ಜೋಡಿ ನಿರ್ದೇಶಕರ ಹೊಸ ಪ್ರಯತ್ನ “ಫ್ರೈಡೆ” ಚಿತ್ರ ಆರಂಭ : ಶೃತಿ ಪ್ರಕಾಶ್ ನಾಯಕಿ
ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಹಾಗೂ “ಮೇಡ್ ಇನ್ ಬೆಂಗಳೂರು” ಚಿತ್ರದ ನಾಯಕ ಮಧುಸೂದನ್ ಗೋವಿಂದ್ ನಾಯಕ ನಾಯಕಿಯಾಗಿ ನಟಿಸುತ್ತಿರುವ “ಫ್ರೈಡೆ” ಚಿತ್ರದ ಮುಹೂರ್ತ ಧರ್ಮಗಿರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ.
ಈ ಹಿಂದೆ “ಹೊಸ ದಿನಚರಿ” ಚಿತ್ರವನ್ನು ನಿರ್ದೇಶಿಸಿದ್ದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತ ಜಂಟಿಯಾಗಿ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.
ಕ್ರಿಯೇಟಿವ್ ನಿರ್ಮಾಪಕರಾದ ಗಂಗಾಧರ್ ಸಾಲಿಮಠ ಮಾಹಿತಿ ನೀಡಿ, ಈ ಹಿಂದೆ “ಆಯನ”, ” ಹೊಸ ದಿನಚರಿ ” ಹಾಗೂ ” ಗ್ರೇ ಗೇಮ್ಸ್” ಚಿತ್ರಗಳನ್ನು ನಿರ್ಮಾಣ ಮಾಡಿದ್ದೆವು. ಇದು ನಾಲ್ಕನೇ ಚಿತ್ರ. “ಆಯನ” ಹಾಗೂ “ಗ್ರೇ ಗೇಮ್ಸ್” ಚಿತ್ರಗಳನ್ನು ನಾನೇ ನಿರ್ದೇಶಿಸಿದ್ದೇನೆ. “ಫ್ರೈಡೆ” ಚಿತ್ರವನ್ನು “ಹೊಸ ದಿನಚರಿ” ಚಿತ್ರದ ನಿರ್ದೇಶಕರಾದ ಕೀರ್ತಿ ಹಾಗೂ ವೈಶಾಖ್ ನಿರ್ದೇಶಿಸುತ್ತಿದ್ದಾರೆ. ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ನಿರ್ಮಾಪಕರು. ಮುಂದೆ ಕೂಡ ನಮ್ಮ ಸಂಸ್ಥೆಯಿಂದ ಸದಭಿರುಚಿ ಚಿತ್ರಗಳನ್ನು ನಿರ್ಮಿಸುವ ಇರಾದೆ ಇದೆ ಎಂದರು
ನಿರ್ದೇಶಕರಲ್ಲಿ ಒಬ್ಬರಾದ ವೈಶಾಖ್ ಪುಷ್ಪಲತ ಮಾತನಾಡಿ ಚಿತ್ರರಂಗದವರಿಗೆ “ಫ್ರೈಡೆ” ಎಂದರೆ ವಿಶೇಷ. ನಮಗೂ ಹಾಗೆ. ಏಕೆಂದರೆ ನಮ್ಮ ಚಿತ್ರದ ಹೆಸರು “ಫ್ರೈಡೆ”. ಚಿತ್ರ ಬಿಡುಗಡೆಯಾಗುವುದು ” ಫ್ರೈಡೆ “. ಆ “ಫ್ರೈಡೆ”ಗೂ ನಮ್ಮ ಚಿತ್ರಕ್ಕೂ ನಂಟಿದೆ. “ಫ್ರೈಡೆ” ಬಿಡುಗಡೆಯಾದ ಹೊಸ ಚಿತ್ರವನ್ನು ನೋಡಲು ಹೋಗಿದ್ದ ದಂಪತಿ ಜೀವನದಲ್ಲಿ ನಡೆಯಬಾರದ ಘಟನೆ ನಡೆದು ಹೋಗುತ್ತದೆ. ಅದೇ ಚಿತ್ರದ ಕಥಾಹಂದರ. ಮಧುಸೂದನ್ ಗೋವಿಂದ್, ಶೃತಿ ಪ್ರಕಾಶ್ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾನು ಕಥೆ ರಚಿಸಿದ್ದು. ಚಿತ್ರಕಥೆಯನ್ನು ನಾನು ಹಾಗೂ ಕೀರ್ತಿ ಶೇಖರ್ ಬರೆದಿದ್ದೇವೆ. ಜನವರಿ ಮೊದಲವಾರದಲ್ಲಿ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದು
ಮತ್ತೊಬ್ಬ ನಿರ್ದೇಶಕ ಕೀರ್ತಿ ಶೇಖರ್ ಮಾತನಾಡಿ, “ಫ್ರೈಡೆ” ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಮೂರು ಹಾಡುಗಳಿದೆ. ಅಶ್ವಿನ್ ಹೇಮಂತ್ ಸಂಗೀತ ನಿರ್ದೇಶನ ಹಾಗೂ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದರು.
ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಮಧುಸೂದನ್ ಗೋವಿಂದ್, ಶೃತಿ ಪ್ರಕಾಶ್ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ನಿರ್ಮಾಪಕರಾದ ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ಸಹ “ಫ್ರೈಡೆ” ಚಿತ್ರದ ಕುರಿತು ಮಾತನಾಡಿದರು