ನಿರ್ದೇಶಕ ರಾಘು ಶಿವಮೊಗ್ಗ ಹೊಸ “ಟಾಸ್ಕ್” ಆರಂಭ
ಚೂರಿಕಟ್ಟೆ, ಪೆಂಟಗನ್ ಚಿತ್ರ ನಿರ್ದೇಶನ ಮಾಡಿ ಆ ನಂತರ ನಟನೆ ಕಡೆಗೆ ಗಮನ ಹರಿಸಿದ್ದ ನಿರ್ದೇಶಕ ರಾಘು ಶಿವಮೊಗ್ಗ ಹೊಸ “ಟಾಸ್ಕ್” ಕೈಗೆತ್ತಿಕೊಂಡಿದ್ದಾರೆ. ಅದುವೇ ಹೊಸ ಚಿತ್ರ “ ದಿ ಟಾಸ್ಕ್”.
ಬೆಂಗಳೂರಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇಗುಲದಲ್ಲಿಂದು ರಾಘು ನಿರ್ದೇಶನದ ಮೂರನೇ ಸಿನಿಮಾ ದಿ ಟಾಸ್ಕ್ ಮುಹೂರ್ತ ನೆರವೇರಿದೆ. ಡಿವೈಎಸ್ ಪಿ ರಾಜೇಶ್ ದಿ ಟಾಸ್ಕ್ ಗೆ ಕ್ಲ್ಯಾಪ್ ಮಾಡಿದ್ದು ಕೈವಾ ಸಿನಿಮಾದ ಛಾಯಾಗ್ರಾಹಕಿ ಶ್ವೇತ್ ಪ್ರಿಯಾ ಕ್ಯಾಮೆರಾಗೆ ಚಾಲನೆ ನೀಡಿ ಶುಭಹಾರೈಸಿದ್ದಾರೆ
ದಿ ಟಾಸ್ಕ್ ಸಿನಿಮಾ ನೈಜ ಘಟನೆಯ ಸ್ಫೂರ್ತಿ ಆಧಾರಿತ ಸಿನಿಮಾ. ಈ ಹಿಂದೆ ರಾಘು ಶಿವಮೊಗ್ಗ ನಿರ್ದೇಶನದ ಪೆಂಟಗನ್ ನಲ್ಲಿ ಹೀರೋ ಆಗಿ ಅಭಿನಯಿಸಿದ್ದ ಸಾಗರ್ ಹಾಗೂ ಭೀಮ ಚಿತ್ರದಲ್ಲಿ ಖಳನಾಯಕನಾಗಿ ಪರಿಚಯರಾಗಿದ್ದ ಜಯಸೂರ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೇ, ಶ್ರೀಲಕ್ಷ್ಮೀ, ಅರವಿಂದ್ ಕುಪ್ಳಿಕರ್, ಬಿಂಬಶ್ರೀ ನೀನಾಸಂ, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್ ಸೇರಿದಂತೆ ನಿರ್ದೇಶಕ ರಾಘು ಶಿವಮೊಗ್ಗ ಕೂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ಇ ದಿ ಟಾಸ್ಕ್ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದು, ಮಡಿಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಿದೆ.