ಮೂರು ದಶಕಗಳ ನಂತರ ಮತ್ತೆ “ಅಮೇರಿಕಾ ಅಮೇರಿಕಾ.-2 : ಶೀರ್ಷಿಕೆ ಅದೇ.. ಹೊಸ ಕಥೆ
ಹಿರಿಯ ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ 90ರ ದಶಕದಲ್ಲಿ ಯಶಸ್ಸು ಕಂಡ ಚಿತ್ರ “ಅಮೇರಿಕಾ ಅಮೇರಿಕಾ”, ಇದೀಗ ಮೂರು ದಶಕಗಳ ನಂತರ ಮೇಷ್ಟ್ರು ಹೊಸ ಕಥೆಯೊಂದಿಗೆ ಹಳೆಯ ಶೀರ್ಷಿಕೆ ಇಟ್ಟು ಸಿನಿಮಾ ಮಾಡಿದ್ದಾರೆ. ಅದುವೇ “ಅಮೇರಿಕಾ ಅಮೇರಿಕಾ-2”.

ಕಳೆದ ಐದು ವರ್ಷಗಳಿಂದ ಆರಂಭವಾಗಿದ್ದ ಚಿತ್ರ ಅಡೆ ತಡೆ ದಾಟಿ ಬಿಡುಗಡೆ ಹಂತಕ್ಕೆ ಬಂದಿದೆ, ಈ ಭಾರಿ ನಿರೂಪ್ ಭಂಡಾರಿ, ಸಾನ್ವಿ ಶ್ರೀವಾಸ್ತವ್ ಹಾಗೂ ಪೃಥ್ವಿ ಅಂಬರ್ ಚಿತ್ರದ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ನಡೆಯಿತು

ಈ ವೇಳೆ ಮಾತಿಗಿಳಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, “ಹಳೇ ಕಥೆಗಳಿಂದ್ಲೇ ಹೊಸ ಕಥೆಗಳು ಹುಟ್ಟೋದು” ಇದು ನಿಜ. ಸಾಮಾನ್ಯವಾಗಿ ಪತ್ರಿಕಾಗೋಷ್ಠಿಗಳಲ್ಲಿ ಎಲ್ಲರೂ ಹೊಸ ಕಥೆ ಎಂದು ಹೇಳುತ್ತಾರೆ. ಎಲ್ಲಾ ಹೊಸಕಥೆಗಳು ಹಳೆ ಕಥೆಗಳೆ ಆಗಿರುತ್ತದೆ. ಹಾಗಾಗಿ ಹೊಸತು ಎನ್ನುವುದರ ಹುಡುಕಾಟದಲ್ಲಿ ಎಲ್ಲರೂ ಇದ್ದೇವೆ. ತೊಂಭತ್ತರ ದಶಕದಲ್ಲಿ ಅದ್ಭುತ ಯಶಸ್ಸು ಕಂಡ ನನ್ನ ನಿರ್ದೇಶನದ ಚಿತ್ರ “ಅಮೇರಿಕಾ ಅಮೇರಿಕಾ “. ಈಗ ಅದೇ ಶೀರ್ಷಿಕೆಯೊಂದಿಗೆ ಹೊಸಚಿತ್ರವೊಂದನ್ನು ನಿರ್ದೇಶಿಸಿದ್ದೇನೆ. ಅದಕ್ಕೆ “ಅಮೇರಿಕಾ ಅಮೇರಿಕಾ 2” ಎಂದು ಹೆಸರಿಟ್ಟಿದ್ದೇವೆ. ಆದರೆ, ಇದು ಆ ಚಿತ್ರದ ಮುಂದುವರಿದ ಭಾಗ ಅಲ್ಲ. ಆ ಕಥೆಯೇ ಬೇರೆ ಎಂದು ಸ್ಪಷ್ಟಪಡಿಸಿದರು
ಈ ಕಥೆಯೇ ಬೇರೆ. ಇಲ್ಲೂ ಮೂರು ಮುಖ್ಯಪಾತ್ರಗಳಿದೆ. ಇಲ್ಲಿ ಅಲ್ಲಿಯ ಹಾಗೆ ಸೂರ್ಯ, ಭೂಮಿ, ಶಶಾಂಕ್ ಪಾತ್ರಗಳಿಲ್ಲ. ಇದೇ ಬೇರೆ ಪಾತ್ರಗಳು. ಇದೊಂದು ಸ್ತ್ರೀ ಪ್ರಧಾನ ಚಿತ್ರ ಎನ್ನಬಹುದು. ಸಾನ್ವಿ ಶ್ರೀವಾಸ್ತವ್ ಅವರ ಅದ್ಭುತ ಅಭಿನಯ ಈ ಚಿತ್ರದಲ್ಲಿ ನೋಡಬಹುದು. ನಿರೂಪ್ ಭಂಡಾರಿ ಹಾಗೂ ಪೃಥ್ವಿ ಅಂಬರ್ ಅವರ ಅಭಿನಯವೂ ಅಷ್ಟೇ ಅದ್ಭುತ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಸಹನಾ ವಿಜಯಕುಮಾರ್ ಅವರ ಕದಾಂಬರಿ ಆಧಾರಿತವಾಗಿದೆ. ನಾಲ್ಕು ಸುಮಧುರ ಹಾಡುಗಳಿದ್ದು, ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತ ನಕುಲ್ ಅಭಯಂಕರ್ ಅವರದು. ಎಸ್ ಕೆ ರಾವ್ ಛಾಯಾಗ್ರಹಣದಲ್ಲಿ ಅಮೇರಿಕಾದ ಸೌಂದರ್ಯ ನೋಡುವುದೇ ಒಂದು ಸೊಗಸು. ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ಸಹ ಅಲ್ಲಿನ ಸೌಂದರ್ಯವನ್ನು ಡ್ರೋನ್ ನಲ್ಲಿ ಸೆರೆ ಹಿಡಿದಿದ್ದಾರೆ ಎಂದು ಮಾಹಿತಿ ನೀಡಿದರು

ನಮ್ಮ ನಾಗತಿಹಳ್ಳಿ ಸಿನಿ ಕ್ರಯೇಷನ್ಸ್ ಮೂಲಕವೇ ಚಿತ್ರ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ನೀಡುವುದಾಗಿ ಹೇಳಿದರು
ನಟ ನಿರೂಪ್ ಭಂಡಾರಿ ಮಾತನಾಡಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನನ್ನನ್ನು ಆಫೀಸ್ ಗೆ ಕರೆದು ಈ ಚಿತ್ರದ ಕಥೆ ಹೇಳಿದಾಗ, ಶೀರ್ಷಿಕೆ ಕೇಳಿಯೇ ನಟಿಸಬೇಕೆಂದುಕೊಂಡೆ. ಮೂವತ್ತು ವರ್ಷಗಳ ಹಿಂದೆ ಥಿಯೇಟರ್ ನಲ್ಲಿ ಆ ಚಿತ್ರ ನೋಡಿದ ನೆನಪು ಇನ್ನೂ ಹಾಗೆ ಉಳಿದಿದೆ. ಇದು ಅದರ ಮುಂದುವರಿದ ಭಾಗ ಅಲ್ಲವಾದರೂ, ಈ ಚಿತ್ರದ ಕಥೆ ಹಾಗೂ ಪಾತ್ರಗಳು ಎಲ್ಲರ ನೆನಪಿನಲ್ಲಿರುವಂತದ್ದು. ನನ್ನ ಪಾತ್ರ ಕೂಡ ಚೆನ್ನಾಗಿದೆ. ಅವಕಾಶ ನೀಡಿದ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಧನ್ಯವಾದ ಎಂದರು
ನಟಿ ಶಾನ್ವಿ ಶ್ರೀವಾಸ್ತವ್ ಮಾತನಾಡಿ ಬಹಳ ದಿನಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದೇನೆ. ನನ್ನ ಹದಿಮೂರು ವರ್ಷಗಳ ಸಿನಿಪಯಣದಲ್ಲೇ ಇಂತಹ ಪಾತ್ರ ಮಾಡಿಲ್ಲ. ಅಂತಹ ಅದ್ಭುತ ಪಾತ್ರವನ್ನು ನೀಡಿರುವ ನಿರ್ದೇಶಕರಿಗೆ ಧನ್ಯವಾದ. ಇನ್ನೂ, ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಬಹಳ ಚೆನ್ನಾಗಿದೆ. ನಿರ್ದೇಶಕರು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬರುತ್ತದೆ ಎಂದು ಹೇಳಿದ್ದಾರೆ ಗೊತ್ತಿಲ್ಲ, ನನ್ನ ಕೆಲಸ ನಾನು ಮಾಡಿದ್ದೇನೆ ಎಂದು ಹೇಳಿದರು.

ನಟ ಪೃಥ್ವಿ ಅಂಬರ್ ಮಾತನಾಡಿ ವಯಸ್ಸಿನಲ್ಲಿ ಹಿರಿಯರಾದರೂ ಉತ್ಸಾಹದಲ್ಲಿ ಯುವಕರಾಗಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ನಮ್ಮಗೆಲ್ಲಾ ಸ್ಪೂರ್ತಿ. ಹಾಡುಗಳು, ದೃಶ್ಯಗಳು ಹಾಗೂ ಸಂಭಾಷಣೆಯ ಮೂಲಕ ಈಗಲೂ ಎಲ್ಲರ ಮನದಲ್ಲಿ ಮನೆ ಮಾಡಿರುವ ಚಿತ್ರ “ಅಮೇರಿಕಾ ಅಮೇರಿಕಾ”. ಈಗ ಅದೇ ಹೆಸರಿನ ಚಿತ್ರದಲ್ಲಿ, ಆ ಚಿತ್ರದ ನಿರ್ದೇಶಕರ ನಿರ್ದೇಶನದಲ್ಲಿ ಅಭಿನಯಿಸಿರುವುದು ಬಹಳ ಖುಷಿಯಾಗಿದೆ ಎಂದರು.
ನಿರ್ಮಾಣದ ಉಸ್ತುವಾರಿ ಹೊತ್ತಿರುವ ಶೋಭ ನಾಗತಿಹಳ್ಳಿ ಚಂದ್ರಶೇಖರ್, ಛಾಯಾಗ್ರಾಹಕ ಎಸ್ ಕೆ ರಾವ್ ಹಾಗೂ ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ಸೇರಿದಂತೆ ಅನೇಕ ತಂತ್ರಜ್ಞರು ” “ಅಮೇರಿಕಾ ಅಮೇರಿಕಾ 2” ಚಿತ್ರದ ಕುರಿತು ಮಾಹಿತಿ ನೀಡಿದರು

