ಸ್ಟಾರ್ ಸುವರ್ಣ ವಾಹಿನಿಯಲ್ಲಿ “ವಸುದೇವ ಕುಟುಂಬ” : ಕಿರುತೆರೆಗೆ ಹಿರಿಯ ನಟ ಅವಿನಾಶ್ ಎಂಟ್ರಿ
ಕನ್ನಡ ಚಿತ್ರರಂಗದ ಹಿರಿಯ ನಟ ಅವಿನಾಶ್ ಇದೇ ಮೊದಲ ಬಾರಿಗೆ “ವಸುದೇವ ಕುಟುಂಬ” ಮೂಲಕ ಕನ್ನಡ ಕಿರುತೆರೆ ಪ್ರವೇಶ ಮಾಡಿದ್ದಾರೆ. ಜೊತೆಗೆ ಹಿರಿಯ ನಟಿ ಅಂಜಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಧಾರಾವಾಹಿಯ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಧಾರಾವಾಹಿಯಲ್ಲಿ ಹಿರಿಯ ನಟಿ ಮಾಲತಿ ಸುಧೀರ್ ನಟಿಸುತ್ತಿದ್ದಾರೆ.

‘ಕೋರಮಂಗಲ ಟಾಕೀಸ್’ ಎಂಬ ಸಂಸ್ಥೆಯಡಿ ನಿರ್ದೇಶಕ ಅನಿಲ್ ಕೋರಮಂಗಲ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಸೆಪ್ಟಂಬರ್ 15ರ ಬರುವ ಸೋಮವಾರದಿಂದ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಧಾರಾವಾಹಿ ಮೂಡಿ ಬರಲಿದ್ದು ಹಿರಿಯ ನಟ ಅವಿನಾಶ್ ಕಿರುತೆರೆಗೆ ಪ್ರವೇಶ ಪಡೆದಿರುವುದು ಧಾರಾವಾಹಿಗೊಂದು ಘನತೆ ಬಂದಿದೆ.

ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕನ್ನಡ ಕಿರುತೆರೆಗೆ ಬಹುಭಾಷಾ ನಟರಾಗಿರುವ ಅವಿನಾಶ್ ‘ವಸುದೇವ ಕುಟುಂಬ’ ಧಾರಾವಾಹಿಯ ಮೂಲಕ ಎಂಟ್ರಿ ಕೊಡಲಿದ್ದಾರೆ. ಧಾರಾವಾಹಿಯಲ್ಲಿ ವಸುದೇವ ಎಂಬ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ.
.
ಸುಂದರ ತಾರಾಬಳಗವನ್ನು ಹೊಂದಿರೋ ಧಾರಾವಾಹಿಯಲ್ಲಿ ಜನಪ್ರಿಯ ನಟಿ ಅಂಜಲಿ, ನಾಲ್ಕು ಹೆಣ್ಣು ಮಕ್ಕಳ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಭಾವನಾ ಪಾಟೀಲ್, ಚೈತ್ರಾ ತೋಟದ್, ಬೃಂದಾ ಕಶ್ಯಪ್, ಆರಾಧ್ಯ, ಹಂಸ, ಭಗತ್ ಹಾಗು ಆರ್.ಜೆ ಅನೂಪ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.
ಒಂದೇ ಬೇರು, ಕವಲು ನೂರು ಎಂಬ ಅಡಿಬರಹದೊಂದಿಗೆ ಶುರುವಾಗ್ತಿದೆ ಹೊಸ ಕಥೆ “ವಸುದೇವ ಕುಟುಂಬ” ಇದೇ ಸೋಮವಾರದಿಂದ ಪ್ರತಿದಿನ ರಾತ್ರಿ 8.30 ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಧಾರಾವಾಹಿ ಬಗ್ಗೆ:
ವಿಭಿನ್ನ ಕಥಾಹಂದರದ ಧಾರಾವಾಹಿಗಳು ಹಾಗು ಕಾರ್ಯಕ್ರಮಗಳ ಮೂಲಕ ಸದಾಕಾಲ ವೀಕ್ಷಕರನ್ನು ರಂಜಿಸುತ್ತಿರುವ ಕನ್ನಡಿಗರ ಹೆಮ್ಮೆಯ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಶುರುವಾಗಲಿದೆ ಅಪ್ಪನಿಲ್ಲದ ಕುಟುಂಬದ ಕಥೆ ‘ವಸುದೇವ ಕುಟುಂಬ’.
ವಸುದೇವನ ಕುಟುಂಬ ಸಮಾಜದಲ್ಲಿ ಅಪಾರ ಪ್ರೀತಿ, ಗೌರವ ಪಡೆದಿರುತ್ತೆ. ಹಳ್ಳಿಯಲ್ಲಿ ಊರ ಹಬ್ಬದ ಸಡಗರ ಜೊತೆಗೆ ಹಿರಿಮಗಳ ಮದುವೆ ಸಿದ್ಧತೆಯು ವಿಜೃಂಭಣೆಯಿಂದ ಸಾಗುತ್ತಿರುತ್ತದೆ. ಆದರೆ ಸಂತೋಷದಿಂದ ತುಂಬಿದ್ದ ಈ ಕುಟುಂಬದಲ್ಲಿ ಆಕಸ್ಮಿಕವಾಗಿ ಸಂಭವಿಸುವಂತಹ ಆ ಒಂದು ದುರ್ಘಟನೆಯು ಎಲ್ಲರ ಜೀವನವನ್ನು ತಲೆಕೆಳಗಾಗಿಸುವಂತೆ ಮಾಡುತ್ತದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ ಈ ವಸುದೇವ ಕುಟುಂಬ.

ಇಂತಹ ಸಂಕಷ್ಟದ ಸಮಯದಲ್ಲಿ ಕಥಾನಾಯಕಿ ಸ್ವಾತಿ, ತನ್ನ ತಾಳ್ಮೆ ಮತ್ತು ಧೈರ್ಯದಿಂದ ತಾಯಿ ಹಾಗೂ ಅಕ್ಕ-ತಂಗಿಯರಿಗೆ ಹೇಗೆ ಆಧಾರವಾಗಿ ನಿಲ್ತಾಳೆ ತನ್ನ ದುಃಖವನ್ನು ಮರೆತು ಕುಟುಂಬದ ಬದುಕನ್ನು ಮರು ಕಟ್ಟುವಲ್ಲಿ ಸ್ವಾತಿ ಯಶಸ್ವಿಯಾಗ್ತಾಳಾ ಹಾಗು ಮನೆತನದ ಮಾನ-ಗೌರವವನ್ನು ಹೇಗೆ ಕಾಪಾಡ್ತಾಳೆ ಎಂಬುದೇ ಈ ಕಥೆಯ ಮುಖ್ಯ ಆಶಯ.
ಹಿರಿಯ ಮತ್ತು ಕಿರಿಯ ಕಲಾವಿದರ ದಂಡು ಇರುವ `ವಸುದೇವ ಕುಟುಂಬ” ಧಾರಾವಾಹಿಯನ್ನು ಕನ್ನಡ ಕಿರುತೆರೆಯ ಅನುಭವಿ ನಿರ್ದೇಶಕ ಅನಿಲ್ ಕೋರಮಂಗಲ ನಿರ್ಮಾಣ ಮಾಡುವ ಜೊತೆಗೆ ನಿರ್ದೇಶನ ಮಾಡುತ್ತಿದ್ದು ಧಾರಾವಾಹಿಯ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ


