Thalaiva Rajinikanth starrer "Vettaiyaan" released first song

ತಲೈವಾ ರಜನಿಕಾಂತ್ ಅಭಿನಯ್ “ವೆಟ್ಟೈಯಾನ್'” ಚಿತ್ರದ ಮೊದಲ ಹಾಡು ಬಿಡುಗಡೆ - CineNewsKannada.com

ತಲೈವಾ ರಜನಿಕಾಂತ್ ಅಭಿನಯ್ “ವೆಟ್ಟೈಯಾನ್'” ಚಿತ್ರದ ಮೊದಲ ಹಾಡು ಬಿಡುಗಡೆ

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಸಿನಿಮಾ ವೆಟ್ಟೈಯಾನ್ ಬಿಡುಗಡೆ ಸಜ್ಜಾಗಿದೆ. ಅಕ್ಟೋಬರ್ 10ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ವೆಟ್ಟೈಯಾನ್ ಬಳಗ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ.

ವೆಟ್ಟೈಯಾನ್’ ಸಿನಿಮಾದ ಮನಸಿಲಾಯೋ ಎಂಬ ಗೀತೆ ಅನಾವರಣಗೊಂಡಿದೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಹಾಡು ರಿಲೀಸ್ ಆಗಿದೆ. ಕಲರ್ ಫುಲ್ ಸೆಟ್ ನಲ್ಲಿ ತಲೈವ ಜೊತೆ ಮಂಜು ವಾರಿಯರ್ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ ರವಿಚಂದರ್ ಹಾಡಿಗೆ ಟ್ಯೂನ್ ಹಾಕಿದ್ದಾರೆ.

ರಜನಿಕಾಂತ್ ಹಾಗೂ ಅನಿರುದ್ಧ ಕಾಂಬೋದಲ್ಲಿ ಬಂದ ಹಾಡುಗಳು ಹಿಟ್ ಲೀಸ್ಟ್ ಸೇರಿವೆ. ಈ ಹಿಂದೆ ಪೆಟ್ಟಾ, ದರ್ಬಾರ್, ಜೈಲರ್ ಬಳಿಕ ಈ ಜೋಡಿ ವೆಟ್ಟೈಯಾನ್ ಗಾಗಿ ಒಂದಾಗಿದೆ. ಮನಸಿಲಾಯೋ ಸಿಂಗಿಂಗ್ ಸಖತ್ ಸೌಂಡ್ ಮಾಡುತ್ತಿದ್ದು, ಟ್ರೆಂಡಿಂಗ್ ನಲ್ಲಿದೆ.

ಸೂರ್ಯ ನಟಿಸಿದ ‘ಜೈ ಭೀಮ್’ ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ ‘ವೆಟ್ಟೈಯಾನ್’ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ. ಭಾರತೀಯ ಚಿತ್ರರಂಗದ ದಿಗ್ಗಜರಾದ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ.

‘ವೆಟ್ಟೈಯಾನ್’ ಚಿತ್ರದಲ್ಲಿ ರಜನಿಕಾಂತ್ ಅಮಿತಾಭ್ ಬಚ್ಚನ್ ಜೊತೆಯಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಸೇರಿದಂತೆ ಇನ್ನೂ ಅನೇಕ ಪ್ರಮುಖ ನಟರು ನಟಿಸಲಿದ್ದಾರೆ. ಹೀಗಾಗಿಯೇ ಇದು ಬಹು ತಾರಾಗಣದ ಚಿತ್ರವಾಗಲಿದೆ.

ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ‌ ನಡೆಸಲಾಗಿದೆ. ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ವೆಟ್ಟೈಯಾನ್ ಸಿನಿಮಾ ನಿರ್ಮಿಸುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin