ಜೊತೆಯಾಗಿ ಸಿನಿಮಾ ಮಾಡಲು ಸಿದ್ದ : ಶಿವಣ್ಣ – ಬಾಲಕೃಷ್ಣ ಘೋಷಣೆ
ಕನ್ನಡ ಚಿತ್ರರಂಗದಲ್ಲಿ ಎನರ್ಜಿಗೆ ಮತ್ತೊಂದು ಹೆಸರು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್. ಅದೇ ರೀತಿ ತೆಲುಗು ಚಿತ್ರರಂಗದಲ್ಲಿ ನಂದಮೂರಿ ಬಾಲಕೃಷ್ಣ ಕೂಡ. ಬೇರೆ ಬೇರೆ ಚಿತ್ರರಂಗದಲ್ಲಿ ಇದ್ದರೂ ತಮ್ಮದೇ ಆದ ಗತ್ತು ಗಮ್ಮತ್ತು ಇಟ್ಟುಕೊಂಡವರು. ಇದೀಗ ಈ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

ಚಿಕ್ಕಬಳ್ಳಾಪುರದ ಚಿಂತಾಮಣಿಯ ಚಿನ್ನಸಂದ್ರದಲ್ಲಿ ನಡೆದ ” ಅಖಂಡ -2 ” ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಶಿವಣ್ಣ ಮತ್ತು ಬಾಲಕೃಷ್ಣ ಜೊತೆಯಾಗಿ ಕೆಲಸ ಮಾಡಲು ಸಿದ್ದರಿದ್ದೇವೆ ಎಂದರು. ಈ ಅಪರೂಪದ ಕ್ಷಣಕ್ಕೆ ನಿರ್ದೇಶಕ ಬೋಯಪಾಟಿ ಶ್ರೀನು ಸಾಕ್ಷಿಯಾದರು. ಈ ಇಬ್ಬರ ಚಿತ್ರವನ್ನು ನಿರ್ದೇಶನ ಮಾಡಲು ಸಿದ್ದ ಎಂದು ಹೇಳಿದರು
ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ “ಅಖಂಡ-2” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಳ ಮಾಡಿದೆ.ಈ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಾಹಸ ನಿರ್ದೇಶಕ ರವಿವರ್ಮಾ, ಕಲಾವಿದರಾದ ಅಯ್ಯಪ್ಪ ಶರ್ಮಾ ಹಾಗೂ ಶರತ್ ಲೋಹಿತಾಶ್ವ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಶಿವಣ್ಣ ಮಾತನಾಡಿ, “ಬ್ರದರ್ ಬಾಲಕೃಷ್ಣ ಅವರ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿರುವುದು ಖುಷಿಕೊಟ್ಡಿದೆ. ನಾವು ಒಂದೇ ಕುಟುಂಬ. ಇವರ ತಂದೆ ನನಗೆ ದೊಡ್ಡಪ್ಪ. ಬಾಲಯ್ಯ ನನಗೆ ಅಣ್ಣ. ಇವರ ಕಾರ್ಯಕ್ರಮಕ್ಕೆ ಬರುವುದು ನಮಗೆ ಖುಷಿಯಾಗುತ್ತದೆ” ಎಂದರು.

ನಟ ನಂದಮೂರಿ ಬಾಲಕೃಷ್ಣ ಮಾತನಾಡಿ ‘ಕನ್ನಡ ಜನತೆಗೆ ನಮಸ್ಕಾರ. ನನ್ನ ತಮ್ಮ ಶಿವಣ್ಣ, ನನ್ನ ಅಭಿಮಾನಿಗಳಿಗೆ ಹಾಗೆ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿರುವ ಪ್ರೇಕ್ಷಕರಿಗೆ ಹೃದಯಪೂರ್ವಕ ಅಭಿನಂದನೆಗಳು. ಅಖಂಡ ಸಿನಿಮಾ ಬಿಡುಗಡೆಯಾಗುತ್ತಿದೆ. ಅಖಂಡ ಸಿನಿಮಾ ಕೇವಲ ತೆಲುಗು, ಕನ್ನಡ ಸಿನಿಮಾವಲ್ಲ. ಇದು ಪ್ಯಾನ್ ಇಂಡಿಯಾ ಸಿನಿಮಾ’ ಎಂದು ಹೇಳಿದರು.
ಆ ಬಳಿಕ ಶಿವಣ್ಣ ತಮ್ಮದೇ ಚಿತ್ರದ ಡೈಲಾಗ್ ಹೇಳಿದರು. ನಂತರ ಬಾಲಯ್ಯ ಅವರು ತಮ್ಮ ಸ್ಟೈಲ್ನಲ್ಲಿ ಡೈಲಾಗ್ ಬಿಟ್ಟರು.ಇದಕ್ಕೆ ನೆರೆದಿದ್ದ ಅಭಿಮಾನಿಗಳು ಸಿಳ್ಳೆ, ಚಪ್ಪಾಳೆ ಹಾಕಿದರು.

ನಿರ್ದೇಶಕ ಬೋಯಪಾಟಿ ಶ್ರೀನು ಮಾತನಾಡಿ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ ತಮನ್ ಸಂಗೀತ ನೀಡಿದ್ದಾರೆ. ಅಖಂಡ 2 ರಾಮ್ ಅಚಂತ ಹಾಗೂ ಗೋಪಿಚಂದ್ ಅಚಂತ ನಿರ್ಮಾಣ ಮಾಡುತ್ತಿದ್ದಾರೆ. ಎಂ. ತೇಜಸ್ವಿನಿ ನಂದಮೂರಿ ಈ ಸಿನಿಮಾ ಪ್ರಸ್ತುತಪಡಿಸಿದ್ದಾರೆ ಎಂದು ಹೇಳಿದರು
ಬಾಲಯ್ಯ ಅವರಿಗೆ ಜೋಡಿಯಾಗಿ ಸಂಯುಕ್ತಾ ನಟಿಸುತ್ತಿದ್ದಾರೆ. ಆದಿ ಪಿನಿಸೆಟ್ಟಿ ಈ ಸಿನಿಮಾಗೆ ಖಳನಾಯಕನಾಗಿದ್ದಾರೆ. ಸಿ. ರಾಮಪ್ರಸಾದ್ ಹಾಗೂ ಸಂತೋಷ್ ಛಾಯಾಗ್ರಹಣ ಮಾಡಿದ್ದಾರೆ. ಎ.ಎಸ್. ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ಡಿಸೆಂಬರ್ 5ರಂದು ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.


