ನಟರಾದ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟನೆಯ `ರಾಮಾಯಣ’ ಚಿತ್ರದ ಪ್ಯಾನ್‍ವರ್ಲ್ಡ್ ಟ್ರೇಲರ್ ಬಿಡುಗಡೆ
ಅಪ್ರತಿಮ ಸಾಂಸ್ಕೃತಿಕ ಪರಂಪರೆಯಾದ ರಾಮಾಯಣವನ್ನು ಜಾಗತಿಕ ವೇದಿಕೆಗೆ ಪರಿಚಯಿಸುವ ಐತಿಹಾಸಿಕ ಪ್ರಯಾಣಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ಈ ಪಯಣದ ಆರಂಭವನ್ನು ‘ಪ್ರಥಮ ಸಂಕಲ್ಪ’ ಎಂದು ಕರೆಯಲಾಗಿದ್ದು, ಭಾರತೀಯ ಸಂಪ್ರದಾಯದಂತೆ ಮಹತ್ಕಾರ್ಯವೊಂದಕ್ಕೆ ಕೈಹಾಕುವ ಮುನ್ನ ಕೈಗೊಳ್ಳುವ ದೃಢ ನಿರ್ಧಾರವಾಗಿದೆ. ಜುಲೈ 24 ರಂದು ಜಾಗತಿಕ ಟ್ರೇಲರ್ ಬಿಡುಗಡೆಗೂ ಮುನ್ನ, ರಾಜಧಾನಿ ದೆಹಲಿಯಲ್ಲಿ ನಡೆದ ವಿಶೇಷ ಪ್ರದರ್ಶನ ರಾಮಾಯಣದ ಭವ್ಯತೆಗೆ ಸಾಕ್ಷಿಯಾಯಿತು.

ದೆಹಲಿಯ ಭಾರತ್ ಮಂಟಪದಲ್ಲಿ ಭಾರತೀಯ ಚಿತ್ರರಂಗದ ವಿವಿಧ ಭಾಷೆಯ ಪತ್ರಕರ್ತರ ಎದುರು ನಡೆದ ಟ್ರೈಲರ್ ಬಿಡುಗಡೆ ಚಿತ್ರದ ಮೇಲಿನ ನಿರೀಕ್ಷೆ ಮತ್ತು ಕುತೂಹಲ ಹೆಚ್ಚು ಮಾಡಿದ್ದು ಬಾಲಿವುಡ್ ನಟ ರಣಬೀರ್ ಕಪೂರ್ ರಾಮನಾಗಿ, ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸೀತೆಯಾಗಿ ಹಾಗು ರಾಕಿಂಗ್ ಸ್ಟಾರ್ ಯಶ್, ರಾವಣನಾಗಿ ತೆರೆಯ ಮೇಲೆ ಅಬ್ಬರಿಸಿದ್ದು ದೀಪಾವಳಿಗೆ ಸಿನಿಮಾ ಜಾಗತಿಕವಾಗಿ ಬಿಡುಗಡೆಗೆ ಸಜ್ಜಾಗಿದೆ.
ಈ ಕ್ಷಣಕ್ಕೆ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ, ನಟರಾದ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ರಾಕುಲ್ ಪ್ರೀತ್ ಸಿಂಗ್, ಸನ್ನಿ ಡಿಯೋಲ್, ರವಿ ದುಬೆ, ಅರುಣ್ ಗೋವಿಲ್, ಶೋಭನಾ, ಅಜಿಂಕ್ಯ ದೇವ್, ಕುನಾಲ್ ಕಪೂರ್ ಸೇರಿದಂತೆ ವಿವಿಧ ಧರ್ಮಗಳು ಸ್ವಾಮೀಜಿಗಳು, ಯೋಗ ಗುರು ಬಾಬಾ ರಾಮ್ ದೇವ್, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಸೇರಿ ಅನೇಕರು ಸಾಕ್ಷಿಯಾದರು

ರಾಮಾಯಣದ ಈ ಪಯಣ ಕೇವಲ ದೆಹಲಿಗೆ ಸೀಮಿತವಾಗದೆ, ದೇಶದಾದ್ಯಂತ ಹರಡಿದೆ ಎಂಬುದು ವಿಶೇಷ ಸಂಗತಿಯಾಗಿದೆ. ‘Ramayana Schools Programme’ ಮೂಲಕ ಸುಮಾರು 500ಕ್ಕೂ ಹೆಚ್ಚು ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳು ಈ ಮಹಾಕಾವ್ಯದ ಮೌಲ್ಯಗಳನ್ನು ಕ್ರಿಯಾತ್ಮಕವಾಗಿ ಅರಿತುಕೊಂಡಿದ್ದಾರೆ. ಇವರಲ್ಲಿ ಆಯ್ಕೆಯಾದ ಪ್ರತಿಭಾವಂತ ವಿಜೇತ ವಿದ್ಯಾರ್ಥಿಗಳು ಈ ಸಂಕಲ್ಪ ಸಮಾರಂಭದಲ್ಲಿ ಭಾಗವಹಿಸಿರುವುದು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿದೆ.
ಅಲ್ಲದೆ, ದೇಶದ 20 ಪ್ರಮುಖ ನಗರಗಳಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಕ್ರಿಯೇಟರ್‍ಗಳು ಚಿತ್ರದ ಟ್ರೇಲರ್‍ನ ವಿಶೇಷ ಮುನ್ನೋಟ ವೀಕ್ಷಿಸಲಿದ್ದಾರೆ. ಕೇವಲ ಒಂದು ಚಿತ್ರದ ಆರಂಭವಲ್ಲ, ಬದಲಾಗಿ ಭಾರತದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯ ವಿಶ್ವಕ್ಕೆ ಹಂಚುವ ಒಂದು ಮಹಾನ್ ಪ್ರಯತ್ನವಾಗಿದೆ.

ನಿರ್ದೇಶಕ ನಿತೇಶ್ ತಿವಾರಿ ಅವರು ಕಥೆಯ ಮೂಲಕ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ತಲುಪುವ ಸಾಮರ್ಥ್ಯ ಹೊಂದಿದ್ದು, ಈ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತಾ ಮಾತೆ) ಮತ್ತು ರಾಕಿಂಗ್ ಸ್ಟಾರ್ ಯಶ್ (ರಾವಣ) ಅವರ ಉಪಸ್ಥಿತಿಯು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಜೊತೆಗೆ ಅರುಣ್ ಗೋವಿಲ್, ಶೋಭನಾ, ಅಜಿಂಕ್ಯ ದೇವ್, ಕುನಾಲ್ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ರವಿ ದುಬೆ ಅವರಂತಹ ಅನುಭವಿ ನಟರ ಸಮೂಹವೇ ಈ ಚಿತ್ರದಲ್ಲಿದೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾತನಾಡಿ ದೇಶದ ಇಂತಹ ಶ್ರೇಷ್ಠ ಕಥೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡಬೇಕು ಎನ್ನವ ಆಶಯ ನಮ್ಮದು, ರಾಮಾಯಣ ಕೇವಲ ಒಂದು ಪುರಾಣವಲ್ಲ, ದೈನಂದಿನ ಜೀವನದ ಭಾಗವಾಗಿದೆ ಮತ್ತು ತಲೆಮಾರುಗಳಿಂದ ಪಾಲಿಸಿಕೊಂಡು ಬಂದಿರುವ ಮೌಲ್ಯವಾಗಿದೆ ಇಂದು ನಮ್ಮ ಬಳಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಲಾತ್ಮಕ ಸಾಮರ್ಥ್ಯವಿರುವುದರಿಂದ, ಮಹಾಕಾವ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸಲು ಸಾಧ್ಯವಾಗಿದೆ ಭಾರತದ ಹೆಮ್ಮೆಯನ್ನು ಜಗತ್ತಿನ ಅತಿದೊಡ್ಡ ವೇದಿಕೆಯಲ್ಲಿ ಪ್ರದರ್ಶಿಸುವ ಒಂದು ಸುವರ್ಣಾವಕಾಶವಾಗಿದೆ ಎಂದು ಹೇಳಿದರು

ನಿರ್ದೇಶಕ ನಿತೇಶ್ ತಿವಾರಿ ಮಾತನಾಡಿ ಚಿತ್ರದ ಮೌಲ್ಯಗಳು ಸಾರ್ವತ್ರಿಕವಾಗಿರುವುದರಿಂದ, ಪ್ರತಿಯೊಂದು ದೃಶ್ಯವನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಗೌರವದಿಂದ ಚಿತ್ರಿಸಲಾಗಿದೆ ತಂತ್ರಜ್ಞಾನದ ಬಳಕೆಯೊಂದಿಗೆ ಮಹಾಕಾವ್ಯದ ಭಾವನಾತ್ಮಕ ಆಳವನ್ನು ಪ್ರೇಕ್ಷಕರಿಗೆ ತಲುಪಿಸುವುದು ಮುಖ್ಯ ಉದ್ದೇಶವಾಗಿದೆ. ತಂಡದ ಪರಿಶ್ರಮ ಮತ್ತು ಕಲಾವಿದರ ಶ್ರೇಷ್ಠ ಅಭಿನಯ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ ಮತ್ತು ನಟ ಯಶ್ ಒಡೆತನದ ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು
ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ನೀಡಿರುವುದು ಚಿತ್ರದ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ. ಜುಲೈ 24 ರಂದು ಚಿತ್ರದ ಅಧಿಕೃತ ಟ್ರೇಲರ್ ಜಗತ್ತಿನಾದ್ಯಂತ ಬಿಡುಗಡೆಯಾಗಲಿದ್ದು, ಮುಂಬರುವ ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ.


