ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮಂದಿಗೆ “ನೆಮ್ಮದಿ” ಮೂಲಕ ಚಿಕಿತ್ಸೆ
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮಂದಿಗೆ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ನೆಲಮಂಗಲದಲ್ಲಿ ಅತ್ಯಾಧುನಿಕ ‘ನೆಮ್ಮದಿ ಪ್ಯಾಲಿಯೇಟಿವ್ ಕೇರ್ ಸೆಂಟರ್ ಅನ್ನು ಡಿಸೆಂಬರ್ 21ರಂದು ಉದ್ಘಾಟನೆಯಾಗಲಿದ್ದು ಸೇವೆಗೆ ಲಭ್ಯವಾಗಲಿದೆ
ಸುಕೃತಿ ಚಾರಿಟಬಲ್ ಟ್ರಸ್ಟ್ ಮತ್ತು ರೋಟರಿ ಬೆಂಗಳೂರು ಮಿಡೌನ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಿರ್ಮಾಣವಾಗಿರುವ ಈ ಕೇಂದ್ರ 55 ಹಾಸಿಗೆಗಳ ಸಾಮಥ್ರ್ಯ ಹೊಂದಿದೆ. ವಿಶೇಷವೆಂದರೆ, ಯಾವುದೇ ಬಿಲ್ಲಿಂಗ್ ಕೌಂಟರ್ ಇರುವುದಿಲ್ಲ. ಅಗತ್ಯವಿರುವ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.
ವಿಧಾನ ಪರಿಷತ್ ಮಾಜಿ ಸದಸ್ಯ ಈ. ಕೃಷ್ಣಪ್ಪ ಭೂಮಿ ದಾನವಾಗಿ ನೀಡಿದ್ದಾರೆ. ಪ್ರೆಸ್ಟೀಜ್ ಫೌಂಡೇಶನ್, ಬ್ರಿಗೇಡ್ ಫೌಂಡೇಶನ್, ಸಂಸೇರಾ ಫೌಂಡೇಶನ್ ಸೇರಿದಂತೆ ಅನೇಕ ಸಂಸ್ಥೆಗಳು ಮತ್ತು ದಾನಿಗಳ ನೆರವಿನಿಂದ ಬೃಹತ್ ಕೇಂದ್ರ ಸಾಕಾರಗೊಂಡಿದೆ
ಉದ್ಘಾಟನಾ ಸಮಾರಂಭದಲ್ಲಿ ಮಧುಸೂದನ್ ಸಾಯಿ ಗ್ಲೋಬಲ್ ಹೂಮನಿಟೇರಿಯನ್ ಮಿಷನ್‍ನ ಸ್ಥಾಪಕ ಮಧುಸೂದನ್ ಸಾಯಿ, ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಲೋಕಸಭಾ ಸದಸ್ಯ ಹಾಗೂ ನೆಮ್ಮದಿಯ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಸಿ.ಎನ್. ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರಿಗೆ ಪ್ಯಾಲಿಯೇಟಿವ್ ಕೇರ್ ಅಗತ್ಯವಿದ್ದರೂ, ಕೇವಲ ಶೇ.2 ಜನರಿಗೆ ಮಾತ್ರ ಈ ಸೇವೆ ತಲುಪುತ್ತಿದೆ. ಈ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ‘ನೆಮ್ಮದಿ’ ಕೇಂದ್ರ ಮಾನವೀಯತೆಯ ದಾರಿದೀಪವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ

