Vijay Raghavendra's 'Rudrabhishekam' shooting around the coast

ವಿಜಯ್ ರಾಘವೇಂದ್ರ ನಟನೆಯ ಕರಾವಳಿ ಸುತ್ತಮುತ್ತ ‘ರುದ್ರಾಭಿಷೇಕಂ’ ಚಿತ್ರೀಕರಣ - CineNewsKannada.com

ವಿಜಯ್ ರಾಘವೇಂದ್ರ ನಟನೆಯ ಕರಾವಳಿ ಸುತ್ತಮುತ್ತ ‘ರುದ್ರಾಭಿಷೇಕಂ’ ಚಿತ್ರೀಕರಣ

ಚಿನ್ನಾರಿ ಮುತ್ತ ನಟ ವಿಜಯ ರಾಘವೇಂದ್ರ ತಂದೆ, ಮಗನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ “ರುದ್ರಾಭಿಷೇಕಂ” ಚಿತ್ರದ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರದಲ್ಲಿ ಮೊದಲ ಬಾರಿಗೆ ಒಬ್ಬ ವೀರಗಾಸೆ ಕಲಾವಿದನ ಪಾತ್ರಕ್ಕೂ ಬಣ್ಣ ಹಚ್ಚಿರುವುದು ವಿಶೇಷ.

ವೀರಭದ್ರ ದೇವರ ಇತಿಹಾಸದ ಹಿನ್ನೆಲೆಯಾಗಿಟ್ಟುಕೊಂಡು ಕಮರ್ಷಿಯಲ್ ಕಥೆಯೊಂದನ್ನು ನಿರ್ದೇಶಕ ವಸಂತ್ ಕುಮಾರ್ “ರುದ್ರಾಭಿಷೇಕಂ” ಚಿತ್ರದ ಮೂಲಕ ಹೇಳಲು ಮುಂದಾಗಿದ್ದಾರೆ.

ನಾಡಿನ ಸಾಂಸ್ಕೃತಿಕ ಹಿನ್ನೆಲೆ, ಇತಿಹಾಸ, ಅದರ ವೈಭವವನ್ನು ನಿರ್ದೇಶಕ ವಸಂತ್ ಕುಮಾರ್ ಚಿತ್ರದ ಮೂಲಕ ಹೇಳಹೊರಟಿದ್ದು, ಈಗಾಗಲೇ ದೇವನಹಳ್ಳಿ ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ಮುಗಿಸಿ ಇತ್ತೀಚೆಗೆ ಕರಾವಳಿ ಭಾಗದಲ್ಲಿ ಎರಡು ಹಾಡುಗಳನ್ನೂ ಸಹ ಚಿತ್ರೀಕರಣ ಮಾಡಿಕೊಂಡು ಬಂದಿದ್ದಾರೆ.

ನಿರ್ದೇಶಕ ವಸಂತ್ ಕುಮಾರ್ ಮಾತನಾಡಿ,ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಅಲ್ಲದೆ ಅಘನಾಶಿನಿ ಹಿನ್ನೀರಿನ, ಈವರೆಗೆ ಯಾರೂ ಶೂಟ್ ಮಾಡದಂಥ ಲೊಕೇಶನ್ ನಲ್ಲಿ ಹಾಡುಗಳನ್ನು ಚಿತ್ರೀಕರಿಸಿದ್ದಾರೆ. ಉಳಿದ ಎರಡು ಹಾಡು, ಫೈಟ್ ಹಾಗೂ ಮಾತಿನಭಾಗದ ಚಿತ್ರೀಕರಣವನ್ನು ದೇವನಹಳ್ಳಿ, ವಿಜಯಪುರದ ಸುತ್ತಮುತ್ತ ನಡೆಸಲಾಗುವುದು ಎಂದು ಹೇಳಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ನಿರ್ದೇಶಕ ವಸಂತ್ ಕುಮಾರ್ ಕೂಡ ತತ್ವಜ್ಞಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆ, ಮಗ ಎರಡೂ ಪಾತ್ರಗಳ ಜತೆ ಇಡೀ ಚಿತ್ರದಲ್ಲಿ ಬರುವಂಥ ಪಾತ್ರ. ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ಕಲೆಯನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ರುದ್ರಾಭಿಷೇಕಂ ಚಿತ್ರದಲ್ಲಿ ಹೇಳಲಾಗಿದೆ.

ನಿರ್ದೇಶಕರ ಸ್ನೇಹಿತರಾದ ಜಯರಾಮಣ್ಣ, ಶಿವರಾಮ್, ಚಿದಾನಂದ್, ಹಡಪದ, ರಮೇಶ್, ಮಂಜುನಾಥ್, ಮುನಿಕೃಷ್ಣಪ್ಪ, ರವಿ, ಅಶ್ವಥ್, ಆನಂದ್ ಸೇರಿ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ರುದ್ರಾಭಿಷೇಕಂ ಚಿತ್ರದಲ್ಲಿ ಬಲ ರಾಜವಾಡಿ ಅವರು ಊರ ಗೌಡನಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜನೆ, ಮುತ್ತುರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin