Addition of 'Birugali Malashree' in "Pen Drive" with 'Benki Tanisha'

‘ಬೆಂಕಿ ತನಿಶಾ’ ಜೊತೆ “ಪೆನ್ ಡ್ರೈವ್” ನಲ್ಲಿ ‘ಬಿರುಗಾಳಿ ಮಾಲಾಶ್ರೀ’ ಸೇರ್ಪಡೆ - CineNewsKannada.com

‘ಬೆಂಕಿ ತನಿಶಾ’ ಜೊತೆ “ಪೆನ್ ಡ್ರೈವ್” ನಲ್ಲಿ ‘ಬಿರುಗಾಳಿ ಮಾಲಾಶ್ರೀ’ ಸೇರ್ಪಡೆ

“ಬಿಗ್ ಬಾಸ್” ಖ್ಯಾತಿಯ ತನಿಷಾ ಕುಪ್ಪಂಡ ಅಭಿನಯದ “ಪೆನ್ ಡ್ರೈವ್” ಚಿತ್ರದ ಪ್ರಮುಖಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ. ಬೆಂಕಿ ಜೊತೆ ಬಿರುಗಾಳಿಯೂ ಸೇರಿಕೊಂಡಿರುವುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ.

ಎನ್ ಹನುಮಂತರಾಜು ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ “ಪೆನ್ ಡ್ರೈವ್” ಚಿತ್ರವನ್ನು ಸೆಬಾಸ್ಟಿನ್ ಡೇವಿಡ್ ನಿರ್ದೇಶನ ಮಾಡುತ್ತಿದ್ದಾರೆ

“ಚಾಮುಂಡಿ”, “ದುರ್ಗಿ” ಮುಂತಾದ ಆಕ್ಷನ್ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಆಕ್ಷನ್ ಕ್ವೀನ್ ಎಂದು ಜನಪ್ರಿಯರಾಗಿರುವ ಮಾಲಾಶ್ರೀ ಹಾಗೂ “ಬಿಗ್ ಬಾಸ್” ನಂತರ ಬೆಂಕಿ ಅಂತಲೇ ಕರೆಯಲ್ಪಡುವ ತನಿಷಾ ಕುಪ್ಪಂಡ ಇಬ್ಬರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಅಭಿಮಾನಿ ವಲಯದಲ್ಲಿ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲ ಇದೆ.

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇ ಗೌಡ ಆರಂಭ ಫಲಕ ತೋರಿದರು. ಹಿರಿಯ ವಕೀಲ ರೇವಣ್ಣ ಸಿದ್ದಯ್ಯ ಕ್ಯಾಮೆರಾ ಚಾಲನೆ ಮಾಡಿದರು. ಮಾಲಾಶ್ರೀ ಅವರು ಅಧ್ಯಕ್ಷತೆ ವಹಿಸಿದ್ದರು. ಆನಂತರ ಚಿತ್ರತಂಡದವರು ಹಾಗೂ ಗಣ್ಯರು ಸೇರಿ ಅಲ್ಲಿ ಉಪಸ್ಥಿತರಿದ್ದ ಮಹಿಳೆಯರಿಗೆ ಮಂಗಳದ್ರವ್ಯ ಸಮೇತ ಸೀರೆ ನೀಡಿದರು.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಈಗಾಗಲೇ ಹದಿನೈದು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಸೆಬಾಸ್ಟಿನ್ ಡೇವಿಡ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮಾಲಾಶ್ರೀ, ತನಿಷಾ ಕುಪ್ಪಂಡ, ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಗೀತರಚನೆ ಹಾಗೂ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಾಗೇಶ್ ಅವರು ಸಂಕಲನ ಕಾರ್ಯದೊಂದಿಗೆ ಸಂಭಾಷಣೆ ಬರೆಯುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin