ಅಭಿಮಾನಿಗಳಿಂದ “ಡಾ ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ” ನಿರ್ಮಾಣ
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳು ಮೆಚ್ಚಿನ ನಟನಿಗಾಗಿ “ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ” ಕಟ್ಟಲು ಮುಂದಾಗಿದ್ದಾರೆ. ಕಲಾವಿದರೊಬ್ಬರ ಹೆಸರಿನಲ್ಲಿ ಅಭಿಮಾನಿಗಳು ನಿರ್ಮಿಸುತ್ತಿರುವ ದೇಶದ ಮೊಟ್ಟ ಮೊದಲ ಅಭಿಮಾನ ಕ್ಷೇತ್ರವಿದು.

ಅಭಿಮಾನ ಕ್ಷೇತ್ರಕ್ಕೆ ಕಿಚ್ಚ ಸುದೀಪ್, ಮಾಜಿ ಶಾಸಕ ಹಾಗು ಉದ್ಯಮಿ ಅಶೋಕ್ ಕೇಣಿ ಕೈ ಜೋಡಿಸಿದ್ದಾರೆ. ಇವರ ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ, ನೈಸ್ ಸಂಸ್ಥೆಯ ಎಂ. ರುದ್ರೇಶ್ ಕೂಡ ಜೊತೆಯಾಗಿದ್ದಾರೆ. ಇವರಲ್ಲದೆ ರಾಜ್ಯದಾದ್ಯಂತ ಸಾವಿರಾರು ಅಭಿಮಾನಿಗಳು ಒಂದು ಅಭಿಮಾನ ಕ್ಷೇತ್ರದ ಭಾಗವಾಗುತ್ತಿದ್ದಾರೆ.
“ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ” ನೀಲಿ ನಕ್ಷೆಯನ್ನುಬಿಡುಗಡೆ ಮಾಡಲಾಯಿತು. ಈ ಅಭಿಮಾನ ಕ್ಷೇತ್ರದ ವಿಶೇಷೇ ಅಡಿಬರಹ ‘ಜ್ಞಾನ, ಧ್ಯಾನ ಮತ್ತು ದರ್ಶನ’. ಇಲ್ಲಿ ಡಾ. ವಿಷ್ಣುವರ್ಧನ್ ಅವರ 25 ಅಡಿಯ ಪ್ರತಿಮೆಯ ಜೊತೆಗೆ ಧ್ಯಾನ ಮಂದಿರವಿದೆ. ಜೊತೆಗೆ ಒಂದು ದೊಡ್ಡ ಪುಸ್ತಕ ಭಂಡಾರ ಇರಲಿದೆ.
ಈ ಧ್ಯಾನ ಮಂದಿರದ ವಿಶೇಷತೆ ಏನೆಂದರೆ ಮಧ್ಯಾಹ್ನ ಎರಡು ಗಂಟೆಗೆ ಸಮಯಕ್ಕೆ ಸೂರ್ಯನ ಕಿರಣಗಳು ಡಾ. ವಿಷ್ಣುವರ್ಧನ್ಅಮೃತ ಶಿಲೆಯ ಮೇಲೆ ಮೂಡುವಂತೆ ವಿನ್ಯಾಸ ಮಾಡಲಾಗಿದೆ. ಜೊತೆಗೆ ಅವರ ಫೋಟೋ ಗ್ಯಾಲರಿ ಕೂಡ ವಿಶೇಷವಾಗಿ ವಿನ್ಯಾಸಗೊಂಡಿದೆ. ಜೊತೆಗೆ ಪ್ರತಿದಿನ ಸಂಜೆ ಆರು ಗಂಟೆ ಮೂವತ್ತು ನಿಮಿಷಕ್ಕೆ ಲೇಸರ್ ಶೋ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ
ಇದರ ನೀಲಿ ನಕ್ಷೆಯನ್ನು ಬಿಡುಗಡೆ ಮಾಡಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ್, ಮುಂದಿನ ಒಂದು ವರ್ಷದಲ್ಲಿ ಮುಗಿಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದ್ದು, ಸದ್ಯಕ್ಕೆ ಜಾಗದ ಕುರಿತಾಗಿ ಯಾವುದೇ ಮಾಹಿತಿ ನೀಡಲಾಗುವುದಿಲ್ಲ ಏಕೆಂದರೆ ಆ ಜಾಗದ ಮಾಹಿತಿ ಸಿಕ್ಕಿದ ತಕ್ಷಣ ವಿಷ್ಣುವರ್ಧನ್ ಅವರ ವಿಷಯದಲ್ಲಿ ವಿವಾದಗಳು ಇದ್ದೇ ಇರುತ್ತವೆ ಎಂಬ ಕಾರಣಕ್ಕೆ ಮುಂಜಾಗ್ರತೆ ಕ್ರಮವಾಗಿ ಜಾಗವನ್ನು ಈಗ ಬಹಿರಂಗಪಡಿಸಲಾಗುವುದಿಲ್ಲ ಇದರ ಖರ್ಚು ವೆಚ್ಚಗಳು ಮತ್ತು ಹಣಕಾಸು ನಿರ್ವಹಣೆ ಮುಂತಾದ ವಿಷಯಗಳು ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಜರುಗಲಿವೆ ಎಂದು ಮಾಹಿತಿ ನೀಡಿದರು


