ನಟ ವಿಜಯ್ ದಳಪತಿ ಕೊನೆಯ ಚಿತ್ರ “ಜನ ನಾಯಕನ್” ಜನವರಿ 9 ರಂದು ವಿಶ್ವದಾದ್ಯಂತ ಬಿಡುಗಡೆ:
ಬಹುನಿರೀಕ್ಷಿತ ‘ಜನ ನಾಯಕನ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇಡೀ ಇಂಟರ್ನೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಬಿಡುಗಡೆಯಾದ ಕೇವಲ 5 ನಿಮಿಷಗಳಲ್ಲಿ 5 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೂಲಕ ಈ ಟ್ರೈಲರ್ ಹೊಸ ಇತಿಹಾಸ ಸೃಷ್ಟಿಸಿದೆ. ಇದೇ ಖುಷಿಯಲ್ಲಿ ಚಿತ್ರ ಜನವರಿ 9 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
2 ನಿಮಿಷ 52 ಸೆಕೆಂಡುಗಳ ಟ್ರೈಲರ್ ಅದ್ಭುತ ಆಕ್ಷನ್, ರೋಮಾಂಚಕ ಸಂಗೀತ ಮತ್ತು ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಪ್ರೇಕ್ಷಕರು ಚಿತ್ರದ ಭರ್ಜರಿ ಮೇಕಿಂಗ್ ಮತ್ತು ವಿಜಯ್ ಅವರ ಸ್ವಾಗ್‍ಗೆ ಫಿದಾ ಆಗಿದ್ದು, ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನರ್ ಆಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಚಿತ್ರದಲ್ಲಿ ದಲಪತಿ ವಿಜಯ್ ಅವರೊಂದಿಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಇದೆ. ಎಚ್. ವಿನೋತ್ ನಿರ್ದೇಶನದ ಈ ಚಿತ್ರಕ್ಕೆ ವೆಂಕಟ್ ಕೆ. ನಾರಾಯಣ ಅವರು ಬಂಡವಾಳ ಹೂಡಿದ್ದಾರೆ.
ಸತ್ಯನ್ ಸೂರ್ಯನ್ ಅವರ ಛಾಯಾಗ್ರಹಣ ಹಾಗೂ ಪ್ರದೀಪ್ ಇ. ರಾಘವ್ ಅವರ ಸಂಕಲನ ಈ ಚಿತ್ರಕ್ಕಿದೆ. ಇದು ನಟ ವಿಜಯ್ ದಳಪತಿ ಅವರ ಕೊನೆಯ ಚಿತ್ರ.
ನಿರ್ಮಾಪಕ ವೆಂಕಟ್ ಕೆ. ನಾರಾಯಣ ಮಾತನಾಡಿ “ಮಲೇಷ್ಯಾದಲ್ಲಿ ನಡೆದ ಆಡಿಯೋ ಲಾಂಚ್‍ಗೆ ಸಿಕ್ಕ ಅಭೂತಪೂರ್ವ ಸ್ಪಂದನೆಯೇ ವಿಜಯ್ ಮತ್ತು ಅವರ ಅಭಿಮಾನಿಗಳ ನಡುವಿನ ಬಾಂಧವ್ಯಕ್ಕೆ ಸಾಕ್ಷಿ. ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಸ್‍ಗೆ ನಮ್ಮ ಚಿತ್ರ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯ. ಈಗ ಟ್ರೈಲರ್ ಸೃಷ್ಟಿಸಿರುವ ಈ ಅಬ್ಬರ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ ಎಂದಿದ್ದಾರೆ
‘ಜನ ನಾಯಕನ್’ ಚಿತ್ರಕ್ಕೆ ಎಚ್. ವಿನೋತ್.ನಿರ್ದೇಶಕರು. ಹಿಂದೆ ಅಜಿತ್ ಕುಮಾರ್ ಅಭಿನಯದ ‘ವಲಿಮೈ’, ‘ತುನಿವು’ ಮತ್ತು ಕಾರ್ತಿ ನಟನೆಯ ‘ಧೀರನ್ ಅಧಿಗಾರಂ ಒಂಡ್ರು’ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈಗ ದಳಪತಿ ವಿಜಯ್ ಅವರ ಕೊನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

