“ಬೇರ”ವಿನು ಬಳಂಜ ನಿರ್ದೇಶನದ ಮೊದಲ ಚಿತ್ರ : ಕುತೂಹಲ ಮೂಡಿಸಿದ ಟೀಸರ್
ಕಿರುತೆರೆಯ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ “ಬೇರ” ಚಿತ್ರ ನಿರ್ದೇಶಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ದಿವಾಕರ ದಾಸ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ಚಿತ್ರತಂಡದ ಸದಸ್ಯರು “ಬೇರ” ಚಿತ್ರದ ಕುರಿತು ಮಾತನಾಡಿದರು.
ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂ ಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್. ತುಳುವಿನಲ್ಲಿ “ಬೇರ” ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ.
ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ “ಯಾವ ತಾಯಂದ್ರ ಮಕ್ಕಳೂ ಇನ್ನೊಬ್ರಿಂದಾಗಿ ಸಾಯ್ಬಾರ್ದು” ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ಸದ್ಯ ಟೀಸರ್ ಬಿಡುಗಡೆ ಮಾಡಿದ್ದೇವೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದು ನಿರ್ದೇಶಕ ವಿನು ಬಳಂಜ ತಿಳಿಸಿದರು.
ಹಿರಿಯ ಕಲಾವಿದೆ ಚಿತ್ಕಳಾ ಬಿರಾದಾರ್ ಮಾತನಾಡಿ, ಯಥಾ ಪ್ರಕಾರ ಈ ಚಿತ್ರದಲ್ಲಿಯೂ ಅಮ್ಮನ ಪಾತ್ರ. ಆದರೆ ತುಂಬಾ ಇಂಟೆನ್ಸ್ ಇರುವ ಪಾತ್ರ. ಯಾರಾದರೂ ಯಾವ ಚಿತ್ರ ಮನಸ್ಸಿನಲ್ಲಿ ಉಳಿಯಲಿದೆ ಎಂದು ಕೇಳಿದರೆ ಥಟ್ಟನೆ ನೆನಪಾಗುವುದು ಬೇರ ಚಿತ್ರದ ಪಾತ್ರ. ಬೇರೆ ಎಂದರೆ ವ್ಯಾಪಾರ ಎನ್ನುವ ಅರ್ಥ ಈಗಷ್ಟೇ ಗೊತ್ತಾಯಿತು. ವಿನು ಬಳಂಜ ಸಾರ್ ಜೊತೆ ಕೆಲಸ ಮಾಡುವ ಆಸೆ ಇತ್ತು ಆದರೆ ಕಾಲ ಕೂಡಿ ಬಂದಿರಲಿಲ್ಲ, ಈಗ ನೆರವೇರಿದೆ ಎಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು
ಕನ್ನಡದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾಗಿರುವ ಯಶ್ ಶೆಟ್ಟಿ, ಚಿತ್ರದಲ್ಲಿ ಸೂಕ್ಷ್ಮ ವಿಷಯಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ನಮ್ಮನ್ನು ಕುರಿಗಳ ರೀತಿ ನಡೆಸಿಕೊಳ್ಳುತ್ತಾರೆ. ಸತ್ಯ ಅರಿವಾಗುವ ವೇಳೆಗೆ ಕಾಲ ಮಿಂಚಿ ಹೋಗಿರುತ್ತದೆ. ಯಾವ ತಾಯಿಗೂ ತಮ್ಮ ಕಣ್ಣ ಮುಂದೆ ತಮ್ಮ ಮಗನ ಜೀವ ಹೋಗಬಾರದು. ಸೂಕ್ಷ್ಮ ಘಟನೆಗಳನ್ನು ಚಿತ್ರದಲ್ಲಿ ಕಟ್ಟಿಕೊಡುವ ಕೆಲಸ ಮಾಡಲಾಗಿದೆ. ಒಳ್ಳೆಯ ಚಿತ್ರವಾಗಲಿದ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಶಿವಣ್ಣನ ಶುಭ ಹಾರೈಕೆ
ವಿನು ಬಳಂಜ ಮತ್ತವರ ತಂಡಕ್ಕೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿರುವುದು ಆನೆ ಬಲ ಬಂದಂತಾಗಿದೆ.
ಕೇವಲ ಮೂರು ಜನ ಕೆಲಸಗಾರರಿಂದ ಶುರುವಾದ ಎಸ್ ಎಲ್ ವಿ ಸಂಸ್ಥೆಯಲ್ಲಿ ಇಂದು ನೂರೈವತ್ತು ಜನ ಕೆಲಸಗಾರರಿದ್ದಾರೆ. ಈಗ ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ “ಬೇರ” ಎಂಬ ಮೊದಲ ಚಿತ್ರ ನಿರ್ಮಾಣ ಮಾಡಿದ್ದೇವೆ. ಈ ಚಿತ್ರಕ್ಕೆ ನಿಮ್ಮ ಹಾರೈಕೆ ಇರಲಿ ಎಂದರು ನಿರ್ಮಾಪಕ ದಿವಾಕರ ದಾಸ.
ಹರ್ಷಿಕಾ ಕನ್ನಡ ಭಾಷಾ ಪ್ರೇಮ ಹೊಗಳಿದ ದತ್ತಣ್ಣ
ನಟಿ ಹರ್ಷಿಕಾ ಪೂಣಚ್ಚ ಅವರ ಕನ್ನಡ ಭಾಷಾ ಪ್ರೇಮವನ್ನು ಹಿರಿಯ ನಟ ದತ್ತಣ್ಣ ಹಾಡಿ ಹೊಗಳಿದರು. ಪಕ್ಕದಲ್ಲಿಯೇ ಕುಳಿತಿದ್ದ ನಟಿ ಹರ್ಷಿಕಾ ಅವರ ಆನಂದಕ್ಕೆ ಮತ್ತಷ್ಟು ಹೆಚ್ಚುವಂತಾಯಿತು. ಇದಕ್ಕೆ ಹಿರಿಯ ಕಲಾವಿದೆ ಚಿತ್ಕಳಾ ಬಿರಾದಾರ್, ನಿರ್ದೇಶಕ ವಿನು ಬಳಂಜ ಸೇರಿ ಇಡೀ ತಂಡ ಸಾಕ್ಷಿಯಾಯಿತು
ವಿನು ಬಳಂಜ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದ ಖುಷಿಯಿದೆ. ನಮ್ಮ ಪಾತ್ರ ಕೂಡ ಚೆನ್ನಾಗಿದೆ ಎಂದರು ಚಿತ್ರದಲ್ಲಿ ನಟಿಸಿರುವ ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಛ, ಅಶ್ವಿನ್ ಹಾಸನ್, ಚಿತ್ಕಲ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಮುಂತಾದವರು. ಛಾಯಾಗ್ರಹಕ ರಾಜಶೇಖರ್ ಹಾಗೂ ಕಾರ್ಯಕಾರಿ ನಿರ್ಮಾಪಕ ರಾಮದಾಸ ಶೆಟ್ಟಿ ಕೂಡ “ಬೇರ” ಚಿತ್ರದ ಕುರಿತು ಮಾತನಾಡಿದರು.