Trailer of Yash, Ranbir Kapoor starrer 'Ramayana' released

ಯಶ್, ರಣಬೀರ್ ಕಪೂರ್ ನಟನೆಯ `ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆ - CineNewsKannada.com

ಯಶ್, ರಣಬೀರ್ ಕಪೂರ್ ನಟನೆಯ `ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆ

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ `ನಮಿತ್ ಮಲ್ಹೋತ್ರಾ ಅವರ ರಾಮಾಯಣ: ಚಿತ್ರದ ಅಧಿಕೃತ ಟ್ರೇಲರ್ ಬೆಳಗಿನ ಜಾವ ಜಾಗತಿಕವಾಗಿ ಬಿಡುಗಡೆಯಾಗಿದೆ. ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಮತ್ತು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರುವ ಟ್ರೇಲರ್ ಅನ್ನು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಐದು ಪ್ರಮುಖ ಭಾರತೀಯ ಭಾಷೆಗಳಲ್ಲಿ ಅನಾವರಣಗೊಳಿಸಲಾಗಿದೆ.

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಪೋಕಸ್ ಸ್ಟುಡಿಯೋಸ್’, ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‍ಎಕ್ಸ್ ಸ್ಟುಡಿಯೋ ‘ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಿಸಿವೆ. ಚಿತ್ರ 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತ ಭವ್ಯವಾಗಿ ಬಿಡುಗಡೆಯಾಗಲಿದ್ದು, ಜಾಗತಿಕ ವಿತರಣೆಯನ್ನು ‘ಸೋನಿ ಪಿಕ್ಚರ್ಸ್’ ಹಾಗೂ ಉತ್ತರ ಭಾರತದ ವಿತರಣೆಯನ್ನು ‘ಧರ್ಮ ಪ್ರೊಡಕ್ಷನ್ಸ್ವಹಿಸಿಕೊಂಡಿವೆ.

ವಿಶ್ವದ ಅತ್ಯಂತ ಪುರಾತನ ಮತ್ತು ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ಆಧರಿಸಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಎರಡು ಭಾಗಗಳ ಬೃಹತ್ ಸಿನಿಮ್ಯಾಟಿಕ್ ದೃಶ್ಯಕಾವ್ಯವಾಗಿ ನಿರ್ಮಿಸುತ್ತಿದ್ದಾರೆ. ಸೃಷ್ಟಿಯ ಆರಂಭದಿಂದಲೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಮೂರು ಲೋಕಗಳನ್ನು ಆಳುತ್ತಿದ್ದು, ಧರ್ಮ-ಅಧರ್ಮಗಳ ನಡುವಿನ ಸಮತೋಲನ ತಪ್ಪಿದಾಗ ಶ್ರೀಮಹಾ ವಿಷ್ಣು ರಾಮನಾಗಿ ಭೂಮಿಯಲ್ಲಿ ಅವತರಿಸುತ್ತಾರೆ. ಅಜೇಯ, ಅಮರ ಹಾಗೂ ಅಹಂಕಾರದಿಂದ ಬ್ರಹ್ಮಾಂಡವನ್ನೇ ನಡುಗಿಸುವ ಅಸುರ ಚಕ್ರವರ್ತಿ ರಾವಣನ ವಿರುದ್ಧ ರಾಮನು ನಡೆಸುವ ಧರ್ಮಯುದ್ಧವೇ ಮಹಾಕಾವ್ಯದ ಜೀವಾಳವಾಗಿದೆ.

ಈ ಮಹಾಕಾವ್ಯದಲ್ಲಿ ಭಾರತೀಯ ಚಿತ್ರರಂಗದ ಅದ್ಭುತ ಕಲಾವಿದರ ದಂಡೇ ಇದೆ. ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದರೆ, ಪ್ಯಾನ್-ಇಂಡಿಯಾ ಸ್ಟಾರ್ ‘ರಾಕಿಂಗ್ ಸ್ಟಾರ್’ ಯಶ್ ಬಲಶಾಲಿ ರಾವಣನ ಪಾತ್ರದಲ್ಲಿ ನಟಿಸುವುದರ ಜೊತೆಗೆ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಮೂಲಕ ಚಿತ್ರದ ಸಹ-ನಿರ್ಮಾಪಕರೂ ಆಗಿದ್ದಾರೆ.

ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ದೂರದರ್ಶನ ರಾಮಾಯಣ ಖ್ಯಾತಿಯ ಅರುಣ್ ಗೋವಿಲ್ ರಾಜ ದಶರಥನಾಗಿ, ಖ್ಯಾತ ನಟಿ ಶೋಭನಾ ಕೈಕೇಸಿಯಾಗಿ, ಅಜಿಂಕ್ಯ ದೇವ್ ಋಷಿ ವಿಶ್ವಾಮಿತ್ರನಾಗಿ, ಕುನಾಲ್ ಕಪೂರ್ ಇಂದ್ರ ದೇವನಾಗಿ ಮತ್ತು ರಾಕುಲ್ ಪ್ರೀತ್ ಸಿಂಗ್ ಶೂರ್ಪನಖಿಯಾಗಿದ್ದಾರೆ.

ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಬರಹಗಾರ ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದಾರೆ. ವಿಶೇಷವೆಂದರೆ, ಪೂರ್ವ ಮತ್ತು ಪಶ್ಚಿಮದ ಅತಿದೊಡ್ಡ ಕೊಲ್ಯಾಬರೇಷನ್ ಎಂಬಂತೆ, ಆಸ್ಕರ್ ಪ್ರಶಸ್ತಿ ವಿಜೇತ ದಿಗ್ಗಜರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್ ಖ್ಯಾತಿಯ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾತನಾಡಿ “ರಾಮಾಯಣ ಕೇವಲ ಒಂದು ಮಹಾಕಾವ್ಯವಲ್ಲ ಅದು ನಮ್ಮ ಜೀವನಶೈಲಿ ಹಾಗೂ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಾವು ರವಾನಿಸುವ ಮೌಲ್ಯಗಳ ಸಂಕೇತ. ಭಾರತದ ಶ್ರೇಷ್ಠ ಕಥೆಗಳನ್ನು ಜಗತ್ತಿನ ಅತಿ ದೊಡ್ಡ ವೇದಿಕೆಯಲ್ಲಿ ಪ್ರಸ್ತುತಪಡಿಸಬೇಕು ಎಂಬುದು ನನ್ನ ಕನಸಾಗಿತ್ತು. ಇಂದು ನಮ್ಮಲ್ಲಿ ಶ್ರೇಷ್ಠ ಕಲಾವಿದರು ಹಾಗೂ ಅತ್ಯಾಧುನಿಕ ತಂತ್ರಜ್ಞಾನವಿದ್ದು, ಈ ಕಥೆಯನ್ನು ಜಗತ್ತಿಗೆ ಪರಿಚಯಿಸುವುದು ನಮ್ಮ ಹೆಮ್ಮೆ” ಎಂದಿದ್ದಾರೆ.

ನಿರ್ದೇಶಕ ನಿತೇಶ್ ತಿವಾರಿ ಮಾತನಾಡಿ, “ರಾಮಾಯಣ ಅದರ ಬೃಹತ್ ಪ್ರಮಾಣದಿಂದಾಗಿ ಮಾತ್ರವಲ್ಲದೆ, ಅದು ಪ್ರತಿನಿಧಿಸುವ ಕಾಲಾತೀತ ಮೌಲ್ಯಗಳಿಂದಾಗಿ ಅತ್ಯಂತ ಶ್ರೇಷ್ಠ ಕಥೆಯಾಗಿದೆ. ಈ ಕಥೆಯನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಗೌರವದಿಂದ ಪ್ರಸ್ತುತಪಡಿಸುವುದು ನನ್ನ ಜವಾಬ್ದಾರಿಯಾಗಿತ್ತು. ಈ ದೃಶ್ಯವೈಭವದ ಜೊತೆಗೆ ರಾಮಾಯಣದ ಭಾವನೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರೇಕ್ಷಕರು ಅನುಭವಿಸುತ್ತಾರೆ ಎಂಬ ಭರವಸೆ ನನಗಿದೆ” ಎಂದು ತಿಳಿಸಿದ್ದಾರೆ.

‘ರಾಕಿಂಗ್ ಸ್ಟಾರ್’ ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಪ್ರಸ್ತುತ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಚಿತ್ರಗಳನ್ನು ಸಹ-ನಿರ್ಮಾಣ ಮಾಡುವ ಮೂಲಕ ಹೊಸ ಶೈಲಿಯ ಕಥಾನಿರೂಪಣೆಗೆ ನಾಂದಿ ಹಾಡಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin