ನಟ ರೂಪೇಶ್ ಶೆಟ್ಟಿ ಹುಟ್ಟಹಬ್ಬಕ್ಕೆ “ಅಧಿಪತ್ರ” ಹೊಸ ಚಿತ್ರ ಘೋಷಣೆ
ತುಳು ಚಿತ್ರರಂಗದಲ್ಲಿ ನಟ, ನಿರ್ದೇಶಕನಾಗಿ ಮೋಡಿ ಮಾಡಿರುವ ರೂಪೇಶ್ ಶೆಟ್ಟಿ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡವರು. ಆಗಸ್ಟ್ 14 ಇಂದು ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಅವರ ಹೊಸ ಚಿತ್ರ “ ಅಧಿಪತ್ರ” ಘೋಷಣೆಯಾಗಿದೆ.
ಇತ್ತೀಚೆಗಷ್ಟೇ ತುಳು ಭಾಷೆಯಲ್ಲಿ ಮೂಡಿ ಬಂದ ಸರ್ಕಸ್ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಬಾರಿ ಸದ್ದು ಮಾಡಿದ ಬೆನ್ನಲ್ಲೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರೂಪೇಶ್ ಶೆಟ್ಟಿ ಅವರಿಗೆ ಉಡುಗೊರೆಯಾಗಿ “ಅಧಿಪತ್ರ” ಚಿತ್ರ ಪ್ರಕಟವಾಗಿದೆ.
`ಅಧಿಪತ್ರ’ ಚಿತ್ರ ಶೀರ್ಷಿಕೆಯ ಮೂಲವೇ ಕುತೂಹಲ ಕೆರಳಿಸಿದ್ದು ಕಥೆ ಏನಿರಬಹುದು, ಯಾರೆಲ್ಲಾ ಕಲಾವಿದರಿದ್ದಾರೆ.ನಾಯಕಿ ಯಾರು ಎನ್ನುವ ಒಂದಷ್ಟು ಪ್ರಶ್ನೆಗಳಿಗೆ ಹಂತ ಹಂತವಾಗಿ ಉತ್ತರ ನೀಡಲು ಚಿತ್ರತಂಡ ಮುಂದಾಗಿದೆ.
ಅಧಿಪತ್ರ ಚಿತ್ರವನ್ನು ಕೆ.ಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿದ್ದು ಚಯನ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ತುಳು ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ನೆಲೆ ಕಂಡುಕೊಂಡಿರುವ ರೂಪೇಶ್ ಶೆಟ್ಟಿ. ಬಿಗ್ ಬಾಸ್ ಶೋಗೆ ತೆರಳಿ, ವಿನ್ನರ್ ಹೊರಬಂದಿದ್ದೆಲ್ಲವೂ ಕಣ್ಣ ಮುಂದಿದೆ. ರೂಪೇಶ್ ಶೆಟ್ಟಿ ಆ ಶೋನಿಂದ ಹೊರ ಬರುತ್ತಲೇ ಕನ್ನಡ ಸಿನಿಮಾ ರಂಗದಲ್ಲಿ ನಾಯಕನಾಗಿ ಮಿಂಚುತ್ತಾರೆಂದು ಎನ್ನಲಾಗಿತ್ತು.ಕೊಂಚ ತಡವಾದರೂ ಒಂದೊಳ್ಳೆ ಕಥೆಯೊಂದಿಗೆ, ಭಿನ್ನವಾದ ಪಾತ್ರದೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ರೂಪೇಶ್ ಶೆಟ್ಟಿ ತಯಾರಾಗಿದ್ದಾರೆ.
ಸರ್ಕಸ್ ಎಂಬ ತುಳು ಚಿತ್ರ ನಿರ್ದೇಶನ, ನಿರ್ಮಾಣ ಸೇರಿದಂತೆ ವಿವಿಧ ಜವಾಬ್ದಾರಿ ಹೊತ್ತುಕೊಂಡಿದ್ದ ರೂಪೇಶ್ ಶೆಟ್ಟಿ ಬೇರೆ ಯಾವುದೇ ಚಿತ್ರ ಒಪ್ಪಿಕೊಂಡಿರಲಿಲ್ಲ. ಇದೀಗ ಅವರು ಕನ್ನಡದಲ್ಲಿ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ.ನಾಯಕನಾಗಿ ನಟಿಸಲಿರುವ ಕನ್ನಡ ಸಿನಿಮಾ ಟೈಟಲ್ ಲಾಂಚ್ ಆಗುವ ಹೊತ್ತಿನಲ್ಲಿಯೇ, ರೂಪೇಶ್ ಶೆಟ್ಟಿ ದೊಡ್ಡ ಗೆಲುವಿನ ಸಂಭ್ರಮದಲ್ಲಿದ್ದಾರೆ.
ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿರುವ ಸರ್ಕಸ್' ಚಿತ್ರ ದೊಡ್ಡ ಮಟ್ಟದಲ್ಲಿಯೇ ಹಿಟ್ ಆಗಿದೆ. ವಿದೇಶಗಳಿಗೂ ಸರ್ಕಸ್ ಚಿತ್ರ ಮ್ಯಾಜಿಕ್ ಮಾಡಿದೆ. ನೂರೈವತ್ತಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೊಂಡ ತುಳುವಿನ ಮೊದಲ ಚಿತ್ರ ಹೆಗ್ಗಳಿಕೆಯೂ ಆ ಚಿತ್ರಕ್ಕೆ ಸಿಕ್ಕಿದೆ. ಇನ್ನು
ಅಧಿಪತ್ರ’ ಚಿತ್ರದ ವಿಚಾರಕ್ಕೆ ಬರುವುದಾದರೆ, ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ ಎನ್ನುವುದು ಚಿತ್ರತಂಡ ಮಾತು