The story of a younger daughter taking on the responsibility of an elder: “Maina” from February 19

ಹಿರಿಯ ಜವಾಬ್ದಾರಿ ಹೊತ್ತ ಕಿರಿ ಮಗಳ ಕಥೆ: “ಮೈನಾ’ ಫೆಬ್ರವರಿ 19 ರಿಂದ - CineNewsKannada.com

ಹಿರಿಯ ಜವಾಬ್ದಾರಿ ಹೊತ್ತ ಕಿರಿ ಮಗಳ ಕಥೆ: “ಮೈನಾ’ ಫೆಬ್ರವರಿ 19 ರಿಂದ

ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಕನ್ಯಾದಾನ, ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೇವಂತಿ, ರಾಧಿಕಾ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ.

ಹೊಸ ಧಾರಾವಾಹಿ “ಮೈನಾ” ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಫೆಬ್ರುವರಿ 19 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ “ಮೈನಾ” ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಮೈಲಾರಕೋಟೆ ಮೈನಾ ಮನೆಗೆ ಕಿರಿಮಗಳು. ಊರಲ್ಲಿ ಅಲೆಮಾರಿ, ಪರರಿಗೆ ಉಪಕಾರಿ. ಚಿಕ್ಕ ಪೆಟ್ಟಿಗೆ ಅಂಗಡಿ ನಡೆಸುತ್ತಿರುವ ನೀತಿವಂತ ಅಪ್ಪ ಮುತ್ತಣ್ಣ, ಅವರಿವರ ಹೊಲದಲ್ಲಿ ಕೂಲಿ ಮಾಡಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿರುವ ಅಮ್ಮ, ಸೀತೆಯಂಥ ಅಕ್ಕ ರಾಧೆ, ಕಾಲೇಜಿಗೆ ಹೋಗುತ್ತಿರುವ ಅಣ್ಣ.. ಮೈನಾಳ ಪುಟ್ಟ ಗೂಡಲ್ಲಿ ದುಡ್ಡಿಗೆ ಕೊರತೆ; ಪ್ರೀತಿ ವಾತ್ಸಲ್ಯಕ್ಕಲ್ಲ. ಅಕ್ಕ ರಾಧೆಗೆ ಮದುವೆ ವಯಸ್ಸು ಮೀರುತ್ತಿದೆ.

ಸಂಬಂಧ ಕೂಡಿ ಬರುತ್ತಿಲ್ಲ. ಒಂದೊಂದು ಸಲವೂ ಒಂದೊಂದು ಕಾರಣಕ್ಕೆ ಮದುವೆ ಮುರಿದುಹೋಗುತ್ತಿದೆ. ಕೆಲವೊಂದು ಸಂಬಂಧ ಮುರಿಯಲು ಮೈನಾ ನೆಪವಾಗುತ್ತಾಳೆ. ಕಟ್ಟಕಡೆಯದಾಗಿ, ಜವಾಬ್ದಾರಿ ಹೊರಬೇಕಾದ ಅಣ್ಣನೇ ಕೈ ಕೊಟ್ಟು ಹೋದಾಗ ಕಿರಿಮಗಳಾದ ಮೈನಾ ಅಕ್ಕನ ಮದುವೆಯ ಹಿರಿಯ ಜವಾಬ್ದಾರಿ ಹೊತ್ತು ಪಟ್ಟಣಕ್ಕೆ ಹೊರಡುತ್ತಾಳೆ. ಅಲ್ಲಿಂದ ಅವಳ ಪ್ರಯಾಣ ಅನೂಹ್ಯ ತಿರುವುಗಳನ್ನು ಪಡೆದುಕೊಳ್ಳುತ್ತದೆ.

ಮೈನಾ ಪಾತ್ರದಲ್ಲಿ ಜನಪ್ರಿಯ ಕಲಾವಿದೆ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ. ನಾಗಾಭರಣ, ಅಪೂರ್ವ, ಅಂಜಲಿ, ಮಾನಸಿ ಜೋಶಿ, ಸಚಿನ್, ಸಿದ್ದಾರ್ಥ್, ಪ್ರಭಂಜನ, ಸಾಗರ್, ಹರ್ಷಾರ್ಜುನ್, ಯಶಸ್ವಿನಿ, ಆಶಾ, ಅನುಷಾ, ಕು.ತಿಶ್ಯ, ಮಾ.ಅರುಣ್, ಮಾ.ರಣವೀರ್ ಮುಂತಾದವರ ತಾರಾಗಣವಿದೆ. ಚಿತ್ರತಾರೆ ಭವ್ಯ ಅಪರೂಪದ ವಿಶಿಷ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕರು ಸಂತೋಷ್ ಗೌಡ ಹಾಸನ; ಛಾಯಾಗ್ರಹಣ ಜಗದೀಶ್ ವಾಲಿ ಹಾಗೂ ದಯಾಕರ್. ಸಂಗೀತ; ಮಣಿಕಾಂತ ಕದ್ರಿ, ಸಾಹಿತ್ಯ; ಕೆ. ಕಲ್ಯಾಣ್, ಸಂಕಲನ: ಪ್ರಕಾಶ ಕಾರಿಂಜ.

ಆನಂದ್ ಆಡಿಯೋ ಕಂಪನಿಯ ಸಹಸಂಸ್ಥೆ “ಕೋಮಲ್ ಎಂಟಪ್ರ್ರೈಸಸ್ ಬ್ಯಾನರ್ ಅಡಿ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ. ಮಹಿಳೆಯರ ಆತ್ಮಬಲದ ಪ್ರತೀಕವಾಗಿ “ಮೈನಾ” ಮೂಡಿಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ ಉದಯ ಟಿವಿ ಕಾರ್ಯಕ್ರಮ ಮುಖ್ಯಸ್ಥರು.

“ಮೈನಾ” ಧಾರಾವಾಹಿ ಫೆಬ್ರುವರಿ 19 ರಿಂದ ಪ್ರತಿದಿನ ಸೋಮವಾರದಿಂದ ಭಾನುವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin