“ಲವ್ ಬರ್ಡ್ಸ್” ಚಿತ್ರದ ಬಳಿಕ ಪಿ.ಸಿ.ಶೇಖರ್- ಡಾರ್ಲಿಂಗ್ ಕೃಷ್ಣ ಜೋಡಿಯ ಹೊಸ ಚಿತ್ರಕ್ಕೆ ಮಹೂರ್ತ
ವಿಜಯ್ ರಾಘವೇಂದ್ರ ಅಭಿನಯದ “ಮಹಾನ್” ಚಿತ್ರ ನಿರ್ಮಿಸುತ್ತಿರುವ ಪ್ರಕಾಶ್ ಬೂದೂರು, ನೂತನ ಚಿತ್ರ ಆರಂಭಿಸಿದ್ದಾರೆ. “ಮಹಾನ್” ಚಿತ್ರದ ನಿರ್ದೇಶಕ ಪಿ.ಸಿ.ಶೇಖರ್ ಅವರೆ ನೂತನ ಚಿತ್ರ ನಿರ್ದೇಶಿಸುತ್ತಿದ್ದು, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿದ್ದಾರೆ.

ಶೇಷಾದ್ರಿಪರಂನ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸರಳ ಪೂಜಾ ಸಮಾರಂಭದೊಂದಿಗೆ ಚಿತ್ರಕ್ಕೆ ಚಾಲನೆ ದೊರೆಯಿತು. ನಿರ್ಮಾಪಕ ಪ್ರಕಾಶ್ ಬೂದೂರು, ನಿರ್ದೇಶಕ ಪಿ.ಸಿ.ಶೇಖರ್ ಹಾಗೂ ನಾಯಕ ಡಾರ್ಲಿಂಗ್ ಕೃಷ್ಣ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು
ನಿರ್ಮಾಪಕ ಪ್ರಕಾಶ್ ಬೂದೂರ್ ಮಾತನಾಡಿ “ಮಹಾನ್” ಚಿತ್ರದ ನಿರ್ಮಾಣದ ಯಶಸ್ವಿ ಪಯಣದ ನಂತರ, ನಿರ್ದೇಶಕ ಪಿ.ಸಿ. ಶೇಖರ್ ಅವರೊಂದಿಗೆ ನನ್ನ ಎರಡನೇ ಸಿನಿಮಾ. ಅವರೊಂದಿಗೆ ಕೆಲಸ ಮಾಡಿದ ಅನುಭವ ಅವರ ಕಥೆ ಹೇಳುವ ಶೈಲಿ, ಚಲನಚಿತ್ರದ ಮೇಲಿನ ದೃಷ್ಟಿಕೋನ ಹಾಗೂ ಅತ್ಯುತ್ತಮ ಮನರಂಜನಾ ಚಿತ್ರ ನೀಡುವ ಬದ್ಧತೆಯ ಮೇಲೆ ಇನ್ನಷ್ಟು ವಿಶ್ವಾಸ ಮೂಡಿಸಿದೆ. ಭಾವನೆಗಳು, ವಾಣಿಜ್ಯ ಅಂಶಗಳು ಹಾಗೂ ಪ್ರೇಕ್ಷಕರನ್ನು ತಟ್ಟುವ ಕಥನವನ್ನು ಸಮತೋಲನದಿಂದ ಕಟ್ಟಿಕೊಡುವ ಅವರ ಸಾಮರ್ಥ್ಯ ಅವರನ್ನು ವಿಶಿಷ್ಟ ನಿರ್ದೇಶಕರನ್ನಾಗಿ ಮಾಡುತ್ತದೆ ಎಂದರು
ಶೇಖರ್ ಅವರು ಚಿತ್ರದ ಕಥೆಯನ್ನು ಮೊದಲ ಬಾರಿ ನನಗೆ ವಿವರಿಸಿದ ಕ್ಷಣದಲ್ಲೇ ಅದರೊಳಗೆ ಸಂಪೂರ್ಣವಾಗಿ ತೊಡಗಿಸಿಕೊಂಡೆ. ಚಿತ್ರ ನಿರ್ಮಿಸಲು ಹೆಚ್ಚು ಪ್ರೇರೇಪಿಸಿದ ಅಂಶವೆಂದರೆ ಇದರ ಪ್ರಮುಖ ಪಾತ್ರ. ಕಥೆ ಕೇಳುವ ಪ್ರತಿಯೊಂದು ಹಂತದಲ್ಲೂ ನನ್ನ ಮನಸ್ಸಿನಲ್ಲಿ ಮೂಡಿದ ಏಕೈಕ ಕಲಾವಿದ ಡಾರ್ಲಿಂಗ್ ಕೃಷ್ಣ. ಸಹಜ ಅಭಿನಯ, ಆಕರ್ಷಕ ವ್ಯಕ್ತಿತ್ವ, ಅತ್ಯುತ್ತಮ ಕಾಮಿಡಿ ಟೈಮಿಂಗ್ ಹಾಗೂ ಭಾವನಾತ್ಮಕ ಪಾತ್ರಗಳನ್ನು ಜೀವಂತಗೊಳಿಸುವ ಸಾಮರ್ಥ್ಯ ಪಾತ್ರಕ್ಕೆ ಅವರನ್ನು ಅತ್ಯಂತ ಸೂಕ್ತರನ್ನಾಗಿ ಮಾಡಿದೆ. ಈ ಸಿನಿಮಾ ಅವರ ನಟನಾ ಜೀವನದಲ್ಲಿ ಮತ್ತೊಂದು ವಿಭಿನ್ನ ಹಾಗೂ ಸ್ಮರಣೀಯ ಅಧ್ಯಾಯವಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು
ನಾಯಕ ಡಾರ್ಲಿಂಗ್ ಕೃಷ್ಣ ಮಾತನಾಡಿ ಪಿ.ಸಿ.ಶೇಖರ್ ಉತ್ತಮ ನಿರ್ದೇಶಕ. “ಲವ್ ಬರ್ಡ್ಸ್” ಚಿತ್ರದ ನಂತರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಚಿತ್ರ ಮೂಡಿಬರುತ್ತಿದೆ. ಇದೊಂದು ಹೊಸ ಜಾನರ್ನ ಚಿತ್ರ. ಈ ಜಾನರ್ ನನಗೆ ಹಾಗೂ ನಿರ್ದೇಶಕರಿಗೆ ಇಬ್ಬರಿಗೂ ಹೊಸತು. ನಾನು ಈವರೆಗೂ ಮಾಡಿರದ ಪಾತ್ರ ಅಂತಲೂ ಹೇಳಬಹುದು. ಪ್ರೇಕ್ಷಕನಿಗೆ ಎರಡೂವರೆ ಗಂಟೆ ಕಾಲ ಪರಿಶುದ್ಧ ಮನೋರಂಜನೆ ನೀಡುವ ಚಿತ್ರವಿದು. ಪ್ರಕಾಶ್ ಬೂದೂರು ಸಹ ಕನ್ನಡ ಚಿತ್ರಗಳ ಮೇಲೆ ಅಪಾರ ಪ್ರೀತಿಯಿರುವ ನಿರ್ಮಾಪಕರು. ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಬಹಳ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.

ನಿರ್ದೇಶಕ ಪಿ.ಸಿ.ಶೇಖರ್ ಮಾಹಿತಿ ನೀಡಿ ನಾಯಕ ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ನನ್ನ ಎರಡನೇ ಸಿನಿಮಾ. “ಲವ್ ಬರ್ಡ್ಸ್” ನಂತರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರವಿದು. ಕೃಷ್ಣ ಅವರು ನಿರ್ದೇಶಕರ ನಟ. ತಾವೇ ಒಬ್ಬ ನಿರ್ದೇಶಕರಾಗಿದರೂ ಸಹ ಅವರು ನಿರ್ದೇಶಕರ ನಟನಾಗಿಯೇ ನಟನೆ ಮಾಡುತ್ತಾರೆ. ಇದೊಂದು ಕಾಮಿಡಿ ಎಂಟರ್ಟೈನರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಒಂದು ಹೊಸ ಜಾನರ್ ನ ಚಿತ್ರವಿದು. ಈ ಜಾನರ್ ನನಗೆ ಹಾಗೂ ಕೃಷ್ಣ ಇಬ್ಬರಿಗೂ ಮೊದಲು. ನಿರ್ಮಾಪಕ ಪ್ರಕಾಶ್ ಬೂದೂರು ಅವರ ಜೊತೆಗೂ ಎರಡನೇ ಚಿತ್ರ. ಅವರ ನಿರ್ಮಾಣ “ಮಹಾನ್” ಚಿತ್ರದ ನಂತರ ಚಿತ್ರ ನಿರ್ಮಿಸುತ್ತಿದ್ದೇನೆ. ಚಿತ್ರವನ್ನು ಬಹಳ ಪ್ರೀತಿಸುವ ನಿರ್ಮಾಪಕರು ಅವರು. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಪ್ರಶಾಂತ್ ರಾಜಪ್ಪ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ತಿಳಿಸಿದ್ಧಾರೆ

