ಕನ್ನಡ ಮತ್ತು ತುಳು ಭಾಷೆಯಲ್ಲಿ “ಪಿಚ್ಚರ್” ಸಿದ್ದ: ಜುಲೈ 24 ರಂದು ರಾಜ್ಯಾದ್ಯಂತ ತೆರೆಗೆ
ನಿರ್ಮಾಪಕಿ ಶಿಲ್ಪಾ ಗಣೇಶ್ ಕನ್ನಡ ಹಾಗೂ ತುಳುವಿನಲ್ಲಿ ನಿರ್ಮಿಸಿರುವ “ಪಿಚ್ಚರ್” ಚಿತ್ರ ಇದೇ ಜುಲೈ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂದೀಪ ಬೆದ್ರ ನಿರ್ದೇಶನದ ಚಿತ್ರದಲ್ಲಿ ನಾಯಕರಾಗಿ ನಿತ್ಯಪ್ರಕಾಶ್ ಬಂಟ್ವಾಳ್ ನಟಿಸಿದ್ದಾರೆ. ಅಮೃತ ಸುದು ಚಿತ್ರದ ನಾಯಕಿ.

ಈ ವೇಳೆ ಮಾತಿಗಿಳಿದ ನಿರ್ಮಾಪಕಿ ಶಿಲ್ಪಾ ಗಣೇಶ್, ಗೋಲ್ಡನ್ ಮೂವೀಸ್ ಸಂಸ್ಥೆಯ ಮೂಲಕ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ನೀವು ಮಂಗಳೂರಿನವರು. ತುಳು ಸಿನಿಮಾ ನಿರ್ಮಾಣ ಮಾಡಿ ಎಂದು ಸ್ನೇಹಿತರು ಹೇಳುತ್ತಿದ್ದರು. ಒಳ್ಳೆಯ ಕಥೆ ಸಿಕ್ಕರೆ ಮಾಡೋಣ ಅಂತ ಹೇಳಿದ್ದೆ. ಕಾರ್ಯಕಾರಿ ನಿರ್ಮಾಪಕ ಮೋಹನ್ ಭಟ್ಕಳ್ ಅವರು ನಿರ್ದೇಶಕ ಸಂದೀಪ್ ಬೆದ್ರ ಅವರನ್ನು ಪರಿಚಯ ಮಾಡಿಕೊಟ್ಟರು. ಸಂದೀಪ್ ಹೇಳಿದ ಕಥೆ ಇಷ್ಟವಾಯಿತು. ಗಣೇಶ್ ಕೂಡ ಒಪ್ಪಿಕೊಂಡರು .ಕಡಿಮೆ ಬಜೆಟ್ ನಲ್ಲಿ ನಿರ್ಮಾಣ ಮಾಡಲು ಹೊರಟ ಚಿತ್ರವಿದು. ಆದರೆ ಮುಗಿಯುವ ವೇಳೆಗೆ ಬಿಗ್ ಬಜೆಟ್ ನ ಚಿತ್ರವಾಗಿದೆ. ಇಲ್ಲಿಯವರೆಗೂ ತುಳು ಚಿತ್ರದ ಚಿತ್ರೀಕರಣ ಕಾಶ್ಮೀರದಲ್ಲಿ ಆಗಿಲ್ಲ. ಇದೇ ಮೊದಲ ಬಾರಿಗೆ ನಮ್ಮ ಚಿತ್ರದ ಹಾಡೊಂದರ ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ ಎಂದರು
ಇನ್ನೊಂದು ವಿಶೇಷ ಎಂದರೆ ಮೊದಲ ಬಾರಿಗೆ ಈ ಚಿತ್ರದ “ಗೋಕುಲದ ರಾಧೆ” ಎಂಬ ಹಾಡನ್ನು ಹಾಡಿದ್ದೇನೆ. ಹಾಡನ್ನು ಜಸ್ಕರಣ್ ಸಿಂಗ್ ಹಾಡಿದ್ದಾರೆ. ಈ ಹಾಡಿಗೆ ಮೆಚ್ಚುಗೆ ದೊರಕುತ್ತಿದೆ. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಕೌಟುಂಬಿಕ ಚಿತ್ರ ಕನ್ನಡ ಹಾಗೂ ತುಳುವಿನಲ್ಲಿ ನಿರ್ಮಾಣವಾಗಿ ಜುಲೈ 24 ರಂದು ನಿಮ್ಮ ಮುಂದೆ ಬರಲಿದೆ ಎಂದು ಹೇಳಿದರು
ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ ಇದೊಂದು ಅವಿಭಕ್ತ ಕುಟುಂಬದ ಕಥೆಂ. ಇದರ ಜೊತೆಗೆ ಎಮೋಷನ್, ಸೆಂಟಿಮೆಂಟ್, ಕಾಮಿಡಿ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿರುವುದರಿಂದ ಕೌಟುಂಬಿಕ ಚಿತ್ರಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಮಂಗಳೂರಿನ ಹೆಸರಾಂತ ಕಲಾವಿದರಾದ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್ , ಭೋಜರಾಜ್ ವಾಮಂಜೂರ್, ನವೀನ್ ಪಡೀಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದರು
ನಿತ್ಯಪ್ರಕಾಶ್ ಬಂಟ್ವಾಳ ಹಾಗೂ ಅಮೃತ ಸುದು ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಸ್ಯಾಮುಯೆಲ್ ಅಭಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ – ಚಂದ್ರಶೇಖರ್ ಕೆ.ಎಸ್ ಛಾಯಾಗ್ರಹಣ, ಜಸ್ಕರಣ್ ಸಿಂಗ್, ಶಿಲ್ಪಾ, ಹರಿಕೃಷ್ಣ, ಜೆಸ್ಸಿಗಿಫ್ಟ್ ಮುಂತಾದವರ ಗಾಯನ ಹಾಗೂ ಸಿಂಪಲ್ ಸುನಿ, ಅನೂಪ್ ಭಂಡಾರಿ, ಅರಸು ಅಂತಾರೆ, ಚೇತನ್ ಕುಮಾರ್ ಮುಂತಾದವರ ಗೀತರಚನೆ “ಪಿಚ್ಚರ್” ಅನ್ನು ಮತ್ತಷ್ಟು ಚಂದಗಾಣಿಸಿದೆ ಎಂದು ಮಾಹಿತಿ ನೀಡಿದರು

ನಾಯಕ ನಿತ್ಯಪ್ರಕಾಶ್ ಬಂಟ್ವಾಳ ಹಾಗೂ ನಾಯಕಿ ಅಮೃತ ಸುದು ತಮ್ಮ ಪಾತ್ರದ ಕುರಿತು ಮಾತನಾಡಿದರು. ನಿರ್ದೇಶಕ ಸಂದೀಪ್ ಬೆದ್ರ “ಪಿಚ್ಚರ್” ಸಾಗಿ ಬಂದ ಬಗ್ಗೆ ಮಾಹಿತಿ ನೀಡಿದರು. ಛಾಯಾಗ್ರಾಹಕ ಚಂದ್ರಶೇಖರ್ ಕೆ.ಎಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

