ಸೆಪ್ಟಂಬರ್ 28ಕ್ಕೆ ನಟ ಗಣೇಶ್ ಅಭಿನಯದ “ಬಾನ ದಾರಿಯಲಿ” ಚಿತ್ರ ಬಿಡುಗಡೆ
ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ, ಪ್ರೀತಂ ಗುಬ್ಬಿ ನಿರ್ದೇಶನದ ಹಾಗೂ ಶ್ರೀವಾರಿ ಟಾಕೀಸ್ ನಿರ್ಮಾಣದ “ಬಾನ ದಾರಿಯಲಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಪ್ರಶಂಸೆ ವ್ಯಕ್ತವಾಗಿದೆ. ಕನ್ನಡದ ಮುಂಚೂಣಿಯ ಆಡಿಯೋ ಕಂಪನಿ ಆನಂದ್ ಆಡಿಯೋ ಮೂಲಕ ಟ್ರೈಲರ್ ಬಿಡುಗಡೆಯಾಗಿದೆ.
ಚಿತ್ರದ ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ. ಇದು ಸಹಜವಾಗಿ ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೆಆರ್ ಜಿ ಸಂಸ್ಥೆ ಮೂಲಕ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.
ನಟ ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ ಈವರೆಗೂ ಮಾಡಿರದ ಪಾತ್ರ “ಬಾನ ದಾರಿಯಲಿ” ಪ್ರೀತಿಯ ಬಗೆಗಿನ ಚಿತ್ರ. ಪುನೀತ್ ರಾಜಕುಮಾರ್ ಅಭಿನಯಿಸಿದ್ದ ಈ ಯಶಸ್ವಿ ಹಾಡಿಗೂ ನಮ್ಮ ಸಿನಿಮಾ ಕಥೆಗೆ ಹೊಂದಾಣಿಕೆಯಾಗುತ್ತದೆ. ಹಾಗಾಗಿ “ಬಾನ ದಾರಿಯಲಿ” ಶೀರ್ಷಿಕೆ ಇಟ್ಟಿದ್ದೇವೆ. ಪ್ರೀತಂ ಗುಬ್ಬಿ ಮುಂಚಿನಿಂದ ಸ್ನೇಹಿತರು. ಕಾಂಬಿನೇಶನ್ ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ಈ ಚಿತ್ರ ಎಲ್ಲರ ಮನಸ್ಸಿಗೂ ಬಹಳ ಹತ್ತಿರವಾಗುತ್ತದೆ.
ಕೀನ್ಯಾ, ಆಫ್ರಿಕಾ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಅಲ್ಲಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ನಮ್ಮ ತಂತ್ರಜ್ಞರ ಶ್ರಮವನ್ನು ಮೆಚ್ಚಲೇಬೇಕು. ಚಿತ್ರದ ನಾಯಕಿಯರು, ರಂಗಾಯಣ ರಘು ಅವರು ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. “ಬಾನ ದಾರಿಯಲಿ” ಸೆಪ್ಟೆಂಬರ್ 28 ರಂದು ಕೆಆರ್‍ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು.
ಹಿರಿಯ ಕಲಾವಿದ ರಂಗಾಯಣ ರಘು ಮಾತನಾಡಿ, ಚಿತ್ರದಲ್ಲಿ ನನ್ನದು ನಾಯಕಿಯ ತಂದೆಯ ಪಾತ್ರ. ಗಣೇಶ್ ಬಗ್ಗೆ ಹೇಳಬೇಕೆಂದರೆ, ನೀವು ಇಷ್ಟು ದಿನ ನೋಡಿರುವ ಗಣೇಶ್ ಬೇರೆ. ಈ ಚಿತ್ರದಲ್ಲಿ ನೋಡುವ ಗಣೇಶ್ ಬೇರೆ. ಅಂತಹ ವಿಭಿನ್ನ ಪಾತ್ರ ಎನ್ನಬಹುದು. ಕೀನ್ಯಾದಲ್ಲಿ ಚಿತ್ರೀಕರಣ ಮಾಡುವಾಗ ಬರುತ್ತಿದ್ದ ಪ್ರಾಣಿಗಳನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ ಎಂದರು.
ನಾಯಕಿ ರುಕ್ಮಿಣಿ ವಸಂತ್ ಮಾತನಾಡಿ ಲೀಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ನಾನು ಈ ಚಿತ್ರಕ್ಕಾಗಿ ಸರ್ಫಿಂಗ್ ಕಲಿತ್ತಿದ್ದೇನೆ ಎಂದರು
ಮತ್ತೊಬ್ಬ ನಾಯಕಿ ರೀಷ್ಮಾ ನಾಣಯ್ಯ ಮಾತನಾಡಿ, ಕಾದಂಬರಿ ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ ಎಂದು ವಿವರ ನೀಡಿದರು.
ಶ್ರೀವಾರಿ ಟಾಕೀಸ್ ಪರವಾಗಿ ಗೋಪಿ, ಸಂಭಾಷಣೆ ಬರೆದಿರುವ ಮಾಸ್ತಿ, ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ , ಆನಂದ್ ಆಡಿಯೋ ಶ್ಯಾಮ್ ಹಾಗೂ ಕೆಆರ್ ಜಿ ಸ್ಟುಡಿಯೋಸ್ ನ ಯೋಗಿ ಜಿ ರಾಜ್ ಮುಂತಾದವರು “ಬಾನ ದಾರಿಯಲಿ” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು