ಸೈಬರ್ ಕ್ರೈಂ ಸುತ್ತ `ಗೀಕ್’ ಸೆಲೆಬ್ರಿಟಿಗಳಿಂದ ಟೀಸರ್ ಅನಾವರಣ
ಕನ್ನಡದಲ್ಲಿ ವಿವಿಧ ಬಗೆಯ ಕಥಾಹಂದರವಿರುವ ಸಿನಿಮಾ ಬಂದು ಹೋಗಿವೆ. ಇದೀಗ ಸೈಬರ್ ಕ್ರೈಂ ಜಾನರ್ ಹೊಂದಿರುವ ಸಿನಿಮಾಗಳು ತೀರಾ ವಿರಳ. ಅದರ ಜಾಗವನ್ನು ತುಂಬಲು ಗೀಕ್ ಸಿನಿಮಾ ತಯಾರಾಗುತ್ತಿದೆ. ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿದೆ
ಗೀಕ್ ಎಂದರೆ ಏನು ಅರ್ಥ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಯುವ ನಿರ್ದೇಶಕ ಡಿ.ಹರಿ ಪ್ರಕಾಶ್ ಆಕ್ಷನ್ ಕಟ್ ಹೇಳಿರುವ ಸಿನಿಮಾ ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ಹಂತದಲ್ಲಿದೆ. ಈ ಸಿನಿಮಾದ ಝಲಕ್ ತೋರಿಸಲು ಟೀಸರ್ ಅನ್ನು ಡಿ ಬೀಟ್ಸ್ ಯು ಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡಿದೆ
ಚಂದನವನದ 50ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಕಾನ್ಸೆಪ್ಟ್ ಮೆಚ್ಚಿ ಡಿಜಿಟಲ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಇದರಲ್ಲಿ ಪಾತ್ರ ಪರಿಚಯದ ಜತೆಗೆ `ಗೀಕ್’ ಕುರಿತು ತುಣುಕೊಂದು ಕಾಣಸಿಗುತ್ತದೆ. ಇದೊಂದು ಕಂಟೆಂಟ್ ಇರುವಂಥ ಚೊಕ್ಕ ಸಿನಿಮಾ ಎಂಬುದು ಟೀಸರ್ ನಲ್ಲಿ ಗೋಚರವಾಗುತ್ತದೆ.

ನಿರ್ದೇಶಕ ಹರಿಪ್ರಕಾಶ್ ಮಾತನಾಡಿ `ಇತ್ತೀಚೆಗೆ ಮೊಬೈಲ್ ಸಂಬಂಧಿತ ಆಪ್‍ಗಳು ಹಾಗೂ ಡೇಟಾ ದುರುಪಯೋಗಪಡಿಸಿಕೊಳ್ಳುತ್ತಿರುವ ಕುರಿತ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಇದಕ್ಕೆ ಸೈಬರ್ ಕ್ರೈಂ, ಸಸ್ಪೆನ್ಸ್-ಥ್ರಿಲ್ಲರ್ ಅಂಶವನ್ನು ಸೇರಿಸಲಾಗಿದೆ. ಕಂಟೆಂಟ್ ಜತೆಗೆ ಸಸ್ಪೆನ್ಸ್, ಥ್ರಿಲ್ ನೀಡಬೇಕು ಎಂಬ ನಿಟ್ಟಿನಲ್ಲಿ ಈ ಸಿನಿಮಾ ತಯಾರಾಗಿದೆ. ಬಹುತೇಕ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಟೆಕ್ನಿಕಲಿ ಸೌಂಡ್ ಜೋರಾಗಿರಬೇಕು ಎಂಬ ಕಾರಣಕ್ಕೆ ನುರಿತ ತಂತ್ರಜ್ಞರೇ ಸೇರಿಕೊಂಡು ಈ ಸಿನಿಮಾ ಮಾಡಲಾಗಿದೆ’ ಎಂದರು
ಮೂಲತಃ ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಹರಿಪ್ರಕಾಶ್, ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದಾರೆ. ಅದಕ್ಕೆ ಸಾಕಷ್ಟು ಮೆಚ್ಚುಗೆ, ಪ್ರಶಸ್ತಿ ಲಭಿಸಿವೆ. ಕಿರುಚಿತ್ರ ಅನುಭವ ಹಾಗೂ ಸಿನಿಮಾ ರಂಗದ ಮೇಲಿನ ಆಸಕ್ತಿಯಿಂದಾಗಿ ಮೊದಲ ಚಿತ್ರದಲ್ಲೇ ಹೊಸತನ್ನೇನೋ ಕೊಡುವ ತುಡಿತ ಅವರಲ್ಲಿದೆ ಎಂಬುದಕ್ಕೆ `ಗೀಕ್’ ಟೀಸರ್ ಸಾಕ್ಷಿ.
ಪ್ರವೀಣ್ ತೇಜ್, ಚೈತ್ರಾ ಆಚಾರ್, ಕಿರಣ್ ಶ್ರೀನಿವಾಸ್, ವಿರಾನಿಕಾ ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಎಸ್.ವಿ.ಎಂ ಪ್ರೊಡಕ್ಷನ್ಸ್ ಹಾಗೂ ಹರಿಪ್ರಕಾಶ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ನಾಗರಾಜ್ ಹಾಗೂ ಪ್ರಿಯಾಂಕಾ ಜಂಟಿಯಾಗಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಯೋಗೀಶ್ ರಾಜ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೀರ್ತನ್ ಪೂಜಾರಿ ಛಾಯಾಗ್ರಹಣ, ಜೋ ಕೋಸ್ಟಾ ಸಂಗೀತ ಸಂಯೋಜನೆ, ಶಶಾಂಕ್ ನಾರಾಯಣ್ ಸಂಕಲನ, ಲಿಜು ಪ್ರಭಾಕರ್ ಡಿಐ ಹಾಗೂ ಅರುಣ್ ಸೌಂಡ್ ಡಿಸೈನಿಂಗ್ ಚಿತ್ರಕ್ಕಿದೆ.

