ಆಮೇಜಾನ್ ಪ್ರೈಮ್ ಪಾಲಾದ “ಜಲಪಾತ” ಚಿತ್ರ
ಕನ್ನಡ ಸಿನಿಮಾಗಳಿಗೆ ಓಟಿಟಿ ವೇದಿಕೆ ತುಂಬಾ ಕಷ್ಟ ಸಾಧ್ಯ ಎನ್ನುವ ಪ್ರಸ್ತುತ ಸಂದರ್ಭದಲ್ಲಿ ಇಲ್ಲೊಂದು ಸಿನಿಮಾ ಆಮೇಜಾನ್ ಪ್ರೈಮ್ ಲ್ಲಿ ಬಿಡುಗಡೆಗೊಂಡು ಸಿನಿ ಪ್ರಿಯರ ಮನರಂಜಿಸುತ್ತಿದೆ.
ಇಂಡಸ್ ಹಬ್ರ್ಸ್‍ನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸಗೈದು, ಶೃಂಗೇರಿಯ ರಂಗಕರ್ಮಿ , ಬಹುಮುಖ ಪ್ರತಿಭೆ ರಮೇಶ್ ಬೇಗಾರ್ ರಚಿಸಿ – ನಿರ್ದೇಶಿಸಿದ ಜಲಪಾತ 2023 ರಲ್ಲಿ ಬಿಡುಗಡೆ ಗೊಂಡು ಸದ್ದಿಲ್ಲದೇ ಹಲವು ವಿಕ್ರಮವನ್ನು ದಾಖಲಿಸಿದ ಪರಿಸರ ಕಾಳಜಿಯ ವಿಶಿಷ್ಟ ಸಿನಿಮಾ.
ಪ್ರಮೋದ್ ಶೆಟ್ಟಿ ಕೆರಿಯರ್ ಬೆಸ್ಟ್ ಪಾತ್ರವೆಂದು ಮಾಧ್ಯಮ ವಿಮರ್ಶೆಯಲ್ಲಿ ಮೆಚ್ಚುಗೆ ಪಡೆದ ಜಲಪಾತ ದಲ್ಲಿ ಸಂಪೂರ್ಣ ಶೃಂಗೇರಿ, ತೀರ್ಥಹಳ್ಳಿ ಭಾಗದ ಹವ್ಯಾಸಿ ರಂಗಭೂಮಿ ಕಲಾವಿದರೇ ಬಣ್ಣ ಹಚ್ಚಿದ್ದರು. ಪದವಿಪೂರ್ವ ಖ್ಯಾತಿಯ ರಜನೀಶ್ ಮತ್ತು ನಾಗಶ್ರೀ ಬೇಗಾರ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಪ್ರಮುಖ ಪಾತ್ರಗಳಲ್ಲಿ ರವಿಕುಮಾರ್ ಬಿ. ಎಲ್., ರೇಖಾ ಪ್ರೇಮ್ ಕುಮಾರ್, ವಿಶ್ವನಾಥ್, ನಯನ, ಸ್ವಾತಿ, ವೈಶಾಲಿ, ಸುನೀತಾ, ಸುರೇಶ್ ಎಂ ಆರ್, ಚಿದಾನಂದ ಹೆಗ್ಗಾರ್, ಕಾರ್ತಿಕ್ ಮೊದಲಾದವರಿದ್ದರು.
ಮಲೆನಾಡಿನ ತಂತ್ರಜ್ಞರೆ ಸೇರಿ ಮಾಡಿದ ಸಿನಿಮಾ ಕೂಡ ಇದಾಗಿತ್ತು. ಶಶಿರ – ಛಾಯಾಗ್ರಹಣ, ಅವಿನಾಶ್ -ಸಂಕಲನ, ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶನ, ಅಭಿಷೇಕ್ ಹೆಬ್ಬಾರ್, ಕಲಾ ನಿರ್ದೇಶನ ಮತ್ತು ವಿನು ಮನಸು ಅವರ ಹಿನ್ನಲೆ ಸಂಗೀತ ಹೊಂದಿರುವ ಜಲಪಾತ ಸಂಪೂರ್ಣ ಮಲೆನಾಡ ಭಾಷೆ, ಸಂಸ್ಕೃತಿ ಮತ್ತು ಪ್ರಕೃತಿ ಯನ್ನು ಆಧರಿಸಿ ಸಿದ್ಧವಾದ ಕಂಟೆಂಟ್ ಸಿನಿಮಾ ಆಗಿದೆ.
ಮಲೆನಾಡ ಜ್ವಲಂತ ಪರಿಸರ ಸಂಬಂಧಿ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವಿನೂತನ ಶೈಲಿಯ ಜಲಪಾತ ಬೆಂಗಳೂರಲ್ಲಿ 50 ದಿನ ಪ್ರದರ್ಶನ ಕಂಡ ಹೆಗ್ಗಳಿಕೆ ಹೊಂದಿದೆ. ಸಿ ಕೇಂದ್ರ ಕೊಪ್ಪ ಮತ್ತು ಬಿ ಕೇಂದ್ರ ಚಿಕ್ಕಮಗಳೂರಲ್ಲಿ ಕೂಡ ಸತತವಾಗಿ 5 ವಾರ ಓಡಿದ ಕೀರ್ತಿ ಜಲಪಾತದ್ದು.
ಇದೀಗ ಆಮೇಜಾನ್ ಪ್ರೈಮ್ ಲ್ಲೂ ದಾಖಲೆ ಸಂಖ್ಯೆಯ ಸ್ಟ್ರಿಮ್ ಆಗುತ್ತಾ ಯಶಸ್ಸಿನ ಪ್ರಯಾಣ ಮುಂದುವರೆಸಿದೆ.ಈ ಯಶಸ್ಸಿಗಾಗಿ ರವೀಂದ್ರ ತುಂಬರಮನೆ ಮತ್ತು ರಮೇಶ್ ಬೇಗಾರ್ ಕನ್ನಡ ಜನತೆಗೆ ಕೃತಜ್ಞತೆ ಸಮರ್ಪಸಿದ್ದಾರೆ.ಸಂದೇಶಾತ್ಮಕ ಚಿತ್ರವೊಂದು ಸರ್ವ ವಿಧದಲ್ಲೂ ಯಶಸ್ಸು ದಾಖಲಿಸಿರುವುದು ನಿಜಕ್ಕೂ ಅಭಿನಂದನೀಯವಾಗಿದೆ.