Puttanna Kanagal Jayanthi to be celebrated as Film Directors Day

ಪುಟ್ಟಣ್ಣ ಕಣಗಲ್ ಜಯಂತಿ ನಿರ್ದೇಶಕರ ದಿನವಾಗಿ ಆಚರಣೆ - CineNewsKannada.com

ಪುಟ್ಟಣ್ಣ ಕಣಗಲ್ ಜಯಂತಿ ನಿರ್ದೇಶಕರ ದಿನವಾಗಿ ಆಚರಣೆ

ಇನ್ಮುಂದೆ ಪುಟ್ಟಣ್ಣ ಕಣಗಲ್ ಜಯಂತಿ ನಿರ್ದೇಶಕರ ದಿನವಾಗಿ ಆಚರಣೆ – ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷ ಭಾ.ಮ.ಹರೀಶ್ ಘೋಷಣೆ

ಇಂದು ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಲ್ ಜನ್ಮದಿನ. ಈ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುಟ್ಟಣ್ಣ ಕಣಗಲ್ ಜಯಂತಿಯನ್ನು ಆಚರಣೆ ಮಾಡಿತು. ಇದೇ ವೇಳೆ ಪುಟ್ಟಣ್ಣ ಕಣಗಲ್ ಜನ್ಮದಿನವನ್ನು ‘ನಿರ್ದೇಶಕರ ದಿನ’ ಎಂದು ಆಚರಿಸಲು ವಾಣಿಜ್ಯ ಮಂಡಳಿ ನಿರ್ಧರಿಸಿರೋದಾಗಿ ಘೋಷಿಸಲಾಯಿತು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ ಹರೀಶ್ ಮಾತನಾಡಿ ತೆಲುಗು ಚಿತ್ರರಂಗದಲ್ಲೂ ‘ನಿರ್ದೇಶಕರ ದಿನ’ ಎಂದಿದೆ. ನಮ್ಮಲ್ಲೂ ಪ್ರತಿ ವರ್ಷ ಡಿಸೆಂಬರ್ 1ರ ಪುಟ್ಟಣ್ಣ ಕಣಗಲ್ ಜನ್ಮದಿನವನ್ನು ‘ನಿರ್ದೇಶಕರ ದಿನ’ವನ್ನಾಗಿ ಆಚರಣೆ ಮಾಡೋಣ ಎಂದು ಪದಾಧಿಕಾರಿಗಳೆಲ್ಲರೂ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡಿಕೊಂಡಿದ್ದೇವೆ. ಈಗಿನವರ ಜೊತೆಗೆ ಮುಂದಿನ ಪೀಳಿಗೆಗೂ ಅವರ ಸಿನಿಮಾಗಳ ಬಗ್ಗೆ, ನಿರ್ದೇಶನದ ಬಗ್ಗೆ ತಿಳಿಸಿಕೊಡುವಂತಹ ಕೆಲಸ ಇದರಿಂದಾಗಬೇಕು. ಆ ದೃಷ್ಟಿಯಿಂದ ಅವರ ಜನ್ಮದಿನವಾದ ಡಿಸೆಂಬರ್ 1ನ್ನು ‘ನಿರ್ದೇಶಕರ ದಿನ’ವನ್ನಾಗಿ ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ರು.

ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ ಮಾತನಾಡಿ ಇತ್ತೀಚೆಗೆ ವಾಣಿಜ್ಯ ಮಂಡಳಿ ಕೆಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿದೆ. ಈ ತರಹದ ಬೆಳವಣಿಗೆ ಆಗಬೇಕು. ಪುಟ್ಟಣ್ಣ ಕಣಗಲ್ ಜಯಂತಿಯನ್ನು ನಿರ್ದೇಶಕರ ದಿನ ಎಂದು ಆಚರಣೆ ಮಾಡಲು ನಿರ್ಧಾರ ಮಾಡಿದ್ದು ಬಹಳ ಒಳ್ಳೆಯ ಕೆಲಸ. ಈ ಮೂಲಕ ಚಿತ್ರರಂಗದಲ್ಲಿ ಏನಾಗಿತ್ತು, ಯಾರ್ಯಾರು ಇದ್ರು ಎಂಬುದು ಮುಂದಿನ ಪೀಳಿಗೆಗೆ ತಿಳಿಯಬೇಕು ಈ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿ ಇಟ್ಟಿರುವ ಈ ಹೆಜ್ಜೆ ಅಭಿನಂದನಾರ್ಹ ಎಂದು ತಿಳಿಸಿದ್ರು. ಜೊತೆಗೆ ಪುಟ್ಟಣ್ಣ ಕಣಗಲ್ ಅವರೊಂದಿಗಿನ ಹಳೆಯ ದಿನಗಳನ್ನು ಇದೇ ಸಮಯದಲ್ಲಿ ಹಂಚಿಕೊಂಡ್ರು.

ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್. ಆರ್. ನಂಜುಡೇಗೌಡ ಮಾತನಾಡಿ ಪುಟ್ಟಣ್ಣ ಕಣಗಲ್ ಜನ್ಮದಿನವನ್ನು ನಿರ್ದೇಶಕರ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಘೋಷಣೆ ಆಗಿದ್ದು ಬಹಳ ಖುಷಿಯ ಸಂಗತಿ ಎಂದು ವಾಣಿಜ್ಯ ಮಂಡಳಿಯ ನಿರ್ಧಾರಕ್ಕೆ ಧನ್ಯವಾದ ತಿಳಿಸಿದ್ರು. ನಿರ್ದೇಶಕರ ಸಂಘದ ಅಧ್ಯಕ್ಷನಾಗಿ ಈಗ ತಾನೇ ನಮ್ಮ ಕೆಲಸ ಆರಂಭಿಸಿದ್ದೇವೆ. ನಮ್ಮೆಲ್ಲರನ್ನು ಕರೆದು ಸನ್ಮಾನ ಮಾಡಿದ್ದು ತುಂಬಾ ಖುಷಿಯ ಸಂಗತಿ. ನಾವು ಮಾಡಬೇಕಾದ ಕೆಲಸ ತುಂಬಾ ಇದೆ ಅನ್ನೋ ಜವಾಬ್ದಾರಿಯನ್ನು ಈ ಸನ್ಮಾನ ನೀಡಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರಿಗೆ ಗೌರವ ತಂದು ಕೊಡುವ ಕೆಲಸವನ್ನು ನಮ್ಮ ಸಂಘ ಮಾಡಲಿದೆ. ಹಲವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋದಾಗಿ ತಿಳಿಸಿದ್ರು.

ಇದೇ ವೇಳೆ ನೂತನವಾಗಿ ಆಯ್ಕೆಯಾದ ನಿರ್ದೇಶಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸನ್ಮಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ
ಕೆ.ಸಿ. ಎನ್ ಕುಮಾರ್, ಕಾರ್ಯದರ್ಶಿ ಎಲ್‌. ಸಿ. ಕುಶಾಲ್, ಖಜಾಂಚಿ ಟಿ.ಪಿ.ಸಿದ್ದರಾಜು, ಉಪಾಧ್ಯಕ್ಷ ರಾದ ಶಿಲ್ಪಾ ಶ್ರೀನಿವಾಸ್ ಭಾಗಿಯಾಗಿ ಪುಟ್ಟಣ್ಣ ಕಣಗಲ್ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡ್ರು.

admin

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin