ಹಯವದನ ನಿರ್ದೇಶನದಲ್ಲಿ ಶ್ರೀ ವಾದಿರಾಜ ಸ್ವಾಮಿಗಳ ಜೀವಾನಧಾರಿತ ಚಿತ್ರ
ಬೆಳ್ಳಿತೆರೆ ಮೇಲೆ ಬರಲಿದೆ ಶ್ರೀ ವಾದಿರಾಜ ಸ್ವಾಮಿಗಳ ಜೀವನಾಧಾರಿತ ಕಥೆ- ಹಯವದನ ನಿರ್ದೇಶನದಲ್ಲಿ ಮೂಡಿಬರಲಿದೆ ಸಿನಿಮಾ. ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾ ನಿರ್ದೇಶಕ ಹಯವದನ ಹೊಸದೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಜೀವನಾಧಾರಿತ ಸಿನಿಮಾವನ್ನು ಹಯವದನ ನಿರ್ದೇಶನ ಮಾಡುತ್ತಿದ್ದಾರೆ.
ವಾದಿರಾಜ ಸ್ವಾಮಿಗಳ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರ ಆಶೀರ್ವಾದೊಂದಿಗೆ ಸಿನಿಮಾ ಸೆಟ್ಟೇರಿದೆ. ವಾದಿರಾಜ ಗುರುಗಳ ಜಯಂತಿಯಂದೇ ಶ್ರೀ ವಾದಿರಾಜ ಸ್ವಾಮಿಗಳ ಮಠ ಹೂವಿನಕೆರೆ ಕುಂದಾಪುರದಲ್ಲಿ ಸಿನಿಮಾ ಘೋಷಣೆ ಮಾಡಿದ್ದು ವಿಶೇಷವಾಗಿತ್ತು.
ವಾದಿರಾಜ ಸ್ವಾಮಿಗಳ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರವರು ಮಾತನಾಡಿ ವಾದಿರಾಜ ಗುರುಗಳು15,16ನೇ ಶತಮಾನದಲ್ಲಿ ಬಂದ ಮೇರು ವ್ಯಕ್ತಿ, ಈ ಜಗತ್ತಿಗೆ ಬಹುಮುಖ ಸಂದೇಶ ನೀಡಿದವರು. ಅವರು 113 ವರ್ಷ ಸನ್ಯಾಸ ಜೀವನ ನಡೆಸಿದ್ದಾರೆ. ಅವರ 120 ವರ್ಷಗಳ ಜೀವನವನ್ನು ಒಂದು ಸಿನಿಮಾದಲ್ಲಿ ತೋರಿಸೋದು ಕಷ್ಟಸಾಧ್ಯ. ಈ ಹಿಂದೆ ಹಲವು ಜನರು ಗುರುಗಳ ಧಾರಾವಾಹಿ, ಸಿನಿಮಾ ಮಾಡೋದಾಗಿ ಬಂದಿದ್ದರು ಆದರೆ ನಾವು ಒಪ್ಪಿಕೊಂಡಿರಲಿಲ್ಲ. ಒಬ್ಬ ಯೋಗ್ಯ ವ್ಯಕ್ತಿ ಬರಬೇಕು ಎಂದು ಕಾಯುತ್ತಿದ್ವಿ ಆಗ ಬಂದವರೇ ನಿರ್ದೇಶಕ ಹಯವದನ. ಅವರು ವಾದಿರಾಜ ಗುರುಗಳ ಭಕ್ತರು ಕೂಡ ಹೌದು, ಅವರಲ್ಲಿ ಅಪಾರ ಶ್ರದ್ದೆ ಇದೆ. ಸಮಾಜಕ್ಕೆ ವಾದಿರಾಜರು ಯಾವ ರೀತಿ ಸಂದೇಶ ನೀಡಿದ್ದರು ಅನ್ನೋದನ್ನು ಸಿನಿಮಾದಲ್ಲಿ ತರಬೇಕು ಎಂದು ನಾವು ಹೇಳಿದ್ದೇವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡ್ರು.
ವಿಕ್ರಮ್ ಹತ್ವಾರ್, ನಿರ್ದೇಶಕ ಹಯವದನ ಸ್ಕ್ರಿಪ್ಟ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದು, ಐದು ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಟೈಟಲ್, ತಾರಾಬಳಗ, ತಾಂತ್ರಿಕ ಬಳಗದ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ಸ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಹಾಗೂ ಸ್ನೇಹಿತರು ಚಿತ್ರದ ನಿರ್ಮಾಣ ಸಾರಥ್ಯ ವಹಿಸಿಕೊಂಡಿದ್ದಾರೆ.