“ಕಾಟೇರ” ಸಾಮಾಜಿಕ ಕಳಕಳಿಯ ಮನಮಿಡಿಯುವ ಚಿತ್ರ

ಚಿತ್ರ: ಕಾಟೇರ
ನಿರ್ದೇಶನ : ತರುಣ್ ಕಿಶೋರ್ ಸುಧೀರ್
ತಾರಾಗಣ: ದರ್ಶನ್, ಆರಾಧನಾ, ಶೃತಿ, ಕುಮಾರ್ ಗೋವಿಂದ್, ಬಿರಾದಾರ್, ಅವಿನಾಶ್, ಕಲ್ಯಾಣಿ ರಾಜು, ಜಗಪತಿ ಬಾಬು, ವಿನೋದ್ ಆಳ್ವ, ರವಿ ಚೇತನ್, ಸರ್ದಾರ್ ಸತ್ಯ, ಶ್ವೇತಾ ಪ್ರಸಾದ್, ಮಾಸ್ಟರ್ ರೋಹಿತ್ ಮತ್ತಿತರರು
ಅವಧಿ; 3 ಗಂಟೆ 3 ನಿಮಿಷ
ನಿರ್ಮಾಣ: ರಾಕ್‍ಲೈನ್ ಪ್ರೊಡಕ್ಷನ್
ರೇಟಿಂಗ್: **** 4/5

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಇದುವರೆಗಿನ ಚಿತ್ರಗಳು ಒಂದು ತೂಕವಾದರೆ “ ಕಾಟೇರ” ಮತ್ತೊಂದು ತೂಕ. ಸಮಾಜದ ಅನಿಷ್ಠ ಪದ್ದತಿ, ದೌರ್ಜನ್ಯ, ದಬ್ಬಾಳಿಕೆ ವಿರುದ್ದದ ಹೋರಾಟ ಜೊತೆಗೆ ಸಾಮಾಜಿಕ ಕಳಕಳಿ ಚಿತ್ರ ಇದು. ಈ ಕಾರಣಕ್ಕಾಗಿಯೇ ದರ್ಶನ್ ಅವರ ಇದುವರೆಗಿನ ಚಿತ್ರಗಳಿಗಿಂತ ಈ ಚಿತ್ರ ಭಿನ್ನ.
ಅಕ್ಕ-ತಮ್ಮನ ಮಮತೆ, ವಾತ್ಯಲ್ಯ, ಗೆಳೆಯನಿಗೂ ಹೆಚ್ಚಿನ ಪ್ರೀತಿಕೊಡುವ ಭಾವ, ಊರ ಜನರೆಂದರೆ ಪ್ರಾಣ ಕೊಡಲು ಹಿಂಜಯರಿದ ನಾಯಕ, ಜಾತಿ ಪದ್ದತಿಯ ಅನಿಷ್ಠದ ಪಿಡುಗು, ಉಳುವನೇ ಭೂ ಒಡೆಯ ಎನ್ನುವ ಕಾನೂನು ಬಂದರೂ ಉಳ್ಳವರ ದೌರ್ಜನ್ಯ, ದಬ್ಬಾಳಿಕೆ, ಜಾತಿ,ಸಂಪ್ರದಾಯವನ್ನು ಮೀರಿದ ಪ್ರೀತಿ, ಮರ್ಯಾದೆ ಹತ್ಯೆ ಜೊತೆಗೆ ರೈತಪರ ಕಾಳಜಿ ಕಳಕಳಿ ಹೊಂದಿರುವ ಚಿತ್ರ ಕಾಟೇರ.
ಕುಲುಮೆಯಲ್ಲಿ ಕೆಲಸ ಮಾಡುತ್ತಾ ನಿತ್ಯದ ಬದುಕು ಸಾಗಿಸುವ ಕಾಟೇರ –ದರ್ಶನ್, ಶಾನುಭೋಗರ ಮಗಳು ಪ್ರಭಾ- ಅರಾಧನಾ ರಾಮ್ ನಡುವಿನ ನಿಷ್ಕಲ್ಮಶ ಪ್ರೀತಿ, ಪ್ರೇಮದ ಸುತ್ತಾ ರೈತ ಪರ ಕಾಳಜಿಯೊಂದಿಗೆ ಸಮಾಜದ ಅನಿಷ್ಠ ಪದ್ದತಿ, ಜಾತಿ ಉಳಿಸಿಕೊಳ್ಳಲು ಏನೂ ಬೇಕಾದರೂ ಮಾಡುತ್ತೇವೆ ಎನ್ನುವ ಹಪಹಪಿಯ ಜನ.
ಊರಿನ ಜಮೀನುದಾರರಾದ (ಜಗಪತಿ ಬಾಬು) ರೈತರನ್ನು ಶೋಷಣೆ ಮಾಡುತ್ತಾ, ಬೆಳೆದ ಬೆಳೆಯನ್ನೇ ಕಪ್ಪ ಕಾಣಿಕೆಯಾಗಿ ಪಡೆಯುವುದು ಒಂದೆಡೆಯಾದರೆ ಊರಿನಲ್ಲಿ ತಾನೇ ರಾಜ ಎಂದು ಮೆರೆಯುವ ಇರಾದೆ ಹೊಂದಿದ ಮತ್ತೊಬ್ಬ (ವಿನೋದ್ ಆಳ್ವ) ಆತನಿಗೋ ತನ್ನೂರಿನಲ್ಲಿ ನಡೆಯುವ ಹೊಲೆಮಾರಿಯನ್ನು ಪಕ್ಕದ ಊರಿಗೆ ಬಿಟ್ಟುಕೊಡದವ.ಅದಕ್ಕಾಗಿ ಏನೂ ಬೇಕಾದರೂ ಮಾಡಲು ಸಿದ್ದ.
ಇಂತಹ ಇಬ್ಬರ ಮದ್ಯೆ ಕಾಟೇರನ ಹೋರಾಟ, ರೈತರ ಜಮೀನು ಉಳಿಸಲು ಪರದಾಟ,ಇದೇ ಸಮಯಕ್ಕೆ ಉಳುವವನೆ ಭೂ ಒಡೆಯ ಎನ್ನುವ ಕಾನೂನು ಜಾರಿಗೆ ಬಂದ ನಂತರ ಜಮೀನ್ದಾರರು ಗೇಣಿದಾರರಿಗೆ ಭೂಮಿ ಬಿಟ್ಟುಕೊಡಲು ಹಿಂದೇಟು ಹಾಕ್ತಾರೆ, ಅದನ್ನು ತಪ್ಪಿಸಲು ನಾನಾ ತಂತ್ರ ಮಾಡ್ತಾರೆ. ದೇವರಂತೆ ಕಾಣುವ ಊರ ಮಂದಿಗೆ ಕಾಟೇರ ಅವರ ಬದುಕು ಸ್ವಾಭಿಮಾನ ಉಳಿಸುತ್ತಾನಾ, ಪ್ರಭಾಳ ಕಥೆ ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು.
ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಆಯ್ಕೆ ಮಾಡಿಕೊಂಡ ಕಥೆ, ಕಲಾವಿದರಿಂದ ಕೆಲಸ ತೆಗೆಸಿದ ರೀತಿ, ಇಡೀ ಊರು ಕಟ್ಟಿಕೊಟ್ಟು ಗೆಲವಿನ ನಗೆ ಬೀರಿದ್ದಾರೆ.
ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಬಹು ವರ್ಷದ ನಂತರ ಗೆಲುವುದಿನ ಸಹಿ ಉಣಬಡಿಸಿದ ಚಿತ್ರ ಇದು ರಾಕ್ ಲೈನ್ ವೆಂಕಟೇಶ್ ಅವರಂತಹ ಹಿರಿಯ ಮತ್ತು ಅನುಭವಿ ನಟಿರಿಗೆ ಈ ರೀತಿಯ ಗೆಲವು ಅಗತ್ಯ ವಿತ್ತು ಕೂಡ, ಅದು ಕಾಟೇರ ಮೂಲಕ ಈಡೇರಿದೆ.

ಯಾರೆಲ್ಲಾ ಹೇಗೆ;
ಚಾಲೆಂಜಂಗ್ ಸ್ಟಾರ್ ದರ್ಶನ್ ಎರಡು ವಿಭಿನ್ನ ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ. ಎರಡೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿ ಅವರ ಅಭಿನಯ ಈ ಹಿಂದಿನ ಚಿತ್ರಗಳಿಗಿಂತ ಅತ್ಯುತ್ತಮವಾಗಿ ಮೂಡಿ ಬಂದಿದೆ. ರಾಜ್ಯ, ರಾಷ್ಟ್ರ ಪ್ರಶಸ್ತಿಯ ಬರ ಎದುರಿಸುತ್ತಿದ್ದ ದರ್ಶನ್ ಅವರಿಗೆ ಪ್ರಶಸ್ತಿ ತಂದುಕೊಡುವುದು ಗ್ಯಾರಂಟಿ ಎನ್ನುವ ಮಟ್ಟಿಗೆ ನಟಿಸಿದ್ದಾರೆ. ಅಷ್ಟೇ ಅಲ್ಲ ಅದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲಿಯೂ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ದರ್ಶನ್ ಅವರಾ ಎನ್ನುವ ಮಟ್ಟಿಗೆ ಮೋಡಿ ಮಾಡಿದ್ದಾರೆ.
ಚೊಚ್ಚಲ ಅವಕಾಶದಲ್ಲಿ ನಟಿ ಅರಾಧನಾ ಗಮನ ಸೆಳೆದಿದ್ಧಾರೆ. ನಟನೆ ನೃತ್ಯದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆಯ ನಟಿ ಸಿಕ್ಕಂತಾಗಿದೆ. ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತೆ ಎನ್ನುವುದಕ್ಕೆ ಹಿರಿಯ ನಟಿ ಮಾಲಾಶ್ರೀಗೆ ತಕ್ಕಂತೆ ಮಗಳು ಆರಾಧನ ನಟಿಸಿದ್ದಾರೆ.
ಹಿರಿಯ ಕಲಾವಿದರಾದ ಶೃತಿ,ಕುಮಾರ್ ಗೋವಿಂದ್, ಅವಿನಾಶ್, ಬಿರಾದಾರ್, ಕಲ್ಯಾಣಿ ರಾಜು, ಜಗಪತಿ ಬಾಬು, ವಿನೋದ್ ಆಳ್ವ, ರವಿ ಚೇತನ್, ಸರ್ದಾರ್ ಸತ್ಯ, ಶ್ವೇತಾ ಪ್ರಸಾದ್, ಮಾಸ್ಟರ್ ರೋಹಿತ್ ಪಾತ್ರಕ್ಕೆ ಜೀವ ತುಂಬಿ ಕಾಟೇರನ ಜೊತೆ ಸಾಗಿದ್ದಾರೆ.
ಇನ್ನು ಸಂಭಾಷಣೆ ವಿಷಯಕ್ಕೆ ಬಂದರೆ ಮಾಸ್ತಿ ಮಾತಿನ ಮೂಲಕ ಮನಗೆದ್ದಿದ್ದಾರೆ. ಮಾತಿನಲ್ಲಿಯೇ ಹೃದಯ ತಟ್ಟಿದ್ದಾರೆ. ಸಾಮಾಜಿಕ ಅನಿಷ್ಠ ಪದ್ದತಿ, ರೈತರ ಬಗಿಗಿನ ಅವರ ಪ್ರತಿ ಸಂಭಾಷಣೆ ಚಿತ್ರದ ತೂಕ ಮತ್ತಷ್ಟು ಹೆಚ್ಚಿಸಿದೆ. ಸುಧಾಕರ್ ಅವರ ಕ್ಯಾಮರಾ ಚಿತ್ರಕ್ಕೆ ಪೂರಕವಾಗಿದೆ.
ಕಡೆಯದಾಗಿ : ಚಿತ್ರದ ಕಲಾವಿದರು, ಕಥಾವಸ್ತು ಚೆನ್ನಾಗಿದ್ದರೆ ಮೂರುಗಂಟೆ 3 ನಿಮಿಷ ಅಲ್ಲ, ಇನ್ನಷ್ಟು ಅವಧಿ ಇದ್ದರೂ ಚಿತ್ರ ನೋಡ್ತಾರೆ ಎನ್ನುವುದಕ್ಕೆ ಕಾಟೇರ ಉದಾಹರಣೆ.