ಜಪಾನಿನಲ್ಲಿ ಬಿಡುಗಡೆಗೆ ಸಿದ್ಧಗೊಂಡ “777 ಚಾರ್ಲಿ”
ಪರಂವಃ ಸ್ಟುಡಿಯೋಸ್ ನಿರ್ಮಾಣದ, ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಇದೀಗ ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಜೂನ್ 28ಕ್ಕೆ ಜಪಾನ್ ದೇಶದ ಪ್ರಮುಖ ನಗರಗಳಲ್ಲಿ ಚಿತ್ರ ತೆರೆಕಾಣಲಿದೆ.
ಜಪಾನಿನ ಅತೀ ದೊಡ್ಡ ಹಾಗೂ ಜಪಾನ್ ಚಿತ್ರರಂಗದಲ್ಲಿ 100 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ “ಶೋಚಿಕೋ ಮೂವೀ” ಎಂಬ ಸಂಸ್ಥೆ ಈ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲಿದೆ. ವಿಶೇಷವೆಂದರೆ, ಇದೇ ಸಂಸ್ಥೆಯು ಈ ಹಿಂದೆ “ಹಾಚಿ : ಎ ಡಾಗ್ಸ್ ಟೇಲ್” ಎಂಬ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಿತ್ತು.
ಕಳೆದ ವರ್ಷ ಥೈಲ್ಯಾಂಡ್ ನಲ್ಲಿ ಡಬ್ ಆಗಿ ಬಿಡುಗಡೆಗೊಂಡ ಈ ಚಿತ್ರ, ಮುಂದಿನ ದಿನಗಳಲ್ಲಿ ಜಪಾನ್ ಸೇರಿದಂತೆ ರಷ್ಯಾ, ಲ್ಯಾಟಿನ್ ಅಮೆರಿಕ, ತೈವಾನ್, ಜರ್ಮನಿ ಹಾಗೂ ಇನ್ನಿತರ ದೇಶಗಳಲ್ಲಿ ಬಿಡುಗಡೆಯಾಗಲಿದೆ.
ಕಿರಣ್ ರಾಜ್ ನಿರ್ದೇಶನದ ಈ ಚಿತ್ರ 2022ರ ಜೂನ್ 10 ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆದಿತ್ತು. ಹಲವಾರು ಪ್ರಶಸ್ತಿಗಳನ್ನ ಬಾಚಿಕೊಂಡ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯೂ ದೊರಕಿದೆ.