ಕೂಡು ಕುಟುಂಬದ ಹೊಸ ಕಥೆ “ಆನಂದ ನಿಲಯ” : ಆಗಸ್ಟ್ 10 ರಿಂದ ಆರಂಭ
ಕನ್ನಡ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿ ವಿನೂತನ ಕಥಾಹಂದರವುಳ್ಳ ಧಾರಾವಾಹಿಗಳನ್ನು ನೀಡುತ್ತಾ ಬರುತ್ತಿದೆ. ಇತ್ತೀಚೆಗಷ್ಟೇ ಶುರುವಾದ ‘ಜೈಲಲಿತಾ’ ಹಾಗೂ ‘ಮರ್ಯಾದೆ ರಾಮಣ್ಣ’ ಧಾರಾವಾಹಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದೀಗ “ಆನಂದ ನಿಲಯ” ಎಂಬ ಹೊಸ ಕಥೆಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.

ಸುಂದರ ಕೂಡು ಕುಟುಂಬದ ಕಥೆ. ತಂದೆಯ ಹಿಟ್ಟಿನ ಗಿರಣಿ ಒಟ್ಟಾಗಿ ನಿರ್ವಹಿಸೋ ನಾಲ್ಕು ಜನ ಸಹೋದರರು ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್. ತಮ್ಮಂದಿರ ಪಾಲಿಗೆ ತಂದೆಯಾಗಿ, ಗೆಳೆಯನಾಗಿ, ಅಣ್ಣನಾಗಿ ಅವರ ಬೆನ್ನೆಲುಬಾಗಿ ನಿಂತು, ಅವರೇ ತನ್ನ ಸರ್ವಸ್ವವೆಂದು ಬಾಳುತ್ತಿರುವ ಮನೆಯ ಹಿರಿಮಗ ಧರ್ಮ. ಇನ್ನು ಈ ‘ಆನಂದ ನಿಲಯ”ಕ್ಕೆ ಮಹಾಲಕ್ಷ್ಮೀಯಂತಿರೋ ಧರ್ಮನ ಪತ್ನಿ ಸುಧಾ. ಮೈದುನರನ್ನು ಮಕ್ಕಳಂತೆ ಸಾಕಿ ಸಲಹುತ್ತಿರೋ ಈಕೆ, ಧರ್ಮನ ಸಹೋದರರಿಗೆ ಅಮ್ಮನಂತಿರೋ ಅತ್ತಿಗೆ.
ಒಗ್ಗಟ್ಟಿನ ಸಾರವನ್ನು ಸಾರುವ ಈ ಕುಟುಂಬದಲ್ಲಿ ಸಂಬಂಧಗಳ ತಕ್ಕಡಿಯನ್ನು ಸಮಾನವಾಗಿ ತೂಗುತ್ತಿರುವ ಸುಧಾ, ಮುಂಬರುವ ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ. ವೈವಾಹಿಕ ಜೀವನಕ್ಕಿಂತಲೂ ಮೂವರು ಸಹೋದರರ ಸಂತೋಷಕ್ಕೇ ಹೆಚ್ಚಿನ ಆದ್ಯತೆ ನೀಡುವ ಧರ್ಮ ಮತ್ತು ಸುಧಾರ ಬದುಕು ಮುಂದೆ ಹೇಗೆ ಸಾಗಲಿದೆ. ಈ ಮನೆಗೆ ಮುಂದೆ ಸೊಸೆಯರು ಬಂದ ನಂತರ ಇವರೆಲ್ಲರ ಜೀವನ ಮೊದಲಿನಂತೆ ಮುಂದುವರೆಯುತ್ತಾ ಅಥವಾ ಚದುರಿಹೋಗುತ್ತಾ ಎಂಬುದೇ ಮುಖ್ಯ ಕಥಾಹಂದರ.

13 ವರ್ಷಗಳ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ “ಆಕಾಶದೀಪ” ಧಾರಾವಾಹಿ ಖ್ಯಾತಿಯ ನಟಿ ದಿವ್ಯ ಶ್ರೀಧರ್, ಇದೀಗ ವರ್ಷಗಳ ಬಳಿಕ ಈ ಕಥೆಯ ಮೂಲಕ ಸುವರ್ಣ ಪರಿವಾರಕ್ಕೆ ವಾಪಾಸಾಗಿದ್ದು ಸುಧಾ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿರೋ ನಟ ರಾಕೇಶ್, ಅನುಭವಿ ಕಲಾವಿದರಾಗಿದ್ದು ‘ಧರ್ಮ’ ಎಂಬ ಪಾತ್ರದ ಮೂಲಕ ಕಿರುತೆರೆಗೆ ಮರಳಿದ್ದಾರೆ. ಜೊತೆಗೆ ತಮ್ಮಂದಿರಾಗಿ ಕೌಶಿಕ್, ಹರ್ಷ, ನಿತೀಶ್ ಅಭಿನಯಿಸುತ್ತಿದ್ದು, ಜನಪ್ರಿಯ ಕಲಾವಿದೆ ಚಿತ್ಕಲಾ ಬಿರಾದರ್, ಸಿತಾರಾ, ಸಪ್ನ ದೀಕ್ಷಿತ್, ನಯನ ಶೆಟ್ಟಿ, ನಿಶಾ, ರೇಷ್ಮಾ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರ ತಾರಾ ಬಳಗವಿದೆ.

ಖ್ಯಾತ ನಿರ್ಮಾಪಕ ಸುಬ್ರಮಣ್ಯ ಮೂರ್ತಿನಾಥ್ ಅವರ “ನೀಲಾ ಪ್ರೊಡಕ್ಷನ್ಸ್ ” ಎಂಬ ಸಂಸ್ಥೆಯಡಿ ಈ ಧಾರಾವಾಹಿ ನಿರ್ಮಾಣಗೊಳ್ಳುತ್ತಿದ್ದು, ಆದರ್ಶ್ ಹೆಗಡೆ ನಿರ್ದೇಶಿಸುತ್ತಿದ್ದಾರೆ.
ಕೂಡು ಕುಟುಂಬಕ್ಕೆ ಪ್ರೀತಿಯೇ ಆಧಾರ, ಒಗ್ಗಟ್ಟಿಗೆ ಇವರೇ ಸಾಕ್ಷಾತ್ಕಾರ ಶುರುವಾಗ್ತಿದೆ ಮನೆ-ಮನ ತುಂಬುವ ಹೊಸ ಕಥೆ “ಆನಂದ ನಿಲಯ” ಇದೇ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿಯಲ್ಲಿ ಪ್ರಸಾರವಾಗಲಿದೆ


