತ್ರದಲ್ಲಿ ನನ್ನ ಪಾತ್ರ ತಿರುವು ಕೊಡುವ ಪಾತ್ರ. ಎಲ್ಲರಿಗೂ ಇಷ್ಟವಾಗಲಿದೆ ಎಂದು ವಿಶ್ವಾಸ ಹೊರಹಾಕಿದರು.
• ಯಾವ ರೀತಿಯ ಪಾತ್ರ ಮಾಡುವಾಸೆ
ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇದೆ. ಅವಕಾಶ ಸಿಕ್ಕರೆ ಈ ಮಾದರಿಯ ಚಿತ್ರ ಮತ್ತು ಪಾತ್ರದಲ್ಲಿ ನಟಿಸುತ್ತೇನೆ. ಜೊತೆಗೆ ಮಾಡುವ ಪಾತ್ರ ಪ್ರಯೋಗಾತ್ಮಕವಾಗಿರಬೇಕು.ನಟನೆಗೆ ಸವಾಲಾಗಿರಬೇಕು. ಇಂತಹ ಪಾತ್ರಗಳಲ್ಲಿ ನಟಿಸಲು ಹೆಚ್ಚು ಆಸಕ್ತಿ ಇದೆ. ಆ ರೀತಿಯ ಪಾತ್ರ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ. ಜೊತೆಗೆ ಒಂದೇ ರೀತಿಯ ಪಾತ್ರ ಮಾಡುವುದೂ ಇಲ್ಲ. ವಿಭಿನ್ನತೆ ಇರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಕಡೆಗೆ ಆದ್ಯತೆ ನೀಡುತ್ತೇನೆ.
• ಧಾರಾವಾಹಿ ಅಥವಾ ಸಿನಿಮಾ ಆಯ್ಕೆ ಮಾಡಿಕೊಳ್ಳುವಾಗ,ಯಾವ ವಿಷಯದ ಕಡೆಗೆ ಗಮನ ಹರಿಸುತ್ತೀರಾ, ಕಥೆಯಾ? ಅಥವಾ ದುಡ್ಡಾ?
ಧಾರಾವಾಹಿ ಅಥವಾ ಸಿನಿಮಾ ಯಾವುದೇ ಇರಲಿ.ಒಳ್ಳೆಯ ಕತೆ ಇರಬೇಕು. ನನ್ನ ಪಾತ್ರಕ್ಕಿರುವ ಮಹತ್ವ ನೋಡಿ ಆ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತೇನೆ. ನಟನೆ ನನ್ನ ಪ್ಯಾಶನ್. ಹೀಗಾಗಿ ಮಾಡುವ ಪಾತ್ರ ಜನರಿಗೆ ಇಷ್ಟವಾಗಬೇಕು. ದುಡ್ಡು ಹೇಗೇ ಬೇಕಾದರೂ ಸಂಪಾದಿಸಬಹುದು ಆದರೆ. ಒಳ್ಳೆಯ ಪಾತ್ರ ಮತ್ತು ಕಥೆ ಸಿಕ್ಕರೆ ಇಂದೂ ಮುಂದೆ ನೋಡದೆ ಒಪ್ಪಿಕೊಳ್ಳುತ್ತೇನೆ.
• ಸಿನಿಮಾ ಗಳಲ್ಲಿ ಹೊಸ ಅವಕಾಶ ಬಂದಿದೆಯಾ?
ಹೊಸ ಹೊಸ ಅವಕಾಶಗಳು ಬರುತ್ತಿವೆ. ಬಂದ ಕತೆಗಳನ್ನು ಒಪ್ಪಿಕೊಳ್ಳುತ್ತಿಲ್ಲ.ಮೊದಲೇ ಹೇಳಿದ ಹಾಗೆ ಕಥೆ ಹಾಗು ನನ್ನ ಪಾತ್ರಕ್ಕಿರುವ ಮಹತ್ವ ನೋಡಿಕೊಂಡು ನಟಿಸಬೇಕೋ ಅಥವಾ ಬೇಡವೋ ಎನ್ನುವುದನ್ನು ನಿರ್ಧರಿಸುತ್ತೇನೆ. ಒಳ್ಳೆಯ ಕಥೆ ಮತ್ತು ಚಿತ್ರ ಬಂದಾಗ ಕಂಡಿತ ಅದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ.
• ಧಾರಾವಾಹಿಯಲ್ಲಿ ನಟಿಸುವಾಗ ನಿಮ್ಮ ಪಾತ್ರ ನೋಡಿ ಸುಧಾರಿಸಿಕೊಳ್ಳಬೇಕು ಅನ್ನಿಸಿತ್ತಾ ಅಥವಾ ತೃಪ್ತಿ ಇತ್ತಾ
ಕಲಾವಿದರಿಗೆ ತೃಪ್ತಿಯ ಮಾತೇ ಬರುವುದಿಲ್ಲ. ಮೊದ ಮೊದಲ ಕೆಲವು ಎಪಿಸೋಡ್‍ಗಳಲ್ಲಿ ಅತ್ಯುತ್ತಮವಾಗಿ ಮೂಡಿಬರುತ್ತಿದೆ ಎಂದು ಆಪ್ತರು, ಸಹ ಕಲಾವಿದರು ಸೇರಿದಂತೆ ಪರಿಚಿತರೆಲ್ಲಾ ಹೇಳುತ್ತಿದ್ದರು. ಆದರೆ ನನ್ನ ಪಾತ್ರ ನೋಡಿ ನಾನು ಇನ್ನು ಒಂದಿಷ್ಟು ಸುಧಾರಣೆ ಮಾಡಿಕೊಳ್ಳಬಹುದಿತ್ತು ಅನ್ನಿಸಿತ್ತು. ಎಪಿಸೋಡ್‍ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಟನೆಯಲ್ಲಿ ಮತ್ತಷ್ಟು ಸುಧಾರಣೆ ಕಂಡೆ. 950 ಎಪಿಸೋಡ್‍ಗಲಾಗುವಷ್ಟರಲ್ಲಿ ಸಂಪೂರ್ಣ ಬದಲಾಗಿದೆ. ತಪ್ಪುಗಳನ್ನು ಗಮನಿಸಿ ಅವುಗಳನ್ನು ಸರಿ ಮಾಡಿಕೊಂಡು ಮುನ್ನೆಡೆದಿದ್ದೆ.
• ಧಾರಾವಾಹಿ ನಿರ್ದೇಶಕರು ಮತ್ತು ಸಹ ಕಲಾವಿದರ ಸಹಕಾರ ಹೇಗಿತ್ತು?
ಮಿಥುನ ರಾಶಿ ಧಾರಾವಾಹಿಯಲ್ಲಿ ನಟಿಸುವಾಗ ಸಹ ಕಲಾವಿದರಿಂದ ಉತ್ತಮ ಸಹಕಾರ ಸಿಕ್ಕಿತ್ತು.ಜೊತೆಗೆ ಧಾರಾವಾಹಿ ಪ್ರಧಾನ ನಿರ್ದೇಶಕರಾದ ವಿನೋದ್ ಡೋಂದಳೆ ಮತ್ತು ಸಂಚಿಕೆ ನಿರ್ದೇಶಕರ ಮಿಸ್ಸೈ ಕಡೂರು ಅವರಿಂದ ಸಿಕ್ಕ ಪ್ರೋತ್ಸಾಹ ಮತ್ತು ಸಹಕಾರದಿಂದ ಚಿತ್ರದಲ್ಲಿ ಶಕ್ತಿ ಮೀರಿ ನಟಿಸಲು ಸಾಧ್ಯವಾಯಿತು ಎಂದರು ವೈಷ್ಣವಿ.