“ಅಂದೊಂದಿತ್ತು ಕಾಲ” ಚಿತ್ರ ಆಗಸ್ಟ್ 29 ರಂದು ಬಿಡುಗಡೆ: ಕುತೂಹಲ ಹೆಚ್ಚಿಸಿದ ತಾಯಿ- ಮಗನ ಹಾಡು
ಚಂದನವನದಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರಗಳ ಪೈಕಿ ನಟ ವಿನಯ್ ರಾಜ್ ಕುಮಾರ್ ಮತ್ತು ನಟಿ ಅದಿತಿ ಪ್ರಭುದೇವ ನಟನೆಯ ಚಿತ್ರ “ಅಂದೊಂದಿತ್ತು ಕಾಲ” . ಚಿತ್ರದಲ್ಲಿನ ‘ ಮಹಾರಾಜ ಹಾಗೆಂದು.. ಮನಸಾರೆ ಹಾರೈಸಿದೆ ನೀನಮ್ಮ’… ಎಂಬ ತಾಯಿ ಮಗನ ಬಾಂಧವ್ಯದ ಮನಮುಟ್ಟುವ ಹಾಡು ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟುಗೊಳಿಸಿದೆ.

ಕಿನ್ನಾಲ್ ರಾಜ್ ಸಾಹಿತ್ಯ ಬರೆದಿರುವ ಹಾಡನ್ನು ಸುನಿಲ್ ಕಶ್ಯಪ್ ಹಾಡಿದ್ದಾರೆ. ತಾಯಿ-ಮಗನ ಪ್ಯಾತೋ ಸಾಂಗ್ ಇದಾಗಿದ್ದು , ಮದರ್ ಆ್ಯಂತಮ್ ಎಂದೇ ಹೇಳಬಹುದು. ಚಿತ್ರದ ಪ್ರತಿಯೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು , ಈಗಾಗಲೇ ಎರಡು ಹಾಡು ಭರ್ಜರಿ ಹಿಟ್ ಆಗಿದ್ದು , ಮೂರನೇ ಹಾಡು ಕೂಡ ಎಲ್ಲರ ಮನಸ್ಸನ್ನು ಗೆಲ್ಲಲು ಸಿದ್ಧವಾಗಿದೆ.
ಈ ವೇಳೆ ಮಾತಿಗಿಳಿದ ನಟ ವಿನಯ್ ರಾಜಕುಮಾರ್, ನನ್ನ ಎಲ್ಲಾ ಸಿನಿಮಾಗಳಿಗಿಂತ ಚಿತ್ರ ಬಹಳ ವಿಶೇಷ. ಚಿತ್ರದ ಒಂದೊಂದು ಹಾಡು ಬಹಳ ವಿಭಿನ್ನವಾಗಿದ್ದು , ಅಮ್ಮ ಮಗನ ಸೆಂಟಿಮೆಂಟ್ ಸಾಂಗ್ ಬಹಳ ಮನಸನ್ನ ಸೆಳೆಯುತ್ತದೆ. ಇದೊಂದು ನಿರ್ದೇಶಕನ ಲೈಫ್ ಜರ್ನಿ, ಕೀರ್ತಿ ಲೈಫ್ ನಲ್ಲಿ ನಡೆದ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದರಲ್ಲೂ ಸಿನಿಮಾ ಬದುಕಿನ ಸುತ್ತಮುತ್ತ ನಡೆದದ್ದನ್ನು ಕತೆಯಾಗಿಸಿಕೊಂಡು ಬಹಳ ನ್ಯಾಚುರಲ್ ಆಗಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಚಿತ್ರದಲ್ಲಿ ನನ್ನದು ಮೂರು ಶೇಡ್ ಗಳಲ್ಲಿ ಒಳಗೊಂಡಿರುವ ಪಾತ್ರ . ಮೂರು ವರ್ಷದ ಜರ್ನಿ ಶ್ರಮದ ಫಲ. ಅಮ್ಮನಾಗಿ ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ನನ್ನ ಮೂರನೇ ಚಿತ್ರ ಇದಾಗಿದೆ. ಇದೊಂದು ಫಿಲ್ ಗುಡ್ ಚಿತ್ರವಾಗಿದ್ದು , ಎಲ್ಲಾ ವರ್ಗದವರಿಗೂ ಇಷ್ಟವಾಗುವಂತ ಕಥೆ ಒಳಗೊಂಡಿದೆ, ನಿಮ್ಮೆಲ್ಲರ ಬೆಂಬಲ ನಮ್ಮ ಚಿತ್ರಕ್ಕೆ ಬೇಕು ಎಂದರು.

ನಟಿ ಅದಿತಿ ಪ್ರಭುದೇವ್ ಮಾತನಾಡಿ ಅಮ್ಮ ಮಗನ ಈ ಹಾಡು ತುಂಬಾ ಇಷ್ಟ. ಬಹಳ ಅರ್ಥಗರ್ಭಿತವಾದ ಸಾಲುಗಳು ಈ ಹಾಡಿನಲ್ಲಿದೆ. ಪ್ರತಿ ತಾಯಿ ತನ್ನ ಮಗು ರಾಜನಂತೆ ಬದುಕಬೇಕೆಂದು ಆಸೆ ಪಡುವುದು ಸಹಜವೇ , ಅದರಂತೆ ಈ ಹಾಡು ಬಹಳ ಸೊಗಸಾಗಿ ಮೂಡಿ ಬಂದಿದೆ. ಚಿತ್ರದ ಎರಡು ಹಾಡಿಗೆ ನೀಡಿದ ಪ್ರೋತ್ಸಾಹ , ಬೆಂಬಲ ಹಾಗೂ ಪ್ರೀತಿ ಮುಂದುವರಿಸಿ ಇದೇ 29ರಂದು ಗೌರಿ ಗಣೇಶ ಹಬ್ಬದ ಸಂಭ್ರಮದ ಸಮಯದಲ್ಲಿ ಚಿತ್ರ ಬರುತ್ತಿದೆ ನೋಡಿ ಹರಸಿ ಎಂದರು.

ನಿರ್ಮಾಪಕ ಭುವನ್ ಸುರೇಶ್ ಮಾತನಾಡಿ ಚಿತ್ರ ಇದೆ 29ರಂದು ಸುಮಾರು 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಒಬ್ಬ ನಿರ್ದೇಶಕನ ಬದುಕಿನ ಸುತ್ತ ನಡೆಯುವ ಕಥೆಯಾಗಿದೆ. ನಿರ್ದೇಶಕ ಕೀರ್ತಿ ಕೃಷ್ಣಪ್ಪ ಹೇಳಿದಂತೆ ಚಿತ್ರವನ್ನ ಅದ್ಭುತವಾಗಿ ತಂದಿದ್ದಾರೆ. ಎಲ್ಲಾ ಕಲಾವಿದರು ತುಂಬಾ ಸಹಕಾರ ನೀಡಿದ್ದಾರೆ. ತಾವೂ ಕೂಡ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು
ನಿರ್ದೇಶಕ ಕೀರ್ತಿ ಕೃಷ್ಣಪ್ಪ ಮಾತನಾಡಿ ಚಿತ್ರದ ಎರಡು ಸಾಂಗ್ ಸೂಪರ್ ಹಿಟ್ ಆಗಿವೆ. ತಾಯಿ ಮಗನ ಹಾಡು ಕೂಡ ಹಿಟ್ ಆಗುವ ನಿರೀಕ್ಷೆ ಇದೆ. ಮೂರು ವರ್ಷದ ಪ್ರಯತ್ನವಾಗಿದ್ದು, ಒಂದಿಷ್ಟು ಜನರ ಲೈಫ್ ಚಿತ್ರದ ಮೇಲಿದೆ. ಮೊದಲ ಚಿತ್ರದಲ್ಲಿ ನಿರ್ದೇಶಕರ ಬದುಕಿನ ಸುತ್ತ ಮಾಡಿರುವುದು ನನಗೆ ಹೆಮ್ಮೆಯಾಗಿದೆ. ಇದರಲ್ಲಿ ಲವ್ , ಫ್ರೆಂಡ್ಶಿಪ್ , ಸೆಂಟಿಮೆಂಟ್ ಎಲ್ಲವೂ ಇದೆ. ಅದರಲ್ಲೂ ಎಮೋಷನ್ ಜನರಿಗೆ ತಲುಪುತ್ತದೆ ಎಂದು ಹೇಳಬಹುದು ಎಂದರು.

ನಿರ್ಮಾಪಕರು ಸಹಕಾರ ನೀಡಿದ್ದಾರೆ. ಅದೇ ರೀತಿ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರ ತುಂಬಾ ಸಿಕ್ಕಿದೆ. ತೀರ್ಥಹಳ್ಳಿ , ಬೆಂಗಳೂರು ಸುತ್ತ ಮುತ್ತ ಶೂಟಿಂಗ್ ಮಾಡಲಾಗಿದೆ. ಇದೇ 29ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ , ನೀವೆಲ್ಲರೂ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಯಶಸ್ವಿಗೊಳಿಸಿ ಎಂದು ಕೇಳಿಕೊಂಡರು.
ಹಿರಿಯ ನಟಿ ಅರುಣಾ ಬಾಲರಾಜ್ ಮಾತನಾಡಿ ಚಿತ್ರದ ಲಿರಿಕಲ್ ಹಾಡು ನನಗೆ ಬಹಳ ಇಷ್ಟ , ನನಗೆ ಗೊತ್ತಿರಲಿಲ್ಲ , ಈಗಲೇ ನಾನು ನಿಮ್ಮ ಜೊತೆ ಹಾಡನ್ನು ನೋಡಿದ್ದು , ಹಾರ್ಟ್ ಗೆ ಹತ್ತಿರವಾಗುತ್ತಿದೆ. ಇದನ್ನು ಸಿನಿಮಾದಲ್ಲಿ ನೋಡಿದಾಗ ಇನ್ನೂ ಆಪ್ತವಾಗಿದೆ. ಮಗನನ್ನು ಆಶೀರ್ವಾದ ಮಾಡಿ ಕಳಿಸಿದ ಮೇಲೆ ಹೇಗೆ ಹೆಸರು ಮಾಡುತ್ತಾನೆ ಎಂಬುದರ ಮೇಲೆ ಕಥೆ ಇದೆ. ಅದರಲ್ಲೂ ಈ ಚಿತ್ರದ ಕ್ಯಾಮರಾ ವರ್ಕ್ ತುಂಬಾ ಚೆನ್ನಾಗಿ ಬಂದಿದೆ . ಡಬ್ಬಿಂಗ್ ಮಾಡುವ ಸಮಯದಲ್ಲಿ ಕೆಲವು ದೃಶ್ಯಗಳನ್ನು ನೋಡಿದ್ದೇನೆ. ಹಾಗೆಯೇ ವಿನಯ್ ಜೊತೆ ಮೂರು ಸಿನಿಮಾ ಮಾಡಿದ್ದು, ಮೂರು ವಿಭಿನ್ನ ಪಾತ್ರ ಸಿಕ್ಕಿದ್ದವು. ತಾಯಿ ತಾನು ಕಷ್ಟ ಪಟ್ಟರು ಮಕ್ಕಳಿಗೆ ಸಾಧನೆ ಮಾಡಲು ಕಳಿಸಲು ಏನೆಲ್ಲಾ ಶ್ರಮ ಪಡುತ್ತಾಳೆ ಎಂಬುದನ್ನು ಕೂಡ ನೋಡಬಹುದು. ಈ ಸಿನಿಮಾ ಎಲ್ಲರಿಗೂ ಇಷ್ಟವಾಗುವಂತಹ ಅಂಶವನ್ನು ಒಳಗೊಂಡಿದೆ ಎಂದರು.

ಹಾಸ್ಯ ಕಲಾವಿದ ಜಗ್ಗಪ್ಪ , ನೃತ್ಯ ನಿರ್ದೇಶಕ ರಘು ಮಾಸ್ಟರ್ , ಛಾಯಾಗ್ರಹಕ ಅಭಿಷೇಕ್ .ಜಿ. ಕಾಸರಗೋಡು ಸೇರಿದಂತೆ ಬಾಲ ಪ್ರತಿಭೆಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಅತಿಥಿ ಪಾತ್ರದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿನಯಿಸಿದ್ದಾರೆ. ಹಾಗೆ ನಟಿ ನಟಿ ನಿಶಾ ರವಿಕೃಷ್ಣನ್ ಸೇರಿದಂತೆ ಹಲವು ಪಾತ್ರಧಾರಿಗಳು ಕಾಣಿಸಿಕೊಂಡಿದ್ದು , ಭುವನ್ ಸುರೇಶ್ ನಿರ್ಮಿಸಿದ್ದು , ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಕೀರ್ತಿ ಕೃಷ್ಣಪ್ಪ. ರಾಘವೇಂದ್ರ. ವಿ ಸಂಗೀತ ನಿರ್ದೇಶನ , ಎ. ಆರ್. ಕೃಷ್ಣ , ಸುರೇಶ್ ಆರ್ಮುಗಂ ಸಂಕಲನ , ರವಿವರ್ಮ ಸಾಹಸ , ಸುಮಂತ್ ಸಿನಿಮಾ ಪ್ರಚಾರ ನಿಭಾಯಿಸಿದ್ದಾರೆ.


