‘ಎದ್ದೇಳು ಮಂಜುನಾಥ್-2’ ಬಿಡುಗಡೆ ಸಜ್ಜು: ಕಿತ್ತೋದ ಪ್ರೇಮ ಹಾಡು ಬಿಡುಗಡೆ

ಚಿತ್ರರಂಗದಲ್ಲಿ ಪ್ರತಿಭೆಯ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಗುರುಪ್ರಸಾದ್ ಕೊನೆ ಕನಸು “ಎದ್ದೇಳು ಮಂಜುನಾಥ 2” ಬಿಡುಗಡೆಗೆ ಸಿದ್ಧವಾಗಿದೆ. 2009ರಲ್ಲಿ ತೆರೆಕಂಡ ‘ಎದ್ದೇಳು ಮಂಜುನಾಥ’ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ನಾಯಕನಾಗಿ ಅಭಿನಯಿಸಿ ಮೋಡಿ ಮಾಡಿದ್ದರು. ಈಗ ಎದ್ದೇಳು ಮಂಜುನಾಥ್-2ಗೆ ಗುರುಪ್ರಸಾದ್ ಅವರೇ ಕಥೆ ಬರೆದು ನಿರ್ದೇಶನದ ಜೊತೆ ನಾಯಕನಾಗಿಯೂ ನಟಿಸಿದ್ದಾರೆ.

ಚಿತ್ರದ ಕಿತ್ತೋದ ಪ್ರೇಮ ಹಾಡು ಬಿಡುಗಡೆ ಆಗಿದೆ. ನಿರ್ದೇಶಕರಾದ ಸಿಂಪಲ್ ಸುನಿ, ನಿರ್ಮಾಪಕ ಉದಯ್ ಕೆ ಮೆಹ್ತಾ ಎದ್ದೇಳು ಮಂಜುನಾಥ್ -2 ಗೆ ಶುಭ ಹಾರೈಸಿದರು.
ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ ಮಾತನಾಡಿ, ಗುರುಪ್ರಸಾದ್ ಇದ್ದಿದ್ದರೆ ಈ ಆಡಿಟೋರಿಯಂನಲ್ಲಿ ನಗು, ಅವರ ಓಡಾಟ, ಅಬ್ಬರ ಎಲ್ಲಾ ಇರುತಿತ್ತೇನೋ ನಾವು ಅದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರನ್ನು ಅಭಿಮಾನಿಯಾಗಿ ನೋಡಿದ್ದೆ. ಅವರ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿಲ್ಲ.ಹಲವು ಬಾರಿ ಹೇಳಿದ್ದೇನೆ. ನಮ್ಮ ತಂದೆ ಮಠ, ಎದ್ದೇಳು ಮಂಜುನಾಥ್ ಸಿನಿಮಾವನ್ನು ಟಿವಿಯಲ್ಲಿ ಬಂದಾಗೆಲ್ಲಾ ನಗು, ನಗುತ್ತಾ ಎಂಜಾಯ್ ಮಾಡುತ್ತಿದ್ದರು. ನಾನು ಅಪ್ಪನ ಜೊತೆ ಆ ಚಿತ್ರ ನೋಡಿ ಎಂಜಾಯ್ ಮಾಡಿದ್ದೇನೆ. ಪ್ರತಿಯೊಬ್ಬ ಕಲಾವಿದರಿಗೂ ಒಬ್ಬ ಒಳ್ಳೆ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇರುತ್ತದೆ. ಆ ಆಸೆ ನನಗೂ ಇತ್ತು. ಆ ಆಸೆ ಗುರುಪ್ರಸಾದ್ ಅವರ ಕೊನೆಯ ಚಿತ್ರದಲ್ಲಿ ಈಡೇರಿದೆ ಎಂದರು.

ನಾಯಕಿ ರಚಿತಾ ಮಹಾಲಕ್ಷ್ಮಿ ಮಾತನಾಡಿ, ಇಲ್ಲಿಗೆ ಬಂದಾಗ ಸ್ವಲ್ಪ ಫೀಲಿಂಗ್ ಆಯ್ತು. ರಂಗನಾಯಕ ಸಿನಿಮಾ ಸಮಯದಲ್ಲಿ ಗುರುಪ್ರಸಾದ್ ಸರ್ ಬನ್ನಿ ಕುತ್ಕೊಳ್ಳಿ ಅಂತೆಲ್ಲಾ ಆತಿಥ್ಯ ಮಾಡಿದ್ದು ನೆನಪಾಯ್ತು. ಆ ವ್ಯಕ್ತಿಯನ್ನು ಈ ರೀತಿ ನೋಡಿದ್ದು ಬೇಸರವಾಗುತ್ತಿದೆ. ನಾನು ರಂಗನಾಯಕ ಸಿನಿಮಾಗೂ ಮೊದಲು ಸೈನ್ ಮಾಡಿದ್ದು ಎದ್ದೇಳು ಮಂಜುನಾಥ-2 ಸಿನಿಮಾಗೆ. 2020ನಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಿದ್ದು, ಈ ದಾರಿ ಬಹಳ ಸುಲಭವಾಗಿ ಇರಲಿಲ್ಲ. ಗುರುಪ್ರಸಾದ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು
ನಿರ್ಮಾಪಕ ಮೈಸೂರು ರಮೇಶ್ ಮಾತನಾಡಿ, ಎದ್ದೇಳು ಮಂಜುನಾಥ್-2 ಸಿನಿಮಾದಿಂದ ಬರುವ ಲಾಭದ 50ರಷ್ಟು ಭಾಗವನ್ನು ಗುರುಪ್ರಸಾದ್ ಮಗಳು ನಗು ಶರ್ಮಾ ಭವಿಷ್ಯಕ್ಕೆ ಮೀಸಲಿಡಲಾಗುವುದು ಎಂದರು.

ಕಿತ್ತೋದ ಪ್ರೇಮ ಎಂಬ ಹಾಡಿಗೆ ಗುರುಪ್ರಸಾದ್ ಸಾಹಿತ್ಯ ಬರೆದಿದ್ದು , ನವೀನ್ ಸಜ್ಜು ಧ್ವನಿಯಾಗಿದ್ದಾರೆ. ಅನೂಪ್ ಸೀಳಿನ್ ಹಾಡಿಗೆ ಟ್ಯೂನ್ ಹಾಕಿದ್ದಾರೆ. ಚಿತ್ರದಲ್ಲಿ ಗುರುಪ್ರಸಾದ್ ಅವರಿಗೆ ಜೋಡಿಯಾಗಿ ರಚಿತಾ ಮಹಾಲಕ್ಷ್ಮಿ ನಟಿಸಿದ್ದು, ಉಳಿದಂತೆ ಶರತ್ ಲೋಹಿತಾಶ್ವ, ಚೈತ್ರಾ ಆಚಾರ್, ವಿಘ್ನೇಶ್ ಕಟ್ಟಿ, ರವಿ ದೀಕ್ಷಿತ್ ತಾರಾಬಳಗದಲ್ಲಿದ್ದಾರೆ.
ಎದ್ದೇಳು ಮಂಜುನಾಥ್ 2 ಸಿನಿಮಾಗೆ ಮೈಸೂರು ರಮೇಶ್ ಬಂಡವಾಳ ಹೂಡಿದ್ದು, ರವಿ ದೀಕ್ಷಿತ್ ಸಹ ನಿರ್ಮಾಪಕರಾಗಿ ಸಾತ್ ಕೊಟ್ಟಿದ್ದಾರೆ. ಚಿತ್ರಕ್ಕೆ ಅಶೋಕ ಸಾಮ್ರಾಟ್ ಕ್ಯಾಮೆರಾ ಲಿಂಗರಾಜು ಹಾಗೂ ಉದಯ್ ಸಂಕಲನ ಜವಾಬ್ದಾರಿ ನಿಭಾಯಿಸಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ.