‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರ್ ಸಂಗೀತದಲ್ಲಿ ‘ಕಟ್ಟಾಲನ್
‘ಕೆಜಿಎಫ್’, ‘ಮಾರ್ಕೋ’ ಮತ್ತು ‘ಟಾಕ್ಸಿಕ್’ ಚಿತ್ರಗಳ ಮೂಲಕ ದಕ್ಷಿಣ ಭಾರತದಾದ್ಯಂತ ಸಂಚಲನ ಮೂಡಿಸಿರುವ ಕನ್ನಡಿಗ ರವಿ ಬಸ್ರೂರ್, ಈಗ ಕ್ಯೂಬ್ಸ್ ಎಂಟರ್‍ಟೈನ್‍ಮೆಂಟ್ಸ್ ನಿರ್ಮಾಣದ ‘ಕಟ್ಟಾಲನ್’ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಮತ್ತೆ ಅಬ್ಬರಿಸಲು ಸಿದ್ಧರಾಗಿದ್ದಾರೆ.

ಈ ಮೊದಲು ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಅಧಿಕೃತವಾಗಿ ರವಿ ಬಸ್ರೂರ್ ಅವರೇ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಈ ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ ಚಿತ್ರ ಮೇ 14 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಇದು ಅತಿದೊಡ್ಡ ಬಿಡುಗಡೆಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಚಿತ್ರದಲ್ಲಿ ಆಂಟೋನಿ ವರ್ಗೀಸ್ ನಾಯಕನಾಗಿ ನಟಿಸಿದ್ದು, ತೆಲುಗಿನ ಸುನಿಲ್, ಕಬೀರ್ ದುಹಾನ್ ಸಿಂಗ್ ಮತ್ತು ಬಾಲಿವುಡ್‍ನ ಪಾರ್ಥ್ ತಿವಾರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ದುಶಾರಾ ವಿಜಯನ್ ಚಿತ್ರದ ಮೂಲಕ ಮಲಯಾಳಂಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಥೈಲ್ಯಾಂಡ್‍ನಲ್ಲಿ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ‘ಆಂಗ್-ಬಾಕ್’ ಸರಣಿಯ ಖ್ಯಾತ ಸ್ಟಂಟ್ ಮಾಸ್ಟರ್ ಕೆಚಾ ಖಾಂಫಕ್ಡೀ ಸಾಹಸ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ‘ಆಂಗ್-ಬಾಕ್’ ಖ್ಯಾತಿಯ ‘ಪಾಂಗ್’ ಎಂಬ ಆನೆಯೂ ಈ ಚಿತ್ರದಲ್ಲಿದೆ.
ಚಿತ್ರೀಕರಣ ಮುಗಿಯುವ ಮೊದಲೇ ಈ ಸಿನಿಮಾ ಮಲಯಾಳಂ ಚಿತ್ರರಂಗದ ಹಲವು ಪ್ರಿ-ರಿಲೀಸ್ ದಾಖಲೆಗಳನ್ನು ಮುರಿದಿದೆ.ಪಾಲ್ ಜಾರ್ಜ್ ಚೊಚ್ಚಲ ನಿರ್ದೇಶನದ ಈ ಚಿತ್ರವನ್ನು ಶರೀಫ್ ಮೊಹಮ್ಮದ್ ನಿರ್ಮಾಣ ಮಾಡಿದ್ದಾರೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ
ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ‘ಕಟ್ಟಾಲನ್’ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಎಲೆಕ್ಟ್ರಿಫೈಯಿಂಗ್ ಆಗಿ ಮಾಡಲಿವೆ ಎಂಬುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ

