“ಶ್ರೀಜಗನ್ನಾಥದಾಸರು ಭಾಗ 2” ಚಿತ್ರಕ್ಕೆ 50 ದಿನಗಳ ಸಂಭ್ರಮ
ನಾಡಿನ ಪ್ರಸಿದ್ದ ಹರಿದಾಸರ ಜೀವನ ಚರಿತ್ರೆಯನ್ನು ನಿರ್ದೇಶಕ ಮಧುಸೂದನ್ ಹವಾಲ್ದಾರ್ ಸಿನಿಮಾ ಮೂಲಕ ಜನರಿಗೆ ಪರಿಚಯಿಸಿದ್ದಾರೆ. “ಶ್ರೀಜಗನ್ನಾಥದಾಸರು” ಭಾಗ 2 ಚಿತ್ರ 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ.

ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮ ತೀರ್ಥರು ಸಮಾರಂಭಕ್ಕೆ ಆಗಮಿಸಿ ಅನುಗ್ರಹ ಸಂದೇಶ ನೀಡಿದರು. ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ, ಡಾ.ವಾಸುದೇವ ಅಗ್ನಿಹೋತ್ರಿ, ಸಿ.ಆರ್.ಮುರಳಿ, ಗಾಯಕ ರಾಯಚೂರು ಶೇಷಗಿರಿದಾಸ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆಸ್ತಿಕರನ್ನು ಭಕ್ತಿಯ ಮಾರ್ಗಕ್ಕೆ ಕೊಂಡೊಯ್ದವರಲ್ಲಿ ಶ್ರೀಜಗನ್ನಾಥ ದಾಸರು ಪ್ರಮುಖರು. ಹರಿಕಥಾಮೃತಸಾರದಂತಹ ಮೇರುಕೃತಿಯನ್ನು ನೀಡಿರುವ ಮಹಾನುಭಾವರು. ಇರುಳಿನಲ್ಲಿ ಸೂರ್ಯನನ್ನು ದರ್ಶನ ಮಾಡಿಸಿದ ನಮ್ಮ ಪರಂಪರೆಯ ಶ್ರೀಸತ್ಯಭೋದ ತೀರ್ಥರ ಶಿಷ್ಯರು ಶ್ರೀಜಗನ್ನಾಥ ದಾಸರು.
ಹರಿದಾಸರ ಚರಿತ್ರೆಯನ್ನು ಮಧುಸೂದನ್ ಹವಾಲ್ದಾರ್‍ಸಿನಿಮಾ ಮೂಲಕ ಜನರ ಬಳಿಗೆ ತಂದಿದ್ದಾರೆ. ಈಗಾಗಲೇ “ಶ್ರೀಜಗನ್ನಾಥ ದಾಸರು”, ಶ್ರೀವಿಜಯದಾಸರು”, “ಶ್ರೀಮಹಿಪತಿದಾಸರು”, ” ಶ್ರೀಪ್ರಸನ್ನವೆಂಕಟದಾಸರು” ಮುಂತಾದ ದಾಸಶ್ರೇಷ್ಠರ ಚಿತ್ರಗಳನ್ನು ನಿರ್ದೇಶಿಸಿರುವ ಮಧುಸೂದನ್ ಹವಾಲ್ದಾರ್ ಪ್ರಸ್ತುತ ನಿರ್ದೇಶಿಸಿರುವ “ಶ್ರೀಜಗನ್ನಾಥದಾಸರು ಭಾಗ 2” ಚಿತ್ರ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಮಧುಸೂದನ್ ಹವಾಲ್ದಾರ್ ಇಂತಹ ದಾರ್ಶನಿಕರ ಜೀವನ ಚರಿತ್ರೆಯ ಚಿತ್ರಗಳನ್ನು ಹೆಚ್ಚಾಗಿ ನಿರ್ದೇಶಿಸಲಿ ಎಂದು ಶ್ರೀಸತ್ಯಾತ್ಮ ತೀರ್ಥರು ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳವರು ಮಧುಸೂದನ್ ಹವಾಲ್ದಾರ್ ಅವರ ಮುಂದಿನ ನಿರ್ದೇಶನದ “ನಮ್ಮ ರಾಯರು” ಚಿತ್ರದ ಲಾಂಛನವನ್ನು ಅನಾವರಣ ಮಾಡಿದರು.

ಸಮಾರಂಭಕ್ಕೆ ಆಗಮಿಸಿ ಅನುಗ್ರಹ ಸಂದೇಶ ನೀಡಿದ ಪರಮಪೂಜ್ಯ ಶ್ರೀಸತ್ಯಾತ್ಮ ತೀರ್ಥ ಮಹಾಸ್ವಾಮಿಗಳ ಅಡಿದಾವರೆಗಳಿಗೆ ವಂದಿಸುತ್ತೇನೆ. ತಂದೆ – ತಾಯಿ ಆಶೀರ್ವಾದದಿಂದ ಹಾಗೂ ಮಿತ್ರರ ಸಹಕಾರದಿಂದ ಇಂತಹ ಚಿತ್ರವನ್ನು ಜನರ ಮುಂದೆ ತರಲು ಸಾಧ್ಯವಾಯಿತು. ಶ್ರೀಮಾತಾಂಬುಜ ಮೂವೀಸ್ ಮೂಲಕ ಚಿತ್ರ ನಿರ್ಮಾಣವಾಗಿದೆ.
ಈ ಚಿತ್ರ ನಾನು ಮಾಡಿದ್ದಲ್ಲ. ಶ್ರೀಜಗನ್ನಾಥದಾಸರೇ ನನ್ನೊಳಗೆ ನಿಂತು ಮಾಡಿಸಿದ್ದು ಎಂದು ಮಾತನಾಡಿದ ನಿರ್ದೇಶಕ ಮಧುಸೂದನ್ ಹವಾಲ್ದಾರ್, ಚಿತ್ರತಂಡಕ್ಕೆ ಹಾಗೂ ಆಗಮಿಸಿದ ಗಣ್ಯರಿಗೆ ಧನ್ಯವಾದ ತಿಳಿಸಿದರು.

