ಕಂಟೆಂಟೆ ಆಧಾರಿತ ” ಕಪಟಿ” ಚಿತ್ರ ಮಾರ್ಚ್ 7ರಂದು ಬಿಡುಗಡೆ
ಕನ್ನಡ ಚಿತ್ರರಂಗದ ಸದಭಿರುಚಿಯ ಚಿತ್ರ ನಿರ್ದೇಶಕ, ನಿರ್ಮಾಪಕ ದಯಾಳ್ ಪದ್ಮನಾಭನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ” ಕಪಟಿ” ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ಬಾರಿಯೂ ಕಂಟೆಂಟ್ ಆಧಾರಿತ ಕಥೆಯನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರ ಮಾರ್ಚ್ 7 ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ. “ಹಗ್ಗದ ಕೊನೆ”, “ಆ ಕಾರಾಳ ರಾತ್ರಿ” ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳನ್ನು ಚಂದನವನಕ್ಕೆ ನೀಡಿರುವ ದಯಾಳ್ ಪದ್ಮನಾಭನ್ ಇದೀಗ ಹೊಸ ಮಾದರಿಯ ಕತೆಯೊಂದಿಗೆ ಪ್ರೇಕ್ಷಕರ ಮನ ಗೆಲ್ಲಲು ಮುಂದಾಗಿದ್ದಾರೆ.
ದಯಾಳ್ ಪದ್ಮನಾಭನ್ ತಮ್ಮ ಡಿ ಪಿಕಚರ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದು ರವಿಕಿರಣ್ – ಚೇತನ್ ಎಸ್ ಪಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ.
ಕಪಟಿ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರಾದ ಕೆ.ಮಂಜು, ರಮೇಶ್ ಯಾದವ್ ಹಾಗೂ ಅವಿನಾಶ್ ಯು ಶೆಟ್ಟಿ ಟ್ರೇಲರ್ ಅನಾವರಣ ಮಾಡಿ ದಯಾಳ್ ಪದ್ಮನಾಭನ್ ಮತ್ತವರ ತಂಡದ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಟ್ರೈಲರ್ ಬಿಡುಗಡೆ ಬಳಿಕ ಮಾತಿಗಿಳಿದ ನಿರ್ಮಾಪಕ ದಯಾಳ್ ಪದ್ಮನಾಭನ್, ಸಾಫ್ಟ್ವೇರ್ ಉದ್ಯೋಗಿಗಳಾಗಿರುವ ನಿರ್ದೇಶಕರಾದ ರವಿಕಿರಣ್ ಹಾಗೂ ಚೇತನ್ ಎಸ್ ಪಿ ಮೊದಲು ಚಿತ್ರದ ನಿರ್ಮಾಣ ಆರಂಭಿಸಿದ್ದರು. ಬಳಿಕ ತಮ್ಮ ಬಳಿ ಬಂದರು. ಚಿತ್ರ ನೋಡಿದ ನಂತರ ಇಷ್ಟವಾಯಿತು. ನನ್ನ ಷರತ್ತುಗಳಿಗೆ ಅವರು ಒಪ್ಪಿಕೊಂಡ ನಂತರ ಚಿತ್ರದ ಪೂರ್ಣ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಡಾರ್ಕ್ ವೆಬ್ ಜಾನರ್ ಚಿತ್ರವಿದು ಎಂದು ಮಾಹಿತಿ ಹಂಚಿಕೊಂಡರು

ನಿರ್ದೇಶಕರಾದ ರವಿಕಿರಣ್ ಹಾಗೂ ಚೇತನ್ ಎಸ್ ಪಿ ಮಾತನಾಡಿ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಸಾಮಾನ್ಯ ಜನರಿಗೆ ಮೊಬೈಲ್ ಮಾತ್ರ ಗೊತ್ತು. ಆದರೆ ಅದೇ ಮೊಬೈಲ್ ನಿಂದ ಹೇಗೆ ಮೋಸ ಹೋಗುತ್ತೇವೆ ಎನ್ನುವುದನ್ನು ಜನರಿಗೆ ತಿಳಿಸುವ ಪ್ರಯತ್ನ ನಮ್ಮದು, ಚಿತ್ರದಲ್ಲಿ ಕ್ಯಾಬ್ ಡ್ರೈವರ್, ಮೆಡಿಕಲ್ ವಿದ್ಯಾರ್ಥಿ ಹಾಗೂ ಫ್ಯಾಷನ್ ಡಿಸೈನರ್ ಮೂರು ಮುಖ್ಯಪಾತ್ರಗಳಿದ್ದು, ಪಾತ್ರಗಳನ್ನು ಸಾತ್ವಿಕ್ ಕೃಷ್ಣನ್, ದೇವ್ ದೇವಯ್ಯ ಹಾಗೂ ಸುಕೃತ ವಾಗ್ಲೆ ಮಾಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು
ಇದೊಂದು ಜನಸಾಮಾನ್ಯರ ಕಥೆ. ಆನ್ಲೈನ್ ಶೋಷಣೆಯ ಪರಿಣಾಮಗಳು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಹೇಗೆ ಮೋಸ ಮಾಡಬಹುದು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ, ಜೊತೆಗೆ ತಾಂತ್ರಿಕ ವಿಷಯದಲ್ಲಿ ಶ್ರೀಮಂತಿಕೆಯಿಂದ ಕೂಡಿ ಬಂದಿದೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳನ್ನು ನಮ್ಮ ಚಿತ್ರ ಒಳಗೊಂಡಿದೆ. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಬೇಸರ ಮೂಡಿಸದೆ, ಸಂಪೂರ್ಣ ಮನೋರಂಜನೆ ನೀಡುವ ಚಿತ್ರವಿದು ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಕೇಳಿಕೊಂಡರು.
ನಾಯಕಿ ಸುಕೃತ ವಾಗ್ಲೆ ಮಾತನಾಡಿ ನಿರ್ದೇಶಕ ನಿರ್ಮಾಪಕ ದಯಾಳ್ ಪದ್ಮನಾಭನ್ ನಿರ್ಮಾಣದ ಚಿತ್ರಗಳೆಂದರೆ ಅದು ಕಂಟೆಂಟ್ ಓರಿಯಂಟೆಡ್ ಚಿತ್ರಗಳೇ ಆಗಿರುತ್ತದೆ. ಒಂದು ಸೂಕ್ಷ್ಮವಾದ ಕಥೆಯನ್ನು ನಿರ್ದೇಶಕ ದ್ವಯರು ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು .

ಪ್ರಮುಖಪಾತ್ರಗಳಲ್ಲಿ ನಟಿಸಿರುವ ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ನಟ ಶಂಕರ್ ನಾರಾಯಣ್ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡು ಮಾರ್ಚ್ 7ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು ಎಲ್ಲರ ಸಹಕಾರ ಮತ್ತು ಪ್ರೋತ್ಸಾಹ ತಂಡದ ಮೇಲಿರಲಿ ಎಂದು ಮನವಿ ಮಾಡಿದರು
ಛಾಯಾಗ್ರಾಹಕರಾದ ವಿಕ್ರಮ್ ಮತ್ತು ಸತೀಶ್ ರಾಜೇಂದ್ರನ್ “ಕಪಟಿ” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು. ಇದೇ ವೇಳೆ ಸತೀಶ್ ಹೆಚ್ ಎನ್ ಆಧುನಿಕ ತಂತ್ರಜ್ಞಾನದ ಮೂಲಕ ಹೇಗೆಲ್ಲಾ ಮೋಸ ಮಾಡುತ್ತಾರೆ ಎಂಬುದನ್ನು ಪರದೆಯ ಮೇಲೆ ಮನಮುಟ್ಟುವಂತೆ ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಯತ್ನಗಳು ಅಗತ್ಯ ಮತ್ತು ಅನಿವಾರ್ಯವಾಗಿದೆ.
]

