ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿಲ್ಲ: “ಬ್ರಾಹ್ಮಿನ್ಸ್ ಕೆಫೆ” ಧಾರಾವಾಹಿ ತಂಡದ ಸ್ಪಷ್ಟನೆ
ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಬ್ರಾಹ್ಮಿನ್ಸ್ ಕೆಫೆ” ಧಾರಾವಾಹಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ನಿಂದನೆ ಅಥವ ಅವಹೇಳನಕಾರಿಯಾಗುವಂತೆ ಧಾರಾವಾಹಿಯಲ್ಲಿ ಯಾವುದೇ ಸನ್ನಿವೇಶಗಳು ಇಲ್ಲ, ಎಂದು ಧಾರಾವಾಹಿ ತಂಡ ಸ್ಪಷ್ಟಪಡಿಸಿದೆ.
ನಿರ್ದೇಶಕ ಸಂಜೀವ್ ತಗಡೂರು ಸೇರಿದಂತೆ ಇಡೀ ಧಾರಾವಾಹಿ ತಂಡ ಸ್ಪಷ್ಟನೆ ನೀಡಿ, ಅವಹೇಳನಕಾರಿಯಾಗುವ ಯಾವುದೇ ರೀತಿಯ ಸಂಭಾಷಣೆಗಳು,ಸನ್ನಿವೇಶ ಇಲ್ಲ ಆದರೂ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.
ನಿರ್ದೇಶಕ ಸಂಜೀವ್ ತಗಡೂರ್ ಮಾತನಾಡಿ, ಜಾತಿಯಲ್ಲಿ ನಾನೂ ಬ್ರಾಹ್ಮಣನೇ.ಜೊತೆಗೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಬಹುತೇಕ ಕಲಾವಿದರು ಬ್ರಾಹ್ಮಣರೇ ಹೀಗಿರುವಾಗ ನಮ್ಮ ಸಮುದಾಯದ ಬಗ್ಗೆ ಹೆಮ್ಮೆ ಇದೆ. ಇಂತಹುದರಲ್ಲಿ ಅವಮಾನ ಮಾಡುವ ಕೆಲಸ ಮಾಡಿಲ್ಲ ಎಂದು ಹೇಳಿದರು.
ಧಾರಾವಾಹಿಯಲ್ಲಿ ಬಳಸಲಾಗಿರುವ ಸಂಭಾಷಣೆ ಮತ್ತು ಸನ್ನಿವೇಶಗಳ ಕುರಿತು ವಾಹಿನಿಗೆ, ಮತ್ತು ನನಗೆ ಪ್ರತಿನಿತ್ಯ ಕರೆಗಳು ಬರುತ್ತಿವೆ. ಅದಕ್ಕೆ ಸ್ಪಷ್ಟನೆ ನೀಡಿದರೂ ಕೇಳುತ್ತಿಲ್ಲ. ಸನ್ನಿವೇಶವನ್ನು ಪೂರ್ತಿಯಾಗಿ ನೋಡಿದರೆ ಅರ್ಥವಾಗುತ್ತದೆ.ಆದರೆ ಕೆಲ ಭಾಗವನ್ನು ನೋಡಿ ಅದನ್ನೇ ದೊಡ್ಡದು ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದರು
ಇದಕ್ಕೆ ಕಲಾವಿದರಾದ ಶ್ರೀನಾಥ್ ವಸಿಷ್ಠ,ಮೇಘನಾ ಶಣೈ, ಜಗದೀಶ್ ಮಲ್ನಾಡ್, ರಾಮಸ್ವಾಮಿ ಗೌಡ, ರೂಪೇಶ್,ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಸೇರಿದಂತೆ ಇಡೀ ಚಿತ್ರತಂಡ ಯಾವುದೇ ಅವಹೇಳನಕಾರಿಯಾಗಿ ನಡೆದುಕೊಂಡಿಲ್ಲ ಎಂದು ಧ್ವನಿಗೂಡಿಸಿದರು
ಹಿರಿಯ ಕಲಾವಿದ ಶ್ರೀನಾಥ್ ವಸಿಷ್ಠ ಮತನಾಡಿ , ಕಲಾವಿದರಿಗೆ ಯಾವುದೇ ಜಾತಿ ಇಲ್ಲ. ನಾವು ನಮ್ಮ ಕೆಲಸವನ್ನು ಮಾಡಿದ್ದೇವೆ. ಕೆಲವರು ನ್ಯಾಯಾಲಯಕ್ಕೆ ಹೋಗುತ್ತೇವೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಬ್ರಾಹ್ಮಣ ಸಂಘಕ್ಕೆ ದೂರು ನೀಡುತ್ತೇವೆ ಎಂದಿದ್ದಾರೆ ನೀಡಲಿ ಎಲ್ಲಾ ಕಡೆ ಹೋಗಿ ಸ್ಪಷ್ಟನೆ ನೀಡಲು ನಾವಂತೂ ಸಿದ್ದರಿದ್ದೇವೆ ಎಂದು ಹೇಳಿದರು.
ಬ್ರಾಹ್ಮಣ ಸಂಘ ಸೇರಿದಂತೆ ಯಾರೇ ಸ್ಪಷ್ಟನೆ ಕೇಳಿದರೆ ವಿವರ ನೀಡಲು ಸಿದ್ದವಿದ್ದೇವೆ.ಕೆಲವರು ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದಿದ್ದಾರೆ. ನಾವೂ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದರು.ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಹೆಣ್ಣು ಮಗಳು ಹುಟ್ಟತ್ತಲೇ ನರ್ಸ್‍ಗಳ ಕಿತಾಪತಿಯಿಂದ ನವಜಾತ ಶಿಶುಗಳು ಅದಲು ಬದಲಾಗುವ ಕಥೆ ಬ್ರಾಹ್ಮಿನ್ಸ್ ಕೆಫ್ ಹೊಂದಿದೆ. ತನ್ನ ಮಗಳೇ ಮನೆಗೆ ಸೊಸೆಯಾಗಿ ಬರುವ ಕಥೆಯನ್ನು ಹೊಂದಿದೆ. ಆಗಲೂ ವಿವಾದ ಆಗಬಹುದು ಎನ್ನುವ ಮುನ್ಸೂಚನೆಯ ಮಾತನಾಡಿದರು.
ಸಿರಿಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಮಾತನಾಡಿ, ಧಾರಾವಾಹಿ ಪ್ರಸಾರ ಮಾಡುವ ಮುನ್ನ ಅದನ್ನು ಪರಿಶೀಲಿಸಿದ ನಂತರವೇ ಪ್ರಸಾರಕ್ಕೆ ಅನುಮತಿ ನೀಡಲಾಗುತ್ತಿದೆ. ಯಾವುದೇ ವಿವಾದ ಮಾಡುವ ಉದ್ದೇಶ ಧಾರಾವಾಹಿ ತಂಡಕ್ಕಾಗಿ ಅಥವಾ ವಾಹಿನಿಗಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಂಭಾಷಣೆ ಬರೆದಿರುವ ಎಂ.ಎಲ್ ಪ್ರಸನ್ನ, ಧಾರಾವಾಹಿ ನಿರ್ಮಾಪಕರಾದ ಗಾಯತ್ರಿ ಮತ್ತು ಸೆಲ್ವಂ ಹಾಗು ಧಾರಾವಾಹಿಯ ಹಲವು ಕಲಾವಿದರು ಇದೇ ವಿಷಯವನ್ನು ಪುನರುಚ್ಚರಿಸಿದರು